More

    ಭವಿಷ್ಯದಲ್ಲಿ ಕುಡ್ಲಕ್ಕೆ ನೀರಿನ ಬರ

    ಭವಿಷ್ಯದಲ್ಲಿ ಮಂಗಳೂರಿಗೆ ನೀರಿನ ಬರ ಬಹುತೇಕ ಖಚಿತ ಎಂದು ವ್ಯಾಖ್ಯಾನಿಸಲಾಗುತ್ತಿದ್ದು, ಈ ಬಗ್ಗೆ ಸಮಗ್ರ ವರದಿ ಇಲ್ಲಿದೆ. – ಶ್ರವಣ್‌ಕುಮಾರ್ ನಾಳ ಮಂಗಳೂರು


    ಮಂಗಳೂರು ನಗರಕ್ಕೆ ನೀರು ಪೂರೈಸಲೆಂದೇ ಇರುವ ತುಂಬೆ ಜಲಾಶಯದಲ್ಲಿ ಜಲಮಟ್ಟ ಕುಸಿದಾಗ ಎಎಂಆರ್ ಡ್ಯಾಂನ ನೀರು ಅವಲಂಬಿಸುವುದು ರೂಢಿ. ಆದರೆ ಈ ಎಎಂಆರ್ ಡ್ಯಾಂ ನೀರನ್ನು ಪುತ್ತೂರಿಗೆ ಬಳಸಿಕೊಳ್ಳುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೀಗಾಗಿ ಭವಿಷ್ಯದಲ್ಲಿ ಮಂಗಳೂರಿಗೆ ನೀರಿನ ಬರ ಬಹುತೇಕ ಖಚಿತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

    10.49 ಎಂಸಿಎಂ ಸಂಗ್ರಹ ಸಾಮರ್ಥ್ಯವಿರುವ (6 ಮೀ.) ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5.22 ಎಂಸಿಎಂ (4 ಮೀ)ಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ 12.5 ಎಂಸಿಎಂ ಸಂಗ್ರಹ ಸಾಮರ್ಥ್ಯವಿರುವ(18.90 ಮೀ) ಎಎಂಆರ್ ಡ್ಯಾಂನ ನೀರನ್ನು ತುಂಬೆಗೆ ಹರಿಸಲಾಗುತ್ತದೆ. ಇಲ್ಲಿಂದ ಪ್ರತಿ ದಿನ ಯಥಾಸ್ಥಿತಿಯಲ್ಲಿ 155 ಎಂಎಲ್‌ಡಿ ನೀರನ್ನು ಮಂಗಳೂರು ನಗರಕ್ಕೆ ಪೂರೈಕೆ ಮಾಡುವುದು ರೂಢಿ. ತುಂಬೆ ಡ್ಯಾಂನಲ್ಲಿ ನೀರಿನ ಕೊರತೆಯಾದಾಗ ಮಂಗಳೂರಿಗೆ ಎಎಂಆರ್ ನೀರೇ ಆಧಾರ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕಾಗಿ 360 ಕೋಟಿ ರೂ.ವೆಚ್ಚದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆ ಕಾರ್ಯಗತವಾದರೆ ಭವಿಷ್ಯತ್ತಿನಲ್ಲಿ ತುಂಬೆ ಡ್ಯಾಂಗೆ ಎಎಂಆರ್ ಡ್ಯಾಂ ನೀರು ಪೂರೈಕೆ ಅಸಾಧ್ಯ.

    ಪುತ್ತೂರಿಗೆ ಎಎಂಆರ್ ನೀರು

    ಪುತ್ತೂರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈ ಕಾಮಗಾರಿ ಅನುಷ್ಠಾನ ಗೊಳ್ಳಲಿದ್ದು ಕರ್ನಾಟಕ ಜಲಮಂಡಳಿ ಇದರ ಜವಾಬ್ದಾರಿ ವಹಿಸಲಿದೆ. ಈ ಯೋಜನೆ ಪ್ರಕಾರ ವಿಧಾನಸಭಾ ಕ್ಷೇತ್ರದ 31 ಗ್ರಾಪಂ, ಒಂದು ಪಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಒದಗಿಸುವ ಬೃಹತ್ ಯೋಜನೆ ಇದಾಗಿದೆ. ನೇತ್ರಾವತಿ ನದಿಯ ಎಎಂಆರ್ ಡ್ಯಾಂನಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಪೂರೈಸುವುದು ಈ ಯೋಜನೆಯ ಮೊದಲ ಹೆಜ್ಜೆ, ಜಾಕ್‌ವೆಲ್‌ನಲ್ಲಿ ನೀರು ಸಂಗ್ರಹಿಸಿ ಶುದ್ಧೀಕರಿಸಿ ವಿಟ್ಲ-ಅಳಿಕೆ ಮೂಲಕ ಪೈಪ್‌ಲೈನ್ ಅಳವಡಿಸಿ ನೀರು ಹರಿಸಲಾಗುತ್ತದೆ. ಪುಣಚ, ಬಲ್ನಾಡಿನ ಎತ್ತರದ ಪ್ರದೇಶದಲ್ಲಿ 15 ಲಕ್ಷ ಲೀ.ಮಿಕ್ಕಿ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ಗ್ರಾಪಂಗಳಿಗೆ ಪೂರೈಸಲಾಗುತ್ತದೆ.

    ತುಂಬೆ ಡ್ಯಾಂ ಸಾಮರ್ಥ್ಯ 7 ಮೀ.ಗೆ ಏರಿಕೆ

    ಎಎಂಆರ್‌ನಲ್ಲಿ ಪ್ರಸ್ತುತ ಸಮುದ್ರ ಮಟ್ಟಕ್ಕಿಂತ ಮೇಲೆ 18.9 ಮೀ. ನೀರು ಇದ್ದು, ಅನಿವಾರ್ಯ ಸಂದರ್ಭ ಇದರಲ್ಲಿ 14.5 ಮೀ. ನೀರನ್ನು ತುಂಬೆ ವೆಂಟೆಡ್ ಡ್ಯಾಂಗೆ ಹರಿಯಬಿಡಲಾಗುತ್ತಿದೆ. ಈ ನೀರು ಹರಿಯುವುದರಿಂದ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5.45 ಮಿ.ಗಿಂತ ಕೆಳಗಿಳಿಯದಂತೆ ನಿಗಾವಹಿಸಲು ಸಾಧ್ಯ. ಆದರೆ ಎಎಂಆರ್ ನೀರು ಪುತ್ತೂರಿಗೆ ಪೂರೈಕೆಯಾದರೆ ನೀರಿನ ಲಭ್ಯತೆ ದೃಷ್ಟಿಯಿಂದ ಭವಿಷ್ಯದಲ್ಲಿ ತುಂಬೆ ಡ್ಯಾಂಗೆ ನೀರು ಹರಿಸಿ ಜಲಮಟ್ಟ ಹೆಚ್ಚಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತುಂಬೆ ಡ್ಯಾಂ ನೀರಿನ ಶೇಖರಣಾ ಸಾಮರ್ಥ್ಯವನ್ನು ಈಗಿರುವ 6 ಮೀ.ನಿಂದ 7 ಮೀ.ಗೆ ಏರಿಸಿ ಸಂಗ್ರಹಿಸುವುದು ಮಹಾನಗರ ಪಾಲಿಕೆಗೆ ಅನಿವಾರ್ಯವಾಗಲಿದೆ.

    ಮಂಗಳೂರಿಗೆ ಎಎಂಆರ್ ಆಪತ್ಬಾಂಧವ

    ಪ್ರತಿ ದಿನ 155 ಎಂಎಲ್‌ಡಿ ನೀರು ಮಂಗಳೂರು ನಗರಕ್ಕೆ ಪೂರೈಕೆಯಾಗುತ್ತಿದೆ. 18 ಎಂಜಿಡಿ ನೀರು ಕೈಗಾರಿಕೆಗಳಿಗೆ ರವಾನೆಯಾಗುತ್ತಿದೆ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ, ಎನ್‌ಎಂಪಿಟಿಎ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್‌ನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ಎಸ್‌ಇಝಡ್‌ಗೆ 8 ಎಂಜಿಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಕುಡಿಯುವ ನೀರಿಗೆ ಕೊರತೆಯಾದರೆ ಎಎಂಆರ್ ಡ್ಯಾಂ ಆಪತ್ಬಾಂಧವನಾಗಿ ಕಾರ್ಯನಿರ್ವಹಿಸಿದೆ.


    ಪುತ್ತೂರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕಾಗಿ 360 ಕೋಟಿ ರೂ.ವೆಚ್ಚದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಕಾಮಗಾರಿ ಅನುಷ್ಠಾನ ಆಗಲಿದ್ದು ಜಲಮಂಡಳಿ ಇದರ ಜವಾಬ್ದಾರಿ ವಹಿಸಲಿದೆ.
    – ಕೆ.ಪಿ.ಮೋಹನ್‌ರಾಜ್ ಎಂಡಿ, ಜಲಮಂಡಳಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts