More

    ಕಲ್ಲಂಗಡಿಗಿಲ್ಲ ಸಮರ್ಪಕ ಬೆಲೆ

    ಕಲ್ಲಂಗಡಿ ಬೆಳೆ ಈ ಬಾರಿ ಉತ್ತಮವಾಗಿ ಬಂದಿದ್ದರೂ ಉತ್ತಮ ಬೆಲೆ ಸಿಗದೆ ರೈತರು ಕಷ್ಟ ಅನುಭವಿಸುವಂತಾಗಿದೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.

    ವಿಜಯವಾಣಿ ಸುದ್ದಿಜಾಲ ಕೋಟ

    ಕೋಟ ಹೋಬಳಿ ಪ್ರದೇಶದಲ್ಲಿ ಬೆಳೆಪುವ ಮಿಶ್ರ ಬೆಳೆಗಳಲ್ಲಿ ಕಲ್ಲಂಗಡಿ ಬೆಳೆಯೂ ಒಂದು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಕಲ್ಲಂಗಡಿ ಹಣ್ಣು ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ರಫ್ತು ಆಗದೆ ಸ್ಥಳೀಯವಾಗಿ ಕಡಿಮೆ ಬೆಲೆಗೆ ಸ್ಥಳೀಯವಾಗಿ ಮಾರಾಟವಾಗಿ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದ್ದರೂ ಕಡಿಮೆ ಬೆಲೆಗೆ ದಲ್ಲಾಳಿಗಳು ಖರೀದಿ ಮಾಡುತ್ತಿದ್ದಾರೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಬೆಳೆದ ಫಸಲಿಗೆ ಉತ್ತಮ ದರ ಸಿಗದೆ ರೈತರು ಕೊರಗುವಂತಾಗಿದೆ.

    ಕೋಟ ಮಣೂರಿನ ಪ್ರಗತಿಪರ ರೈತ ಎಂ.ಜಯರಾಮ ಶೆಟ್ಟಿ ಈ ವರ್ಷವೂ ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ.ಒಂದೂವರೆ ಎಕರೆ ಜಮೀನಿನಲ್ಲಿ 20 ಟನ್‌ಗೂ ಅಧಿಕ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ, ಸ್ಥಳೀಯವಾಗಿ ಕೇವಲ 10ರಿಂದ 12ಕ್ಕೆ ರೂ.ಮಾರಾಟ ಮಾಡುತ್ತಿದ್ದೇವೆ. ಭತ್ತ, ದ್ವಿದಳ ಧಾನ್ಯಕ್ಕಿಂತಲೂ ಲಾಭದಾಯಕ ಬೆಳೆಯಾಗಿರುವ ಕಲ್ಲಂಗಡಿ ಹಣ್ಣಿಗೆ ಉತ್ತಮ ಧಾರಣೆ ಸಿಗಬೇಕು ಎಂದು ಹೇಳುತ್ತಾರೆ ಜಯರಾಮ ಶೆಟ್ಟಿ.

    ಸಾವಯವ ಕೃಷಿಯತ್ತ ಚಿತ್ತ

    ಕಲ್ಲಂಗಡಿ ಹಣ್ಣಿನ ಕೃಷಿಯಲ್ಲಿ ರೈತರು ಸಾವಯವ ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.ಇದರಿಂದ ಅತ್ಯಧಿಕ ಇಳುವರಿ ಸಹ ಪಡೆಯುತ್ತಾರೆ. ಹಟ್ಟಿ ಗೊಬ್ಬರ, ಕಹಿ ಬೇವಿನ ಹಿಂಡಿ, ಸಾವಯವ ಎಣ್ಣೆ ಸಿಂಪಡಿಸಿ ಆರೋಗ್ಯಯುತ ಕಲ್ಲಂಗಡಿ ಹಣೂ ಬೆಳೆದು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ರೀತಿ ಬೆಳೆದ ಬೆಳೆಗೆ ರೋಗಬಾಧೆ ಇರುವುದಿಲ್ಲ. ರೈತರು ಸಾವಯವದತ್ತ ಹೆಚ್ಚು ಗಮನ ಹರಿಸಬೇಕು.ಎಲ್ಲರೂ ಸಮಗ್ರ ಕೃಷಿ ನೀತಿ ಅನುಸರಿಸಲು ಸಲಹೆ ನೀಡುತ್ತಿದ್ದಾರೆ ಜಯರಾಮ ಎಟ್ಟಿ. ಇದರಿಂದ ಕಾಲಕ್ಕನುಗುಣವಾಗಿ ಆಯಾ ಬೆಳೆಗಳಿಗೆ ಸಮಗ್ರ ದರ ಸಿಗಬಹುದು ಎನ್ನುವುದು ಅವರ ನಂಬಿಕೆ.

    ಕಲ್ಲಂಗಡಿ ಸಿಗಲಿ ಸಬ್ಸಿಡಿ

    ಕೇವಲ 2 ತಿಂಗಳಲ್ಲಿ ಇಳುವರಿ ನೀಡಬಲ್ಲ ಕಲ್ಲಂಗಡಿ ಬೆಳೆಗೆ ತೋಟಗಾರಿಕಾ ಇಲಾಖೆ ಹನಿ ನೀರಾವರಿಗೆ ಸಬ್ಸಿಡಿ ನೀಡುತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ತುಂಡು ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆಯುತ್ತಿರುವ ಕಾರಣ ಇಲಾಖೆ ಪ್ರೋತ್ಸಾಹ ನೀಡುತ್ತಿಲ್ಲ. ಸರ್ಕಾರ ಕರಾವಳಿಯ ತುಂಡು ಭೂಮಿ ಹೊಂದಿರುವ ರೈತರಿಗೂ ಈ ಸೌಲಭ್ಯ ನೀಡಲು ಪ್ರಯತ್ನಿಸಬೇಕು ಎನ್ನುವುದು ರೈತರ ಆಗ್ರಹ. ಸಾಕಷ್ಟು ನೀರಿನ ಅಂಶ, ಪೌಷ್ಟಿಕಾಂಶವುಳ್ಳ ಈ ಹಣ್ಣಿಗೆ ಬೇಸಿಗೆಯಲ್ಲಿ ಸಾಕಷ್ಟು ಬೇಡಿಕೆ ಇದೆಯಾದರೂ ಸ್ಥಳಿಯವಾಗಿ ಉತ್ತಮ ಧಾರಣೆ ಸಿಗಬೇಕು ಎನ್ನುವುದು ರೈತರ ಆಗ್ರಹ.

    ಶೇಂಗಾ ಬೆಳೆಗೆ ಹೇಗೆ ಈ ಕರಾವಳಿ ಮಣ್ಣು ಪ್ರಸಿದ್ಧಿ ಪಡೆದಿದೆಯೋ ಹಾಗೇ ಕಲ್ಲಂಗಡಿ ಹಣ್ಣಿನಿಂದಲೂ ಆದಾಯ ದೊರೆಯಬಹುದು. ಆದರೆ ಕೃಷಿಕನಿಗೆ ಸಮರ್ಪಕ ದರ ಸಿಗದಿರುವುದು ಶೋಚನೀಯ. ರೈತ ಬೆಳೆದ ಯಾವುದೇ ಫಸಲಾದರೂ ಅದಕ್ಕೆ ಒಳ್ಳೆಯ ದರ ಸಿಕ್ಕಿದರೆ ರೈತ ಕೃಷಿಯಿಂದ ಹಿಮ್ಮುಖವಾಗುವುದಿಲ್ಲ.
    -ಎಂ. ಜಯರಾಮ ಶೆಟ್ಟಿ , ರೈತಧ್ವನಿ ಸಂಘ ಕೋಟ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts