

ನವದೆಹಲಿ: ವಿಧಾನಸಭಾ ಚುನಾವಣೆಗೆ(Delhi Assembl Election) ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಭಾನುವಾರ(ಡಿಸೆಂಬರ್ 15) ಬಿಡುಗಡೆ ಮಾಡಿದೆ. 38 ಅಭ್ಯರ್ಥಿಗಳ ನಾಲ್ಕನೇ ಮತ್ತು ಅಂತಿಮ ಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ನವದೆಹಲಿಯಿಂದ ಹಾಗೂ ಮುಖ್ಯಮಂತ್ರಿ ಅತಿಶಿ ಮತ್ತೊಮ್ಮೆ ಕಲ್ಕಾಜಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಾಲ್ಕನೇ ಪಟ್ಟಿಯಲ್ಲಿ, ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಸತತ ನಾಲ್ಕನೇ ಬಾರಿಗೆ ಗ್ರೇಟರ್ ಕೈಲಾಶ್‌ನಿಂದ ಕಣಕ್ಕಿಳಿದಿದ್ದಾರೆ ಮತ್ತು ಸೋಮನಾಥ್ ಭಾರ್ತಿ ಅವರು ಸತತ ನಾಲ್ಕನೇ ಬಾರಿಗೆ ಮಾಳವೀಯ ನಗರದಿಂದ ಸ್ಪರ್ಧಿಸಲಿದ್ದಾರೆ. ಶೋಯೆಬ್ ಇಕ್ಬಾಲ್ ಮತೀಯ ಮಹಲ್ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ರಾಜಿಂದರ್ ನಗರದಿಂದ ದುರ್ಗೇಶ್ ಪಾಠಕ್ ಮತ್ತೆ ನಾಮನಿರ್ದೇಶನಗೊಂಡಿದ್ದಾರೆ. ಜೈಲಿನಲ್ಲಿರುವ ಆಪ್ ಶಾಸಕ ನರೇಶ್ ಬಲ್ಯಾನ್ ಅವರ ಪತ್ನಿ ಪೂಜಾ ನರೇಶ್ ಬಲ್ಯಾನ್ ಅವರಿಗೆ ಉತ್ತಮ್ ನಗರದಿಂದ ಟಿಕೆಟ್ ನೀಡಲಾಗಿದೆ.
ಆಮ್ ಆದ್ಮಿ ಪಕ್ಷವು ತನ್ನ ಹಾಲಿ ಶಾಸಕ ಮದನ್ ಲಾಲ್ ಅವರ ಟಿಕೆಟ್ ರದ್ದು ಮಾಡುವ ಮೂಲಕ ಕಸ್ತೂರ್ಬಾ ನಗರದಿಂದ ರಮೇಶ್ ಪೆಹಲ್ವಾನ್ ಅವರನ್ನು ಕಣಕ್ಕಿಳಿಸಿದೆ. ಈ ಪಟ್ಟಿಯಲ್ಲೂ ಎಎಪಿ ತನ್ನ ಇಬ್ಬರು ಹಾಲಿ ಶಾಸಕರ ಟಿಕೆಟ್ ರದ್ದು ಮಾಡುವ ಮೂಲಕ ಹೊಸ ಮುಖಗಳ ಮೇಲೆ ತನ್ನ ಪಣತೊಟ್ಟಿದೆ. ದೆಹಲಿ ಚುನಾವಣೆಗೆ ಕಾಂಗ್ರೆಸ್ ಇದುವರೆಗೆ 21 ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಿಜೆಪಿ ಇದುವರೆಗೆ ಒಬ್ಬ ಅಭ್ಯರ್ಥಿಯನ್ನು ಘೋಷಿಸಿಲ್ಲ. ದೆಹಲಿ ವಿಧಾನಸಭೆಯ ಪ್ರಸ್ತುತ ಅವಧಿ ಫೆಬ್ರವರಿ 23 ರಂದು ಮುಕ್ತಾಯಗೊಳ್ಳಲಿದ್ದು, ಅದೇ ತಿಂಗಳು ಚುನಾವಣೆ ನಡೆಯುವ ಸಾಧ್ಯತೆಯಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಕಳೆದ ಚುನಾವಣೆಯಲ್ಲಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿ 62 ಸ್ಥಾನಗಳನ್ನು ಗಳಿಸಿತ್ತು. 1998 ರಿಂದ ದೆಹಲಿಯಲ್ಲಿ ಬಿಜೆಪಿ ಅಧಿಕಾರದಿಂದ ಹೊರಗಿದೆ. 2015 ರಿಂದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸ್ವಂತ ಬಲದಲ್ಲಿ ಅಧಿಕಾರದಲ್ಲಿದೆ. ಬಿಜೆಪಿ 2015ರಲ್ಲಿ ಮೂರು ಸ್ಥಾನಗಳಿಗೆ ಮತ್ತು 2020ರಲ್ಲಿ ಕೇವಲ ಎಂಟು ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು.(ಏಜೆನ್ಸೀಸ್)