

ಬದಿಯಡ್ಕ: ಪ್ರಾಪಂಚಿಕ ಸುಖ ಭೋಗಗಳಿಗಿಂತ ದೇವರ ಅನುಗ್ರಹ ಪ್ರಾಪ್ತಿಯ ನೆಮ್ಮದಿ ಹಿರಿದಾದುದು. ನಮ್ಮ ಎಲ್ಲ ನೋವು-ನಲಿವುಗಳ ನಿಯಂತ್ರಕ ಶಕ್ತಿ ಭಗವಂತ. ಈ ಹಿನ್ನೆಲೆಯಲ್ಲಿ ದೇವರ ಅನುಗ್ರಹ ಪ್ರಾಪ್ತಿಗೆ ನಿರಂತರ ಕರ್ಮಾನುಷ್ಠರಾಗಿ ಶಕ್ತ್ಯಾನುಸಾರ ಸೇವೆ ಸಲ್ಲಿಸುವುದು ಅಗತ್ಯ ಎಂದು ದೇಲಂಪಾಡಿ ಗಣೇಶ ತಂತ್ರಿ ಅನುಗ್ರಹ ಸಂದೇಶದಲ್ಲಿ ತಿಳಿಸಿದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಅಂಗವಾಗಿ ಭಾನುವಾರ ಬೆಳಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎಸ್.ಜೆ.ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ವಕೀಲ ಶಂಭು ಶರ್ಮ, ವೈದಿಕ ಸಮಿತಿ ಸಂಚಾಲಕ ಯು.ಬಾಲಕೃಷ್ಣ ಉಳಿಯ, ಸಮಿತಿ ಸದಸ್ಯೆ ಎಸ್.ಎನ್.ರಾಮ ಶೆಟ್ಟಿ ಸಿರಿಬಾಗಿಲು, ಕ್ಷತ್ರಿಯ ಕೋಟೆಯಾರ್ ಸಂಘ ಜಿಲ್ಲಾಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ರಘುರಾಮ ಶೆಟ್ಟಿ, ಶಿವಶಂಕರ ನೆಕ್ರಾಜೆ, ಸುರೇಶ್ ಕಣ್ಣೂರು ಮಾತನಾಡಿದರು. ಸತ್ಯನಾರಾಯಣ ತಂತ್ರಿ ಸ್ವಾಗತಿಸಿದರು. ಯೋಗೀಶ್ ನಾಯ್ಕ ವಂದಿಸಿದರು. ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಭಾನುವಾರ ಬೆಳಗ್ಗೆ ಶ್ರೀಮದನಂತೇಶ್ವರ ದೇವರ ಪ್ರಸಾದಕ್ಕೆ ಶಿಖರ ಪ್ರತಿಷ್ಠಾಪನೆ, ಶಿಖರ ಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಠಾಪನೆ ತಂತ್ರಿ ನೇತೃತ್ವದಲ್ಲಿ ಋತ್ವಿಜರಿಂದ ನಡೆಯಿತು. ಜೀವ ಕುಂಭಾಭಿಷೇಕ, ಹಂಸರೂಪಿ ಸದಾಶಿವ, ಶ್ರೀವಿಶ್ವನಾಥ ಉಪದೇವತಾ ಲಿಂಗ ಪ್ರತಿಷ್ಠಾಪನೆ, ಪ್ರತಿಷ್ಠಾಪನಾ ಕಲಶಾಭಿಷೇಕ, ಸಂಜೆ ಶ್ರೀದುರ್ಗಾ, ಸುಬ್ರಹ್ಮಣ್ಯ, ಶಾಸ್ತರಿಗೆ ಬಿಂಬಾಧಿವಾಸ, ವೀರಭದ್ರ ಅಧಿವಾಸ, ಅಧಿವಾಸ ಹೋಮ, ಹಂಸರೂಪೀ ಸದಾಶಿವ, ಶ್ರೀವಿಶ್ವನಾಥ ಸನ್ನಿಧಿಯಲ್ಲಿ ಕಲಶಾಧಿವಾಸ ನಡೆಯಿತು.