More

    ಬತ್ತಿಹೋದ ಶಾಂಭವಿ ನದಿ: ಸುತ್ತಮುತ್ತಲ ರೈತರಲ್ಲಿ ಆತಂಕ

    ಶಾಂಭವಿ ನದಿ ಬತ್ತಿ ಹೋಗಿ ಆ ಭಾಗದ ಕೃಷಿಕರನ್ನು ಆತಂಕಕ್ಕೀಡು ಮಾಡಿದೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. – ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಸಾವಿರ ಎಕರೆ ಕೃಷಿ ಭೂಮಿಗೆ ಜಲಮೂಲವಾಗಿದ್ದ ಮುಂಡ್ಕೂರು ಗ್ರಾಮದ ಸಂಕಲಕರಿಯ ಶಾಂಭವಿ ನದಿ ಬತ್ತಿ ಹೋಗಿ ಆ ಭಾಗದ ಕೃಷಿಕರನ್ನು ಆತಂಕಕ್ಕೀಡು ಮಾಡಿದೆ.

    ಶಾಂಭವಿ ನದಿ

    ಕಳೆದ ಹಲವು ವರ್ಷಗಳಿಂದ ಮೇ ಅಂತ್ಯದ ವರೆಗೆ ತುಂಬಿ ತುಳುಕುತ್ತಿದ್ದ ಶಾಂಭವಿ ನದಿ ಈ ಬಾರಿ ಬಹುಬೇಗನೆ ಬತ್ತಿ ಕೃಷಿಕರ ಸಹಿತ ಸ್ಥಳೀಯ ನಿವಾಸಿಗಳು ಕಂಗಾಲಾಗಿದ್ದಾರೆ. ಮುಂಡ್ಕೂರು, ಸಂಕಲಕರಿಯ, ಸಚ್ಚೇರಿಪೇಟೆ, ಪೊಸ್ರಾಲು, ಏಳಿಂಜೆ, ಕೊಟ್ರಪಾಡಿ, ಕಡಂದಲೆ ಭಾಗದ ನೂರಾರು ಎಕರೆ ಪ್ರದೇಶದ ಕೃಷಿಭೂಮಿಗೆ ವರದಾನವಾಗಿದ್ದ ಶಾಂಭವಿ ನದಿ ಸಂಪೂರ್ಣ ಬತ್ತಿದ ಪರಿಣಾಮ ಕೃಷಿ ಚಟುವಟಿಕೆಗೆ ನೀರಿನ ಕೊರತೆಯಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ನದಿ ತೊರೆ ಎಲ್ಲವೂ ಬತ್ತಿ ಹೋಗುತ್ತಿದ್ದು, ಶಾಂಭವಿ ನದಿಯೂ ಈ ಸಲ ಬೇಗನೆ ಬತ್ತಿದೆ.

    Shambhavi River 2

    ಒರತೆ ಇಂಗುವ ಭೀತಿ

    ಶಾಂಭವಿ ನದಿ ಆಣೆಕಟ್ಟೆ ನಿರ್ವಹಣೆ ಪರಿಣಾಮ ಕೃಷಿ ಭೂಮಿಗೆ ಅನುಕೂಲವಾಗುವುದರ ಜತೆ ನೂರಾರು ನದಿ ತಟದ ಮನೆಗಳ ಬಾವಿಗಳಲ್ಲಿಯೂ ನೀರಿನ ಒರತೆ ಹೆಚ್ಚಾಗಿ ಜನ ನೆಮ್ಮದಿಯಿಂದ ದಿನ ಕಳೆಯುತ್ತಿದ್ದರು. ಕಳೆದ ಹಲವು ದಶಕದಿಂದ ನೀರಿನ ಸಮಸ್ಯೆ ಕಾಣದ ಈ ಭಾಗದ ಜನ, ನದಿ ಬತ್ತಿದ ಪರಿಣಾಮ ಆತಂಕಗೊಂಡಿದ್ದಾರೆ. ಸ್ಥಳೀಯರ ಬಾವಿಗಳಲ್ಲಿ ಒರತೆ ಕಡಿಮೆಯಾಗಿ ಇನ್ನು ಒಂದು ತಿಂಗಳು ಕಳೆದರೆ ಬಾವಿಗಳು ಕೂಡ ಸಂಪೂರ್ಣ ಬರಿದಾಗುವ ಲಕ್ಷಣ ಕಂಡು ಬರುತ್ತಿದೆ.

    ಹಲಗೆ ಹಾಕಿದರೂ ನೀರಿಲ್ಲ

    ಶಾಂಭವಿ ನದಿ ಅಣೆಕಟ್ಟೆಯನ್ನು ನಿರಂತರವಾಗಿ ದಶಕಗಳಿಂದ ಈ ಭಾಗದ ಪ್ರಗತಿಪರ ಯುವ ಕೃಷಿಕ ಸುಧಾಕರ ಸಾಲ್ಯಾನ್ ಕೃಷಿಕರ ಜತೆ ಸೇರಿಕೊಂಡು ನಿರ್ವಹಿಸಿಕೊಂಡು ಬರುತ್ತಿದ್ದು, ಈ ಸಲ ಸಾರ್ವಜನಿಕರು ಹಾಗೂ ಕಿನ್ನಿಗೋಳಿ ರೋಟರಿ, ಕರ್ಣಾಟಕ ಬ್ಯಾಂಕ್ ನೆರವಿನಿಂದ ಹಲಗೆ ಹಾಕಿ ಸಕಾಲಕ್ಕೆ ನಿರ್ವಹಿಸಿದ್ದರು. ಆದರೆ ಭಾರೀ ಬಿಸಿಲ ಬೇಗೆಯಿಂದ ನದಿ ಬತ್ತಿ ಹೋಗಿ ಜಲಕ್ಷಾಮಕ್ಕೆ ಮುನ್ನುಡಿ ಬರೆದಂತಾಗಿದೆ. ಕಳೆದ ಹಲವು ವರ್ಷಗಳಿಂದ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರು ಮಳೆಗಾಲ ಆರಂಭವಾಗುವವರೆಗೂ ಈ ಭಾಗದ ಕೃಷಿಕರ ಉಪಯೋಗಕ್ಕೆ ಬರುತ್ತಿತ್ತು. ಆದರೆ ಈ ಬಾರಿ ನದಿಯ ಜಲಮೂಲ ಬತ್ತಿದ್ದು ಕೃಷಿಕರು, ಕೃಷಿ ಕಾರ್ಯಕ್ಕೆ ನೀರಿಲ್ಲದೆ ಆಗಸ ನೋಡುವಂತಾಗಿದೆ.

    ಕೃಷಿಕರಲ್ಲಿ ಆತಂಕ

    ಮುಂಡ್ಕೂರು, ಸಂಕಲಕರಿಯ, ಸಚ್ಚೇರಿಪೇಟೆ, ಪೊಸ್ರಾಲು, ಏಳಿಂಜೆ, ಕೊಟ್ರಪಾಡಿ, ಕಡಂದಲೆ ಭಾಗದ ಸುಮಾರು ಒಂದೂವರೆ ಸಾವಿರ ಎಕರೆ ಕೃಷಿ ಭೂಮಿ ಹೊಂದಿದ ಕೃಷಿಕರು ಬೇಸಗೆಯ ಬೆಳೆ ಕಟಾವಿನಲ್ಲಿ ತೊಡಗಿದ್ದು, ಕಾರ್ತಿ ಬೆಳೆಗಾಗಿ ನೇಜಿ ಹಾಕಲು ನೀರಿಗಾಗಿ ಪರದಾಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಯಾವಾಗ ಮಳೆ ನೀರು ಬೀಳುತ್ತೋ ಎಂದು ಕೃಷಿಕರು ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

    ಸಂಕಲಕರಿಯ ಶಾಂಭವಿ ನದಿ ಈ ಬಾರಿ ಬೇಗನೆ ಬತ್ತಿದ ಪರಿಣಾಮ ಈ ಭಾಗದ ಕೃಷಿ ಕಾರ್ಯಕ್ಕೆ ನೀರಿಲ್ಲದಂತಾಗಿದೆ. ಸ್ಥಳೀಯ ಬಾವಿಗಳಲ್ಲಿಯೂ ನೀರಿನ ಒರತೆ ಕಡಿಮೆಯಾಗಿದ್ದು ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಈ ಬಾರಿಯ ವಿಪರೀತ ಸೆಖೆಯಿಂದಾಗಿ ನೀರು ಸಂಪೂರ್ಣ ಬತ್ತಿ ಹೋಗಿ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ.

    ಸುಧೀರ್ ಶೆಟ್ಟಿ, ಪ್ರಗತಿಪರ ಕೃಷಿಕ

    ಶಾಂಭವಿ ನದಿ ಅಣೆಕಟ್ಟೆಯನ್ನು ಪ್ರತಿ ವರ್ಷದಂತೆ ಈ ಬಾರಿಯೂ ನಿರ್ವಹಿಸಲಾಗಿದೆ. ಏರುತ್ತಿರುವ ತಾಪಮಾನದಿಂದ ಬೇಗನೆ ನದಿ ಬತ್ತಿದೆ. ಈ ಮೊದಲು ಮೇ ಅಂತ್ಯದ ವರೆಗೆ ನದಿ ತುಂಬಿ ತುಳುಕುತ್ತಿತ್ತು ಆದರೆ ಈ ಬಾರಿ ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಬತ್ತಿದ್ದು ಕೃಷಿಕರಿಗೆ ಆತಂಕವಾಗಿದೆ.

    -ಸುಧಾಕರ ಸಾಲ್ಯಾನ್, ಶಾಂಭವಿ ನದಿ ಅಣೆಕಟ್ಟೆ ನಿರ್ವಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts