

ಪುತ್ತೂರು ಗ್ರಾಮಾಂತರ: ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದಕ್ಕೆ, ನಾವಿಂದು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆ, ಸ್ಥಾನಮಾನ ಪಡೆಯುವುದಕ್ಕೆ ಪಕ್ಷದ ಕಾರ್ಯಕರ್ತರ ಬೆವರಿನ ಫಲವೇ ಕಾರಣ. ಕಾರ್ಯಕರ್ತರಿಗೆ ಗೌರವ ನೀಡುವ ಜತೆಗೆ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಮಾ.29ರಂದು ರಾತ್ರಿ ನಡೆದ ನರಿಮೊಗರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ-ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ ಪುತ್ತೂರಿನಲ್ಲಿ ಹಿಂದೆಂದೂ ಆಗದ ಹಲವಾರು ಕಾಮಗಾರಿ ನಡೆಯುತ್ತಿದ್ದು, ಬೃಹತ್ ಯೋಜನೆ ಕ್ಷೇತ್ರಕ್ಕೆ ಬಂದಿದೆ. ಇವೆಲ್ಲವನ್ನೂ ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ಮಾತನಾಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ, ಪೂರ್ಣೇಶ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣ ನರಿಮೊಗರು, ಮಾಧ್ಯಮ ವಕ್ತಾರ ರವೀಂದ್ರ ರೈ ನೆಕ್ಕಿಲು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಸಾಮಾಜಿಕ ಜಾಲತಾಣದ ಸಂಚಾಲಕ ಸುಪ್ರೀತ್ ಕಣ್ಣಾರಾಯ, ತಾಪಂ ಮಾಜಿ ಸದಸ್ಯ ಪರಮೇಶ್ವರ್ ಭಂಡಾರಿ, ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕಾಂಗ್ರೆಸ್ ಮಹಿಳಾ ಘಟಕ ನರಿಮೊಗರು ವಲಯಾಧ್ಯಕ್ಷೆ ಹರಿಣಾಕ್ಷಿ ಬೊಳ್ಳಡ್ಕ, ನರಿಮೊಗರು ವಲಯ ಕಾಂಗ್ರೆಸ್ ಉಪಾಧ್ಯಕ್ಷ ಇಲಿಯಾಸ್ ಮುಕ್ವೆ, ಸುಮಾ ಶಿವರಾಮ್ ಪಜಿರೋಡಿ ಮತ್ತಿತರರು ಉಪಸ್ಥಿತರಿದ್ದರು. ನರಿಮೊಗರು ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಝೀಝ್ ನೆರಿಗೇರಿ ವಂದಿಸಿದರು. ರಫೀಕ್ ಮಣಿಯ ಕಾರ್ಯಕ್ರಮ ನಿರೂಪಿಸಿದರು.
ಗ್ರಾಮಸ್ಥರಿಂದ ಶಾಸಕರಿಗೆ ಸನ್ಮಾನ
ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವಲ್ಲಿ, ಮುಂಡೂರು ಗ್ರಾಮದಲ್ಲಿ ತಾಲೂಕು ಕ್ರೀಡಾಂಗಣ ಮತ್ತು ಆರ್‌ಟಿಒ ಕೇಂದ್ರ ಸ್ಥಾಪನೆ ಯೋಜನೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದ ಶಾಸಕ ಅಶೋಕ್‌ಕುಮಾರ್ ರೈ ಅವರನ್ನು ಗ್ರಾಮಸ್ಥರ ಪರವಾಗಿ ವಲಯ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.