More

    ಬರಿದಾದ ನಂದಿನಿ ಒಡಲು, ಕುಡಿವ ನೀರಿಗೂ ತತ್ವಾರ ಸಾಧ್ಯತೆ

    ಬರಿದಾದ ನಂದಿನಿ ಒಡಲು, ಬಿಸಿಲಿನ ಬೇಗೆಗೆ ನಂದಿನಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಪರಿಣಾಮವಾಗಿ ನದಿ ತಟದಲ್ಲಿರುವ ಕೆರೆ ಬಾವಿಗಳಲ್ಲೂ ನೀರಿನ ಒರತೆ ಕಡಿಮೆಯಾಗಿದ್ದು, ಶೀಘ್ರ ಮಳೆ ಬಾರದಿದ್ದಲ್ಲಿ ಈ ತಿಂಗಳಾಂತ್ಯದ ವೇಳೆಗೆ ನೀರಿನ ಸಮಸ್ಯೆ ತಲೆದೋರಲಿದೆ. ಈ ಕುರಿತ ವರದಿ ಇಲ್ಲಿದೆ. –ನಿಶಾಂತ್ ಶೆಟ್ಟಿ ಕಿಲೆಂಜೂರು ಕಿನ್ನಿಗೋಳಿ

    ಬಿಸಿಲಿನ ಬೇಗೆಗೆ ನಂದಿನಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಪರಿಣಾಮವಾಗಿ ನದಿ ತಟದಲ್ಲಿರುವ ಕೆರೆ ಬಾವಿಗಳಲ್ಲೂ ನೀರಿನ ಒರತೆ ಕಡಿಮೆಯಾಗಿದ್ದು, ಶೀಘ್ರ ಮಳೆ ಬಾರದಿದ್ದಲ್ಲಿ ಈ ತಿಂಗಳಾಂತ್ಯದ ವೇಳೆಗೆ ನೀರಿನ ಸಮಸ್ಯೆ ತಲೆದೋರಲಿದೆ.


    ಮೂಡುಬಿದಿರೆಯಿಂದ ಹಳೆಯಂಗಡಿ ಸಮೀಪದ ಪಾವಂಜೆವರೆಗೆ ಹರಿಯುವ ನಂದಿನಿ ನದಿ ಈ ಪ್ರದೇಶದ ಜನರ ಜೀವನದಿ. ಮೂಡುಬಿದಿರೆಯಿಂದ ಪಾವಂಜೆವರೆಗೂ ನದಿಗೆ ಹಲವು ಕಡೆಗಳಲ್ಲಿ ಅಣೆಕಟ್ಟು ಕಟ್ಟಲಾಗಿದ್ದು, ಡಿಸೆಂಬರ್‌ನಲ್ಲಿ ಹೆಚ್ಚಿನ ಎಲ್ಲ ಅಣೆಕಟ್ಟುಗಳ ಬಾಗಿಲು ಹಾಕಲಾಗುತ್ತದೆ. ಇದರಿಂದ ನೀರು ಶೇಖರಣೆಗೊಳ್ಳುವುದಲ್ಲದೆ ಈ ವ್ಯಾಪ್ತಿಯ ಕರೆ – ಬಾವಿಗಳಲ್ಲೂ ನೀರು ತುಂಬಿರುತ್ತಿತ್ತು. ಅಣೆಕಟ್ಟೆಯು ನದಿ ತಟದ ಕೃಷಿಭೂಮಿಗೆ ನೀರುಣಿಸುತ್ತಿತ್ತಲ್ಲದೆ ಭತ್ತದ ಬೆಳೆ, ತೆಂಗು, ಅಡಕೆ ತೋಟಗಳಿಗೂ ವರದಾನವಾಗಿತ್ತು. ಸಾಮಾನ್ಯವಾಗಿ ಮೇ ಎರಡನೇ ವಾರದ ತನಕವೂ ಅಣೆಕಟ್ಟೆಯಲ್ಲಿ ನೀರು ಲಭ್ಯವಿರುತ್ತಿತ್ತು. ಕಳೆದ ಕೆಲ ವರ್ಷಗಳಲ್ಲಿ ದಿನದ 24 ತಾಸು ಕೃಷಿಭೂಮಿಗೆ ನೀರುಣಿಸಿದರೂ ಅಣೆಕಟ್ಟು, ಕೆರೆ, ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಮುಖಗೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಏಪ್ರಿಲ್ ಮೊದಲ ವಾರದಲ್ಲಿಯೇ ನಂದಿನಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ತಿಂಗಳಾತ್ಯದ ವೇಳೆ ಅಣೆಕಟ್ಟೆಗಳೂ ಸಂಪೂರ್ಣ ಬತ್ತುವ ಸಾಧ್ಯತೆಗಳಿವೆ.

    ಬರಿದಾದ ಒರತೆ

    ನದಿ ತಟದಲ್ಲಿ ಬೆಳೆದಿರುವ ಭತ್ತ ಪ್ರಸಕ್ತ ಕಟಾವಿಗೆ ಬರುತ್ತಿದ್ದು, ಈ ಅವಧಿಯಲ್ಲಿ ಹೆಚ್ಚಿನ ನೀರಿನ ಅಗತ್ಯವಿದೆ. ಮುಂದಿನ ದಿನಗಳಲ್ಲಿ ತೆಂಗು ಕಂಗುಗಳಿಗೂ ಸಾಕಷ್ಟು ನೀರು ಬೇಕಾಗುತ್ತದೆ. ನದಿ ವ್ಯಾಪ್ತಿಯ ಕೆಲವು ಪಂಚಾಯಿತಿಗಳಲ್ಲೂ ಕುಡಿಯುವ ನೀರು ಪೂರೈಕೆಗೆ ನಂದಿನಿ ನದಿಯನ್ನೇ ಅವಲಂಬಿಸಿವೆ. ಮುಂದಿನ ಒಂದು ವಾರದಲ್ಲಿ ಮಳೆ ಬರದೇ ಇದ್ದಲ್ಲಿ ಕುಡಿಯುವ ನೀರು ಪೂರೈಕೆಗೂ ಸಮಸ್ಯೆಯಾಗಲಿದೆ.

    ಕೃಷಿ ಚಟುವಟಿಕೆಗಳಿಗೆ ಹಿನ್ನಡೆ

    ಕಟೀಲು, ಕಿನ್ನಿಗೋಳಿ, ಅತ್ತೂರು, ಕೊಡೆತ್ತೂರು, ಸೂರಿಂಜೆ, ಕುತೆತ್ತೂರು ಮತ್ತಿತರ ಭಾಗಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ನೂರಾರು ಏಕರೆ ಕಂಗು, ತೆಂಗು ತೋಟಗಳಿದ್ದು, ನೀರುಣಿಸುವುದು ಅಗತ್ಯವಾಗಿದೆ, ಮೇ 15ರ ನಂತರ ಎಣೇಲು ಬೆಳೆಗೆ ರೈತರು ತಯಾರಾಗುತ್ತಾರೆ, ಭತ್ತದ ಸಸಿಗಳನ್ನು ಬೆಳೆಸುವ ಸಮಯ ಇದಾಗಿದ್ದು, ಈ ಸಂದರ್ಭ ರೈತರಿಗೆ ಅಗತ್ಯವಾಗಿ ನೀರು ಬೇಕಾಗುತ್ತದೆ. ಮಳೆ ಬಾರದೇ ಇದ್ದಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಲಿದೆ.


    ಈ ಬಾರಿ ನಂದಿನಿ ನದಿಯಲ್ಲಿ ಮಾರ್ಚ್ ಅಂತ್ಯದಲ್ಲೇ ನೀರಿನ ಮಟ್ಟ ತುಂಬಾ ಕಡಿಮೆಯಾಗಿದೆ, ಈ ವ್ಯಾಪ್ತಿಯ ರೈತರ ಬಾವಿ ಕೆರೆಗಳಲ್ಲಿಯೂ ಒರತೆ ಕಡಿಮೆಯಾಗಿದೆ. ಮಳೆ ಬಾರದಿದಲ್ಲಿ ಬೆಳೆ ಮಾತ್ರವಲ್ಲ ಕುಡಿಯುವ ನೀರಿಗೂ ಸಮಸ್ಯೆ ಯಾಗಲಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ನೀರಿನ ಮಟ್ಟ ಕಡಿಮೆಯಾಗಿದ್ದು, ನದಿ ಸಂಪೂರ್ಣ ಬತ್ತಿದೆ.

    -ಶ್ರೀಧರ ಶೆಟ್ಟಿ ಮುಕ್ಕ ಕಿನ್ನಿಗೋಳಿ ರೈತ ಸಂಘ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts