

ನವದೆಹಲಿ: ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಚರ್ಚಿಸಲು ಕೇಜ್ರಿವಾಲ್ ಅವರು ಅಮಿತ್ ಷಾ ಅವರೊಂದಿಗೆ ಅಪಾಯಿಂಟ್ಮೆಂಟ್ ಕೇಳಿದ್ದಾರೆ ಎನ್ನಲಾಗಿದೆ.
ದೆಹಲಿಯ ಕಾನೂನು ಸುವ್ಯವಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಇದರ ಹೊರತಾಗಿಯೂ ದೆಹಲಿಯನ್ನು ಈಗ ಅಪರಾಧ ರಾಜಧಾನಿ ಎಂದು ಕರೆಯಲಾಗುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಭಾರತದ 19 ಮೆಟ್ರೋ ನಗರಗಳ ಪೈಕಿ ದೆಹಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಮೊದಲ ಸ್ಥಾನದಲ್ಲಿದೆ.
ಸುಲಿಗೆ ಗ್ಯಾಂಗ್‌ಗಳು ದೆಹಲಿಯಲ್ಲಿ ಸಕ್ರಿಯವಾಗಿದ್ದು, ಬಹಿರಂಗವಾಗಿ ಸುಲಿಗೆ ದಂಧೆ ನಡೆಸುತ್ತಿವೆ. ದೆಹಲಿಯ ವಿಮಾನ ನಿಲ್ದಾಣಗಳು ಮತ್ತು ಶಾಲೆಗಳಿಗೆ ಇಮೇಲ್ ಮತ್ತು ಫೋನ್ ಕರೆಗಳ ಮೂಲಕ ಬಾಂಬ್ ಬೆದರಿಕೆಗಳು ಬರುತ್ತಿವೆ. ಮಾದಕವಸ್ತು ಸಂಬಂಧಿತ ಅಪರಾಧಗಳಲ್ಲಿ ಶೇಕಡಾ 350 ರಷ್ಟು ಹೆಚ್ಚಳವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಡೀ ದೆಹಲಿಯ ಜನರ ಸುರಕ್ಷತೆಯ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ. ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು ಈ ವಿಷಯವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಾದಯಾತ್ರೆ, ಸಾರ್ವಜನಿಕ ಸಭೆಗಳಲ್ಲಿ ದೆಹಲಿಯನ್ನು ಈಗ ದೇಶ ಮತ್ತು ವಿದೇಶಗಳಲ್ಲಿ ಅಪರಾಧಗಳ ರಾಜಧಾನಿ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ ಇತ್ತೀಚೆಗೆ ರಾಷ್ಟ್ರರಾಜಧಾನಿಯ ಕನಿಷ್ಠ 16 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ(Bomb Threat) ಬಂದಿತ್ತು. ಒಂದೇ ವಾರದಲ್ಲಿ ಶಾಲೆಗಳಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆಗಳು ಬಂದಿದ್ದವು.(ಏಜೆನ್ಸೀಸ್).