ಹವಾಮಾನ ಮುನ್ಸೂಚನೆ: ರಾಜ್ಯಕ್ಕೆ ಮುಂಗಾರು ಪ್ರವೇಶ ಯಾವಾಗ?

Rain
Published on

ಬೆಂಗಳೂರು: ಈ ಬಾರಿ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ತಡವಾಗಿ ಆಗಮಿಸಲಿದೆ. ಜೂನ್ ಎರಡನೇ ವಾರದಲ್ಲಿ ರಾಜ್ಯಕ್ಕೆ ಮಾರುತಗಳು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದೆ.

ವಾಡಿಕೆಯಂತೆ ಜೂ. 1 ಅಥವಾ ಜೂ. 2ರಂದು ಕೇರಳಕ್ಕೆ ಆಗಮಿಸಿದ ಮಾರುತಗಳು ಮೂರ್ನಾಲ್ಕು ದಿನಗಳ ಬಳಿಕ ಕರ್ನಾಟಕಕ್ಕೆ ಪ್ರವೇಶಿಸುತ್ತವೆ. ಆದರೆ, ಮುಂಗಾರು ಪೂರ್ವದಲ್ಲಿ ಉಂಟಾಗಿದ್ದ ತೇವಾಂಶ ಕೊರತೆ, ಗಾಳಿ ವೇಗ ಇಲ್ಲದಿರುವುದು ಹಾಗೂ ಮೋಕಾ ಚಂಡಮಾರುತದಿಂದಾಗಿ ತೇವಾಂಶ ಭರಿತ ಮೋಡಗಳನ್ನು ಸೆಳೆತ ಸೇರಿ ಇತರೆ ಕಾರಣಗಳಿಂದ ವಾಡಿಕೆಯಂತೆ ಆಗಮನವಾಗಬೇಕಿದ್ದ ಮಾರುತಗಳು ಮೇಲೆ ಪರಿಣಾಮ ಬೀರಿದೆ.

ಶನಿವಾರ ಅಂಡಮಾನ್‌ನಲ್ಲಿ ಮುಂಗಾರು ಸಂಬಂಧ ಹವಾಗುಣ ಸೃಷ್ಟಿಯಾದರೂ ಮಾರುತಗಳು ದುರ್ಬಲಗೊಂಡಿವೆ. ಸದ್ಯದಲ್ಲೇ ಮಾರುತಗಳು ರೂಪುಗೊಳ್ಳಲು ಪೂರಕ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಲಿಕಲ್ಲು ಮಳೆ ಆರ್ಭಟ: ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದೆ. ಶನಿವಾರ ಕೆಲವೆಡೆ ಗುಡುಗು, ಸಿಡಿಲು ಮಳೆ ಅಬ್ಬರ ಜೋರಾಗಿತ್ತು. ದಿಢೀರ್ ಮಳೆಯಿಂದಾಗಿ ರಸ್ತೆ ಬದಿ ವ್ಯಾಪಾರಿಗಳು ಹಾಗೂ ಸವಾರರು ಪರದಾಡುವಂತಾಯಿತು. ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮೇ 21ರಿಂದ ಮೇ 25ರವರೆಗೆ ಮಳೆ ಬೀಳಲಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮೇ 23ರಿಂದ ಮುಂದಿನ ಮೂರು ದಿನ ಹಾಗೂ ಬಾಗಲಕೋಟೆ, ಬೀದರ್, ಗದಗ ಮತ್ತು ಕಲಬುರಗಿಯಲ್ಲಿ ಮೇ 23ರಂದು ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net