ವಿದೇಶಿಗರಲ್ಲಿರುವ ಯೋಗದ ಅರಿವು ನಮಗಿಲ್ಲ

Ull_Yoga
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಭಾರತೀಯ ಚಿಕಿತ್ಸಾ ಪದ್ಧತಿಯಾಗಿರುವ ನ್ಯಾಚುರೋಪಥಿ ಮತ್ತು ಯೋಗದ ಬಗ್ಗೆ ವಿದೇಶಿಗರಲ್ಲಿರುವ ಅರಿವು ನಮಗಿಲ್ಲದಿರುವುದು ದುರಂತ ಎಂದು ತಲಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಖೇದ ವ್ಯಕ್ತಪಡಿಸಿದರು.

ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಮತ್ತು ತಲಪಾಡಿ ದೇವಿನಗರ ಶಾರದಾ ಯೋಗ, ನ್ಯಾಚುರೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಎಂಟು ದಿನ ನಡೆಯಲಿರುವ ವಿಶೇಷ ಶಿಬಿರಕ್ಕೆ ಭಾನುವಾರ ದೇವಿಪುರ ಅವಿನಾಶಿ ಭಜನಾ ಮಂದಿರದಲ್ಲಿ ಚಾಲನೆ ನೀಡಿ ಮಾತನಾಡಿದರು.

ಯೋಗ ಮತ್ತು ನ್ಯಾಚುರೋಪಥಿ ಯಾವುದೇ ಅಡ್ಡ ಪರಿಣಾಮ ಇಲ್ಲದ, ಮಣ್ಣು ಮತ್ತು ಇತರ ಚಿಕಿತ್ಸೆ ಪ್ರಾಕೃತಿಕ ರೂಪದ ವಿಶೇಷ ಚಿಕಿತ್ಸಾ ಪದ್ಧತಿ. ಈ ಚಿಕಿತ್ಸೆಗಾಗಿ ದೇಶ, ವಿದೇಶಗಳಿಂದ ಜನ ನಮ್ಮಲ್ಲಿಗೆ ಬರುತ್ತಿದ್ದಾರೆ. ಆದರೆ ನಮಗೆ ಅದರ ಮಹತ್ವ ಗೊತ್ತಿಲ್ಲ. ಈ ಹಿನ್ನೆಲೆ ಒಂದು ವಾರ ನಡೆಯುವ ಶಿಬಿರದ ಪ್ರಯೋಜನ ಪ್ರತಿಯೊಬ್ಬರೂ ಪಡೆಯಬೇಕು ಎಂದರು.

ಶಾರದಾ ಯೋಗ, ನ್ಯಾಚುರೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ.ನಂದೀಶ್ ಎನ್.ಎಸ್. ಮಾತನಾಡಿ, ಯೋಗ ಮತ್ತು ನ್ಯಾಚುರೋಪಥಿ ಔಷಧ ರಹಿತ ಚಿಕಿತ್ಸೆ. ನಗರದಲ್ಲಿ ವಾಸವಿರುವವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಎಂಟು ದಿನಗಳಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಅವಿನಾಶಿ ಮಹಾದೇವ ಭಜನಾ ಮಂದಿರದ ಗೌರವಾಧ್ಯಕ್ಷ ಹರಿನಾಥ ಪಿಲಿಕೂರು, ಅಧ್ಯಕ್ಷ ಯುವರಾಜ್ ದೇವಿನಗರ, ಪ್ರಧಾನ ಕಾರ್ಯದರ್ಶಿ ಶರಣ್ ಕುಲಾಲ್, ಎನ್ನೆಸ್ಸೆಸ್ ಶಿಬಿರಾಧಿಕಾರಿ ಡಾ.ಅನೂಪ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೇಜಸ್ವಿನಿ ಎಂ.ಡಿ. ವಂದಿಸಿದರು. ಯಾದವಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net