

ಸುಳ್ಯ: ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ಶ್ರೀ ಭಗವತಿಯ ದೊಡ್ಡಮುಡಿ ಉತ್ಸವ ನಡೆಯಿತು. ದೊಡ್ಡಮುಡಿಯ ವೈಭವ ಕಣ್ತುಂಬಿಕೊಳ್ಳಲು ಕೇರಳ, ಕರ್ನಾಟಕದಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರಿಗೆ ಭಗವತಿ ದೇವಿ ಅನುಗ್ರಹಿಸಿತು.
ಏ.1ರಂದು ಬೆಳಗ್ಗೆ 6ರಿಂದ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ, ಬೇಟೆ ಕರಿಮಗನ್, ಈಶ್ವರನ್ ದೈವಗಳ ಕೋಲಗಳು ನಡೆದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಮಧ್ಯಾಹ್ನ ಗಂಟೆ 5ಕ್ಕೆ ಶ್ರೀ ಭಗವತಿ ದೊಡ್ಡಮುಡಿಯ ದರ್ಶನವಾಯಿತು. ಬಳಿಕ ಪ್ರಸಾದ ವಿತರಿಸಲಾಯಿತು.
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.25ರಿಂದ ಕಾಲಾವಧಿ ಜಾತ್ರೋತ್ಸವ ಪ್ರಾರಂಭಗೊಂಡಿದ್ದು, 10ರವರೆಗೆ ನಡೆಯಲಿದೆ. ಪ್ರತಿವರ್ಷ 1ರಂದು ನಡೆಯುವ ಭಗವತಿಯ ದೊಡ್ಡಮುಡಿ ಇಲ್ಲಿನ ಪ್ರಮುಖ ಆಕರ್ಷಣೆ.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ, ದೇವತಕ್ಕರಾದ ರಾಜಗೋಪಾಲ ರಾಮಕಜೆ, ತಕ್ಕ ಮುಖ್ಯಸ್ಥರು, ಆಡಳಿತ ಸಮಿತಿ ಸದಸ್ಯರು, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಮುಖಂಡರು, ಅರ್ಚಕ ವೃಂದ ಮತ್ತು ಸಿಬ್ಬಂದಿ ಹಾಗೂ ಭಗವದ್ಭಕ್ತರು ಇದ್ದರು.
30 ಅಡಿ ಎತ್ತರದ ಮುಡಿ
ಪೆರಾಜೆಯಲ್ಲಿ ಮೂಲದೇವರಾಗಿ ಧರ್ಮಶಾಸ್ತಾರನ ಆರಾಧನೆ ಮಾಡಲಾಗುತ್ತದೆ. ಪಾರ್ವತಿಯ ರೂಪವಾಗಿ ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ. ಸುಮಾರು 30 ಅಡಿಗಳಿಗಿಂತಲೂ ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ ಎತ್ತರವಾದ ಮತ್ತು ತೀರಾ ಅಪರೂಪವಾದ ಭಗವತಿಯ ಮುಡಿ ಇಲ್ಲಿನ ವಿಶೇಷತೆ. 30 ಅಡಿ ಎತ್ತರದ ತೆಳ್ಳಗೆ ಸಿಗಿದ ಬಿದಿರಿನ ಸಲಾಕೆಗಳಿಂದ ಗೋಪುರಾಕಾರ ನಿರ್ಮಿಸಿ, ಅದಕ್ಕೆ ಕೆಂಪು ಬಣ್ಣದ ಬಟ್ಟೆ ಸುತ್ತಿ, ಹೂವುಗಳಿಂದ ಸಿಂಗರಿಸಿದ ಮುಡಿಯ ವೈಭವವನ್ನು ಭಕ್ತರು ಕಣ್ತುಂಬಿಕೊಂಡರು.