ದೇಶಾದ್ಯಂತ ಚುನಾವಣೆಗಳಲ್ಲಿನ ಮತಗಳ್ಳತನವನ್ನು ಸಾಬೀತುಪಡಿಸುತ್ತೇವೆ; ರಾಹುಲ್ ಗಾಂಧಿ| Rahul Gandhi

Rahul Gandhi 10
Published on

Rahul Gandhi: ದೇಶದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಸಹಾಯ ಮಾಡಲು ಚುನಾವಣಾ ಆಯೋಗ ಸಹಾಯ ಮಾಡ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಆರೋಪವನ್ನು ಮತ್ತೆ ಪುನರುಚ್ಚರಿಸಿದ್ದು, ದೇಶಾದ್ಯಂತ ಮತಗಳ್ಳತನವನ್ನು ಸಾಬೀತುಪಡಿಸುತ್ತೇವೆ ಎಂದು ಬುಧವಾರ (ಸೆ. 10) ಹೇಳಿದ್ದಾರೆ.

ಎರಡು ದಿನಗಳ ತಮ್ಮ ಸ್ವಕ್ಷೇತ್ರ ರಾಯ್​ಬರೇಲಿ ಪ್ರವಾಸದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, "ಪ್ರಮುಖ ಘೋಷಣೆ 'ಚೋರ್, ಗಡ್ಡಿ ಛೋಡ್' ಮತ್ತು ಅದು ದೇಶಾದ್ಯಂತ ಸಾಬೀತಾಗುತ್ತಿದೆ. ನಾವು ಅದನ್ನು ಹೆಚ್ಚು ಹೆಚ್ಚು ನಾಟಕೀಯ ರೀತಿಯಲ್ಲಿ ಮತ್ತೆ ಮತ್ತೆ ಸಾಬೀತುಪಡಿಸುತ್ತೇವೆ" ಎಂದು ಹೇಳಿದ್ದಾರೆ.

ಜೊತೆಗೆ ಹೋಟೆಲ್​ವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ರಾಹುಲ್, ಹಿಂದೆ ಜನರು ಚುನಾವಣಾ ಪ್ರಕ್ರಿಯೆಯಲ್ಲಿ ಇಲಿಗಳ ವಾಸನೆಯನ್ನು ಅನುಭವಿಸುತ್ತಿದ್ದರು. ಆದರೆ ಅವರ ಬಳಿ ಪುರಾವೆಗಳಿದ್ದಿಲ್ಲ. ಆದರೆ ಈಗ ನಮ್ಮ ಬಳಿ ಪುರಾವೆಗಳಿವೆ. ಮತ ಕಳ್ಳತನ ನಡೆಯುತ್ತಿದೆ. ನಾವು ಅದನ್ನು ನಿಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಒತ್ತಾಯಿಸಿದರು.

ಸಾಕ್ಷ್ಯಗಳನ್ನು ಒದಗಿಸಿ ಮತ ಕಳ್ಳತನವನ್ನು ಪ್ರತಿಭಟಿಸಿದರೂ ಚುನಾವಣಾ ಆಯೋಗವು ನಿರಂಕುಶಾಧಿಕಾರಿಯಾಗಿ ವರ್ತಿಸುತ್ತಿದೆ. ಇಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿ ನೀವು ಕಾಂಗ್ರೆಸ್‌ನ ಕೈ ಬಿಡಲಿಲ್ಲ, ಅದು ಶ್ಲಾಘನೀಯ" ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ರಾಹುಲ್ ಗಾಂಧಿಗೆ ಬಿಜೆಪಿ ಕಾರ್ಯಕರ್ತರಿಂದ ಕಪ್ಪು ಬಾವುಟದ ಪ್ರತಿಭಟನೆ ಎದುರಾಯಿತು. ಬಿಹಾರದ ಱಲಿಯಲ್ಲಿ ಪ್ರಧಾನಿ ಮೋದಿ ತಾಯಿಗೆ ನಿಂದಿಸಲಾಗಿದೆ ಎಂದು ಉತ್ತರ ಪ್ರದೇಶ ಸಚಿವ ದಿನೇಶ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.

ಸೆಪ್ಟೆಂಬರ್ 10 ಮತ್ತು 11 ರಂದು ರಾಹುಲ್ ಗಾಂಧಿ ರಾಯ್​​ಬರೇಲಿಯಲ್ಲಿಯೇ ಇರಲಿದ್ದಾರೆ. ಈ ಸಮಯದಲ್ಲಿ ಅವರು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಗುರುವಾರ ದೆಹಲಿಗೆ ತೆರಳುವ ಮೊದಲು ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲು 'ದಿಶಾ' (ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ) ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಲೋಕಸಭಾ ಚುನಾವಣೆಯ ನಂತರ ರಾಯ್ ಬರೇಲಿಗೆ ಅವರ ಆರನೇ ಭೇಟಿ ಇದು. ಅವರ ಹಿಂದಿನ ಕ್ಷೇತ್ರ ಭೇಟಿ ಏಪ್ರಿಲ್ 29-30 ರಂದು ಆಗಿತ್ತು. ಕಾಂಗ್ರೆಸ್‌ನ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ನಂತರ, ರಾಹುಲ್ ಗಾಂಧಿ ಅವರು ಪ್ರಜಾಪತಿ ಸಮುದಾಯದ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲಿದ್ದಾರೆ. ರಾಯ್ ಬರೇಲಿಯ ಗೋರಾ ಬಜಾರ್ ಛೇದಕದಲ್ಲಿ ಹೊಸದಾಗಿ ನಿರ್ಮಿಸಲಾದ ಅಶೋಕ ಸ್ತಂಭವನ್ನು ಉದ್ಘಾಟಿಸಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net