ಕ್ರಿಕೆಟ್‌ ನಷ್ಟ ತುಂಬಲು ಭಾರತದ ಅಗತ್ಯವಿಲ್ಲ ಎಂದ ಪಿಸಿಬಿ: ಪಂದ್ಯಕ್ಕೆ ಕೋರಿ ಶೋಯೆಬ್‌ ಅಖ್ತರ್‌ ಮನವಿ ಮಾಡಿದ ಬೆನ್ನಲ್ಲೇ ಈ ಹೇಳಿಕೆ

Ehsan Mani 15 APR 20
Published on

ಇಸ್ಲಾಮಾಬಾದ್: ಕರೊನಾ ವಿರುದ್ಧ ಹೋರಾಟಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್‌ ಪಂದ್ಯವನ್ನು ಏರ್ಪಡಿಸುವ ಕುರಿತಂತೆ ಈಚೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಆಟಗಾರ ಶೋಯೆಬ್‌ ಅಖ್ತರ್‌ ಮನವಿ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ ಈಗ, ಪಾಕಿಸ್ತಾನದ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ ಎಹ್ಸಾನ್‌ ಮಾನಿ ಇನ್ನೊಂದು ಹೇಳಿಕೆ ನೀಡಿ, ಪಾಕಿಸ್ತಾನ ಕ್ರಿಕೆಟ್‌ ನಷ್ಟ ಅನುಭವಿಸುತ್ತಿದ್ದರೂ, ಅದರಿಂದ ಹೊರಬರಲು ತಾವು ಯಾವುದೇ ರೀತಿಯಲ್ಲಿಯೂ ಭಾರತವನ್ನು ಅವಲಂಬಿಸಿಲ್ಲ ಎಂದಿದ್ದಾರೆ!

’ನಾವು ನಷ್ಟದಲ್ಲಿ ಇರುವುದು ನಿಜ. ಹಾಗೆಂದು ಸಹಾಯ ಪಡೆಯುವ ಪಟ್ಟಿಯಲ್ಲಿ ಭಾರತವು ಯಾವುದೇ ರೀತಿಯಲ್ಲಿ ನಮ್ಮ ಆಲೋಚನೆಯಲ್ಲಿಯೂ ಇಲ್ಲ, ಆ ಯೋಜನೆಯೂ ನಮಗಿಲ್ಲ. ಅವರಿಲ್ಲದೇ ನಾವು ಬದುಕಲು ಶಕ್ಯರಾಗಿದ್ದೇವೆ. ಇದಕ್ಕಾಗಿ ಅದರ (ಭಾರತದ) ನೆರವಿನ ಅಗತ್ಯ ನಮಗಿಲ್ಲ’ ಎಂದು ಮಾನಿ ಹೇಳಿದ್ದಾರೆ. ಈ ಕುರಿತು ಪಿಸಿಬಿಯು ಪ್ರಕಟಿಸಿದೆ.

"ಭಾರತಕ್ಕೆ ನಮ್ಮ ಜತೆ ಆಡಲು ಇಷ್ಟವಿಲ್ಲ ಎಂದಾದರೆ ಅದನ್ನು ಬಿಟ್ಟು ನಾವು ಆಡುತ್ತೇವೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸುವುದು ಸ್ಪಷ್ಟವಾಗಿದೆ. ಭಾರತವು ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿತ್ತು. ಆದರೆ ಇದೀಗ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದು, ಭವಿಷ್ಯದಲ್ಲಿ ಈ ಎರಡೂ ದೇಶಗಳು ದ್ವಿಪಕ್ಷೀಯ ಸರಣಿಯಲ್ಲಿಯೂ ಆಡುವುದು ಅನುಮಾನ. ಆದರೆ ನಾವು ಎಂದಿಗೂ ಕ್ರಿಕೆಟ್‌ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡಲು ಬಯಸುವವರು’ ಎಂದಿದ್ದಾರೆ.

2008ರಲ್ಲಿ ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತವು ದ್ವಿಪಕ್ಷೀಯ ಸರಣಿಯಲ್ಲಿ ಆಡುತ್ತಿಲ್ಲ. ಪಾಕ್‌ ಮತ್ತು ಭಾರತದ ತಂಡಗಳು ಐಸಿಸಿ ಟೂರ್ನಿ ಮತ್ತು ಏಷ್ಯಾಕಪ್‌ನಲ್ಲಿ ಮಾತ್ರ ಪಂದ್ಯವಾಡುತ್ತಿವೆ.  ಕರೊನಾದಿಂದಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಪಿಸಿಗೆ ನಷ್ಟ ಉಂಟಾಗಿದೆ. ( ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net