

Keerthy Suresh : ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಸ್ನೇಹಿತ ಆಂಟೋನಿ ಥಟ್ಟಿಲ್ ಅವರನ್ನು ವಿವಾಹವಾಗಿ ಕೆಲವೇ ದಿನಗಳು ಕಳೆದಿವೆ. ಡಿ.12ರಂದು ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಹಿಂದು ಸಂಪ್ರದಾಯದಂತೆ ವಿವಾಹವಾದರು. ಈ ಅದ್ಧೂರಿ ಸಮಾರಂಭದಲ್ಲಿ ಆಪ್ತರು ಮತ್ತು ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಮಾತ್ರ ಭಾಗವಹಿಸಿದ್ದರು. ಹಿಂದು ಪದ್ಧತಿ ಬಳಿಕ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು.
ಕೀರ್ತಿ ಮತ್ತು ಆಂಟೋನಿ ಒಂದೇ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು. ಹೈಸ್ಕೂಲ್ ದಿನಗಳಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಂಟೋನಿ, ಕೀರ್ತಿಗಿಂತ ಎರಡು ವರ್ಷ ದೊಡ್ಡವರು. ಕೀರ್ತಿಗೆ ಸದ್ಯ 32 ವರ್ಷ ಮತ್ತು ಆಂಟೋನಿಗೆ 34 ವರ್ಷ. ಕೊಚ್ಚಿ ಮೂಲದ ಆಂಟೋನಿ ದೋಹಾದಲ್ಲಿ ಉದ್ಯಮಿಯಾಗಿದ್ದಾರೆ. ಆಂಟೋನಿ ಕೊಚ್ಚಿ ಮೂಲದ ಆಸ್ಪರೋಸ್ ವಿಂಡೋಸ್ ಸಲ್ಯೂಷನ್ಸ್ ಎಂಬ ಕಂಪನಿಯ ಮಾಲೀಕರಾಗಿದ್ದಾರೆ. 15 ವರ್ಷಗಳ ಪ್ರೀತಿಗೆ ಕೊನೆಗೂ ಮದುವೆ ಎಂಬ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ.
ತಮ್ಮ ಪ್ರೇಮ ಸಂಬಂಧ ಹೇಗೆ ಪ್ರಾರಂಭವಾಯಿತು ಎಂಬುದರ ಕುರಿತು ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ಮಾತನಾಡಿದ್ದಾರೆ. ನಾವಿಬ್ಬರೂ ಮೊದಲ ಸಲ ಆರ್ಕುಟ್ನಲ್ಲಿ ಮಾತನಾಡತೊಡಗಿದೆವು. ನಾವು ಒಂದು ತಿಂಗಳು ಮಾತನಾಡಿದ್ದೇವೆ. ಇದಾದ ನಂತರ ನಾವಿಬ್ಬರು ರೆಸ್ಟೋರೆಂಟ್‌ನಲ್ಲಿ ಭೇಟಿಯಾದೆವು. ಆಗಲೂ ನಾನು ನನ್ನ ಕುಟುಂಬದೊಂದಿಗೆ ಇದ್ದೆ ಮತ್ತು ಆಂಟೋನಿಯೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ.
ಒಂದು ದಿನ ನಿಮಗೆ ಧೈರ್ಯವಿದ್ದರೆ ನನಗೆ ಪ್ರಪೋಸ್ ಮಾಡು ಎಂದು ಕೇಳಿದೆ. ಕೊನೆಗೆ 2010ರಲ್ಲಿ ನನ್ನನ್ನು ಪ್ರೀತಿಸುತ್ತಿರುವುದಾಗಿ ಆಂಟೋನಿ ಹೇಳಿದರು. ನನಗೂ ಆಂಟೋನಿ ಎಂದರೆ ಇಷ್ಟವಿತ್ತು. 2016ರಲ್ಲಿ ನಾವಿಬ್ಬರು ಡೇಟಿಂಗ್ ಮಾಡಲು ಪ್ರಾರಂಭಿಸಿದೆವು. ಆ ಸಮಯದಲ್ಲಿ ಆಂಟೋನಿ ನನಗೆ ನೀಡಿದ ಉಂಗುರವನ್ನು ನಾನಿನ್ನೂ ತೆಗೆದಿಲ್ಲ ಎಂದು ಕೀರ್ತಿ ಸುರೇಶ್ ಹೇಳಿದರು.
ಆರಂಭದಲ್ಲಿ ನಾವಿಬ್ಬರು ಮನೆಯಿಂದ ಓಡಿಹೋಗಲು ಯೋಚಿಸಿದ್ದೆವು. ನಾನು 12ನೇ ತರಗತಿಯಲ್ಲಿದ್ದಾಗ, ಆಂಟೋನಿ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಾವು ಆರು ವರ್ಷ ದೂರದಿಂದಲೇ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರನ್ನು ಹತ್ತಿರಕ್ಕೆ ತಂದದ್ದು ಕರೊನಾ ಅವಧಿ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೀರ್ತಿ ಅವರ ಲವ್ ಸ್ಟೋರಿ ಕುತೂಹಲ ಮೂಡಿಸಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಕೀರ್ತಿ ಸುರೇಶ್ ಮಲಯಾಳಂ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಾ ಅವರ ಪುತ್ರಿ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಕೀರ್ತಿ ಮಲಯಾಳಂ ಚಿತ್ರ ಗೀತಾಂಜಲಿ ಮೂಲಕ ನಟಿಯಾಗಿ ಬಡ್ತಿ ಪಡೆದರು. ಸದ್ಯ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ. ಪ್ರಸ್ತುತ ರಿವಾಲ್ವರ್ ರೀಟಾ ಮತ್ತು ಬೇಬಿ ಜಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)