More

    ಬಾವಿ ನೀರು ಕಲುಷಿತ

    ಹೇಮನಾಥ್ ಪಡುಬಿದ್ರಿ

    ಹೆಚ್ಚಾಗುತ್ತಿರುವ ತಾಪಮಾನದಿಂದ ಅಂತರ್ಜಲ ಪಾತಾಳಕ್ಕಿಳಿಯುತ್ತಿದ್ದು, ಎಲ್ಲೆಡೆ ನೀರಿಗಾಗಿ ಪರದಾಡುವ ಸ್ಥಿತಿ ಆರಂಭವಾಗಿದೆ. ಕಾಪು ತಾಲೂಕಿನ ಶಾಂಭವಿ ನದಿ ಪಾತ್ರದ ಮೂಡುಪಲಿಮಾರಿನಲ್ಲಿ ಅಂತರ್ಜಲ ಕುಸಿದು ಬಾವಿ ನೀರೆಲ್ಲ ಕಲುಷಿತಗೊಂಡು ಗ್ರಾಮಸ್ಥರು ಗ್ರಾಪಂ ನಲ್ಲಿ ನೀರನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ತಲೆದೋರಿದೆ.

    ನೂರಾರು ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆ ಮೂಲಕ ಪಲಿಮಾರಿನಲ್ಲಿ ಶಾಂಭವಿ ನದಿಗೆ ನಿರ್ಮಿಸಿರುವ ಉಪ್ಪುನೀರು ತಡೆ ಅಣೆಕಟ್ಟೆಯಲ್ಲಿ ಮಳೆಯಾಗದ ಪರಿಣಾಮ ನೀರಿನ ಮಟ್ಟ ಇಳಿಕೆಯಾಗಿದೆ. ಅದು ಈ ಭಾಗದ ಬಾವಿಗಳ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ. ಅಂತರ್ಜಲ ಮಟ್ಟ ಇಳಿಕೆ ಪರಿಣಾಮ ಅಣೆಕಟ್ಟೆ ಪ್ರದೇಶದ ಮೂಡು ಪಲಿಮಾರು ಭಾಗದ ಹೆಚ್ಚಿನ ಬಾವಿಗಳ ನೀರು ಕಲುಷಿತಗೊಂಡು ಗೃಹ ಬಳಕೆ ನೀರಿಗೆ ತತ್ವಾರ ತಂದೊಡ್ಡಿದೆ. ಇಲ್ಲಿನ ಬಾವಿಗಳ ನೀರು ಎಣ್ಣೆ ಮಿಶ್ರಿತವಾಗಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಬಳಕೆಗೆ ಅಯೋಗ್ಯವಾಗಿ ಮಾರ್ಪಟ್ಟಿದೆ. ಗ್ರಾಮಸ್ಥರು ಗ್ರಾಪಂನ ನಲ್ಲಿ ನೀರನ್ನೆ ಅವಲಂಬಿಸುವ ಪರಿಸ್ಥಿತಿ ಎದುರಾಗಿದೆ.

    ಹೆಚ್ಚುತ್ತಿದೆ ಬೇಡಿಕೆ

    ಗ್ರಾಮಸ್ಥರ ಬೇಡಿಕೆಗನುಗುಣವಾಗಿ ಮನೆ ಮನೆಗೆ ನಿರಂತರ ಶುದ್ಧ ಕುಡಿಯುವ ನೀರು ಪೂರೈಸಲು ಗ್ರಾಪಂ ಕೂಡಾ ಉತ್ತಮವಾಗಿ ಸ್ಪಂದಿಸುತ್ತಿದೆ. ನಂದಿಕೂರು ಹಾಗೂ ಪಲಿಮಾರು ಕಂದಾಯ ಗ್ರಾಮಗಳನ್ನೊಂದಿರುವ ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ 3 ತೆರೆದ ಬಾವಿ ಹಾಗೂ 4 ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದ ಹೊಯಿಗೆ 75 ಸಾವಿರ ಲೀಟರ್, ಪಲಿಮಾರು 50 ಸಾವಿರ, ಮೂಡು ಪಲಿಮಾರು 75ಸಾವಿರ, ಅವರಾಲು ಮಟ್ಟು 75 ಸಾವಿರ, ಅಡ್ವೆ ಪರಿಶಿಷ್ಟ ಪಂಗಡ ಕಾಲನಿ 75 ಸಾವಿರ, ನಂದಿಕೂರು ಅಂಗನವಾಡಿ ಬಳಿ 75 ಸಾವಿರ, ಬೆಳ್ಳಿಬೆಟ್ಟು 75 ಸಾವಿರ, ಆನಡ್ಕ 25 ಸಾವಿರ, ನಂದಿಕೂರು 50 ಸಾವಿರ ಲೀಟರ್ ಸಂಗ್ರಹಣಾ ಸಾಮಥ್ಯದ ಟ್ಯಾಂಕ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಪ್ರತಿ ವರ್ಷ ನೀರಿನ ಬೇಡಿಕೆ ಹೆಚ್ಚಾಗುತ್ತಿದ್ದು, ಜಲಜೀವನ್ ಮಿಷನ್ ಯೋಜನೆಯಡಿ 2021-22ನೇ ಸಾಲಿನಲ್ಲಿ 367 ಹಾಗೂ 2022-23ನೇ ಸಾಲಿನಲ್ಲಿ 254 ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ.

    Baavi 2

    ಬಾವಿ ಕಲುಷಿತ

    ಜಲಜೀವನ್ ಯೋಜನೆಯಡಿ ನದಿ ಪಾತ್ರದಲ್ಲಿ ಬಾವಿ ನಿರ್ಮಿಸಿ ನೀರು ಪೂರೈಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಅಂತರ್ಜಲ ಕುಸಿತದ ಪರಿಣಾಮ ಬಾವಿ ನೀರು ಕಲುಷಿತಗೊಂಡು ಈ ವರ್ಷದಲ್ಲಿ ನೀರು ಸರಬರಾಜು ಮಾಡಲಾಗದ ಪರಿಸ್ಥಿತಿ ಎದುರಾಗಿದೆ. ಅದರೂ ಗ್ರಾಮಸ್ಥರಿಗೆ ನೀರಿಗೆ ತೊಂದರೆಯಾಗದಂತೆ ಇದ್ದ ಕೊಳವೆ ಬಾವಿಗಳ ನೀರನ್ನು ಬಳಸಿ ಅಗತ್ಯವಿರುವೆಡೆ ದಿನ ಬಿಟ್ಟು ದಿನ ನೀರು ಸರಬರಾಜಿಗೆ ಕ್ರಮವಹಿಸಲಾಗುತ್ತಿದೆ. ಅದೂ ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್ ನೀರು ಪೂರೈಕೆಗೂ ಕ್ರಮವಹಿಸಿರುವುದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.

    ಇಷ್ಟು ವರ್ಷದಲ್ಲಿ ಇಂತಹ ಸಮಸ್ಯೆ ಉಂಟಾಗಿರಲಿಲ್ಲ. ಅಂತರ್ಜಲ ಕುಸಿತದಿಂದ ಸುತ್ತಮುತ್ತಲಿನ ಬಾವಿಗಳ ನೀರೆಲ್ಲ ಕಲುಷಿತಗೊಂಡು ಸಮಸ್ಯೆಯಾಗಿದೆ. ಬಾವಿ ನೀರು ಒಗರಿನಿಂದ ಕೂಡಿದ್ದು, ಕೆಂಪು ಬಣ್ಣಕ್ಕೆ ತಿರುಗಿದೆ. ಬಾವಿಯಿದ್ದರೂ ಗೃಹ ಬಳಕೆಗಾಗಿ ಗ್ರಾಪಂ ನೀರು ಪೂರೈಕೆಯನ್ನೇ ಅವಲಂಬಿಸುವಂತಾಗಿದೆ.
    -ಮೋನಪ್ಪ ದೇವಾಡಿಗ, ಮೂಡು ಪಲಿಮಾರು

    ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ಅಣೆಕಟ್ಟೆಯಿದ್ದು, ನೀರಿನ ಮೂಲಗಳಿಗೆ ಯಾವುದೇ ಕೊರತೆಯಿಲ್ಲ, ಅಂತರ್ಜಲ ಕುಸಿತದಿಂದ ಬಾವಿ ನೀರು ಕಲುಷಿತಗೊಂಡಿದೆ. ನೀರಿನ ಅಗತ್ಯವಿರುವೆಡೆ ಬದಲಿ ವ್ಯವಸ್ಥೆ ಕಲ್ಪಿಸಿ ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಜೆಜೆಎಂ ಯೋಜನೆ ಬಾವಿ, ಪಂಪ್ ಸಹಿತ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಂತರ್ಜಲ ಕುಸಿತದ ಪರಿಣಾಮ ಈ ಬಾರಿ ನೀರು ಸರಬರಾಜಿಗೆ ಧಕ್ಕೆಯಾಗಿದೆ. ಮುಂದಿನ ವರ್ಷದಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
    -ರಾಯೇಶ್ ಪೈ, ಪಲಿಮಾರು ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts