

ಪಾಟ್ನಾ: ಮಗನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಕಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬಸ್ಥರನ್ನು ಬಂಧಿಸಿದ್ದಕ್ಕಾಗಿ ಅತುಲ್ ಸುಭಾಷ್(Atul Subash) ಅವರ ತಂದೆ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಪ್ರಸ್ತುತ ಸಿಂಘಾನಿಯಾ ಕುಟುಂಬದೊಂದಿಗೆ ಇರುವ ತನ್ನ ಮೊಮ್ಮಗನನ್ನು (ಅತುಲ್ ಸುಭಾಷ್ ಅವರ ಮಗ) ಹಸ್ತಾಂತರಿಸುವಂತೆ ಅವರು ವಿನಂತಿಸಿದ್ದಾರೆ.
ಅವರ (ನಿಕಿತಾ ಸಿಂಘಾನಿಯಾ) ಕುಟುಂಬವನ್ನು ಬಂಧಿಸಿದ್ದಕ್ಕಾಗಿ ನಾನು ಪೊಲೀಸರಿಗೆ ಕೃತಜ್ಞನಾಗಿದ್ದೇನೆ. ನಮ್ಮ ಮೊಮ್ಮಗ ಬದುಕಿದ್ದಾನೋ ಅಥವಾ ಕೊಲ್ಲಲ್ಪಟ್ಟಿದ್ದಾನೋ? ನಮಗೆ ಏನೂ ತಿಳಿದಿಲ್ಲ. ನನ್ನ ಮೊಮ್ಮಗ ನಮ್ಮ ಬಳಿಗೆ ಬರಬೇಕೆಂದು ನಾನು ಬಯಸುತ್ತೇನೆ. ನಮ್ಮ ಮೊಮ್ಮಗನನ್ನು ನಮಗೆ ಒಪ್ಪಿಸುವಂತೆ ನಾವು ಪೊಲೀಸರಲ್ಲಿ ವಿನಂತಿಸುತ್ತೇವೆ ಎಂದು ಅತುಲ್ ಸುಭಾಷ್ ಅವರ ತಂದೆ ಪವನ್ ಕುಮಾರ್ ತಿಳಿಸಿದರು.
ಅಲ್ಲದೆ, ನಾನು ಅವನನ್ನು ಎಂದಿಗೂ ತಬ್ಬಿಕೊಂಡಿಲ್ಲ. ಅವನನ್ನು ವಿಡಿಯೋ ಕಾಲ್‌ನಲ್ಲಿ ನೋಡಿದ್ದೇನೆ. ಮೊಮ್ಮಗ ತನ್ನ ಮಗನಿಗಿಂತ ವಿಶೇಷ ಎಂದು ತಿಳಿಸಿದರು. ಮೊಮ್ಮಗನನ್ನು ಕರೆತರಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಪವನ್ ಅವರು ಮನವಿ ಮಾಡಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಭಾನುವಾರ(ಡಿಸೆಂಬರ್ 15) ತಿಳಿಸಿದ್ದಾರೆ. ನಿಕಿತಾ ಸಿಂಘಾನಿಯಾ ಅವರನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ಬಂಧಿಸಲಾಗಿದ್ದು, ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಬಂಧಿಸಲಾಗಿದೆ ಎಂದು ಹೇಳಿದರು.
ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅತುಲ್ ಸುಭಾಷ್ ತನ್ನ ಪತ್ನಿ, ಮಹಿಳೆಯರಿಗೆ ನೀಡಿರುವ ಹಕ್ಕುಗಳನ್ನು ಹೇಗೆ ದುರುಪಯೋಗಪಡಿಸಿಕೊಂಡಳು ಮತ್ತು ತನ್ನನ್ನು ಆತ್ಮಹತ್ಯೆಗೆ ಒತ್ತಾಯಿಸಿದಳು ಎಂಬುದನ್ನೂ ವಿಡಿಯೋದಲ್ಲಿ ಹೇಳಿದ್ದಾರೆ. ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಸಹೋದರ ವಿಕಾಸ್ ಡಿಸೆಂಬರ್ 9 ರಂದು ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.(ಏಜೆನ್ಸೀಸ್)