More

    ಚಾರದಲ್ಲಿ ಹೊಸ ಸೇತುವೆ ನಿರ್ಮಾಣ

    ಚಾರದಲ್ಲಿನ ಹಳೇ ಸೇತುವೆ ಶಿಥಿಲಗೊಂಡಿದ್ದು, ಸಾರ್ವಜನಿಕರ ಸಂಚಾರ ಸಮಸ್ಯೆ ಪರಿಹರಿಸಲು 70 ಕೋಟಿ ವೆಚ್ಚದಲ್ಲಿ ಚಾರದಲ್ಲಿ ಹೊಸ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ಕಾಮಗಾರಿ ಆರಂಭಗೊಂಡಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ. – ನರೇಂದ್ರ ಎಸ್. ಮರಸಣಿಗೆ

    ಚಾರ ನವೋದಯ ಶಾಲೆ ಬಳಿ ಸೀತಾನದಿಗೆ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 70 ಕೋಟಿ ರೂ.ವೆಚ್ಚದಲ್ಲಿ ನೂತನ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣ ಕಾಮಗಾರಿ ಸೋಮವಾರ ಶುರುವಾಗಿದೆ.

    ಈಗ ಇರುವ ಸೇತುವೆ ಶಿಥಿಲಗೊಂಡಿದ್ದು ಅಡಿ ಭಾಗದಲ್ಲಿ ಕಬ್ಬಿಣದ ರಾಡ್‌ಗಳು ಹೊರಬಂದು, ಪಿಲ್ಲರ್‌ಗಳ ತಳಪಾಯ ಕೂಡ ಕುಸಿದಿದೆ. ಸೋಮವಾರ ಹಳೇ ಸೇತುವೆ ನೆಲಕ್ಕುರುಳಿಸುವ ಕೆಲಸ ಪ್ರಾರಂಭಿಸಲಾಗಿದೆ.

    110 ಮೀಟರ್ ಉದ್ದ,12 ಮೀಟರ್ ಅಗಲದ ಅಣೆಕಟ್ಟೆ ನಿರ್ಮಾಣವಾಗಲಿದ್ದು, 895 ಹೆಕ್ಟೆರ್ ಪ್ರದೇಶದ ಕೃಷಿಭೂಮಿಗೆ ಉಪಯೋಗ ಹಾಗೂ ಅಂತರ್ಜಲ ವೃದ್ಧಿ, ಕುಡಿಯುವ ನೀರಿಗೂ ವ್ಯವಸ್ಥೆ ಕಲ್ಪಿತವಾಗುತ್ತದೆ. 2025ರ ಒಳಗಾಗಿ ಎಲ್ಲ ಕೆಲಸಗಳು ಮುಗಿಯಲಿವೆ ಇಂಜಿನಿಯರ್ ತಿಳಿಸಿದ್ದಾರೆ.

    ಪರ್ಯಾಯ ಮಾರ್ಗ

    ಹಳೇ ಸೇತುವೆ ನೆಲಸಮ ಮಾಡಿ ಹೊಸ ಸೇತುವೆ ನಿರ್ಮಾಣ ಮಾಡುವುದರಿಂದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಹೆಬ್ರಿಯಿಂದ ಕುಂದಾಪುರ ಹೋಗುವ ವಾಹನಗಳು ಚಾರ ಹೆರ್ಗಲ್, ಬಸದಿ ರಸ್ತೆ, ಕೆಳಬಾದ್ಲು ಸಳ್ಳೆಕಟ್ಟೆ ಮೂಲಕ ಬೇಳಂಜೆ ಮಾರ್ಗವಾಗಿ ಕುಂದಾಪುರ ಹೋಗಬಹುದು. ಕುಂದಾಪುರದಿಂದ ಹೆಬ್ರಿಗೆ ಬರುವ ವಾಹನಗಳು ಸಳ್ಳೆಕಟ್ಟೆ, ಕೆಳಬಾದ್ಲು, ಬಸದಿ ರಸ್ತೆ, ಹೆರ್ಗಲ್ಲು ಚಾರದ ಮೂಲಕ ಹೆಬ್ರಿಗೆ ಹೋಗಬಹುದು.

    1965ರಲ್ಲಿ ನಿರ್ಮಾಣ

    1965ರಲ್ಲಿ ಅಂದರೆ 58 ವರ್ಷಗಳ ಹಿಂದೆಕೇವಲ 4.30 ಲಕ್ಷ ರೂಪಾಯಿಯಲ್ಲಿ ಅಂದಿನ ಮೈಸೂರು ಸರ್ಕಾರ ಈ ಸೇತುವೆ ನಿರ್ಮಾಣ ಮಾಡಿತ್ತು. ಪ್ರಸ್ತುತ ಸೇತುವೆ ಸಮೀಪ ಎರಡು ಬದಿಯಲ್ಲಿ ಜನ ರಾತ್ರಿ ಹೊತ್ತಿನಲ್ಲಿ ತ್ಯಾಜ್ಯ ತಂದು ಹಾಕುತ್ತಿದ್ದರು. ಎರಡೂ ಬದಿಯಲ್ಲಿ ತ್ಯಾಜ್ಯ ರಾಶಿ ಬಿದ್ದು ಕೆಟ್ಟು ನಾರುತ್ತಿತ್ತು. ಸೇತುವೆ ನಿರ್ಮಾಣದ ನಂತರ ತ್ಯಾಜ್ಯ ಎಸೆಯಲು ಅವಕಾಶ ಸಿಗದೆ ತ್ಯಾಜ್ಯ ಮುಕ್ತ ಪ್ರದೇಶವಾಗಬಹುದು.

    Photo of Chara Bridge 2

    ಸಳ್ಳೆಕಟ್ಟೆ ಮಾತ್ಗಲ್ ರಸ್ತೆ ಸಂಪರ್ಕ ಒತ್ತಾಯ

    ಕುಂದಾಪುರದಿಂದ ಬರುವ ಜನರಿಗೆ ಸಳ್ಳೆಕಟ್ಟೆ ಮಾತ್ಕಲ್ ಹಾಲಿಕೋಡ್ಲು ಮೂಲಕ ಹೆಬ್ರಿ ಸಂಪರ್ಕಿಸಲು ಹತ್ತಿರ ಮಾರ್ಗವಿದೆ. ಸ್ಥಳೀಯ ಜನರು ರಸ್ತೆ ಅವಕಾಶ ಕೇಳಿದ್ದಾರೆ. ಪರ್ಯಾಯ ಮಾರ್ಗದಲ್ಲಿ ಕೇವಲ ಒಂದು ವಾಹನ ಚಲಿಸುವ ಅವಕಾಶವಿದೆ. ಅಲ್ಲದೆ ಧೂಳಿನಿಂದ ಬೈಕ್ ಸವಾರರಿಗೆ ಸಮಸ್ಯೆಯಾಗುತ್ತಿದೆ. ಎರಡು ಬದಿಯಲ್ಲಿ ಸಂಪರ್ಕ ಕಲ್ಪಿಸುವುದರಿಂದ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂದು ಜನರ ವಾದ.

    ಚಾರದಲ್ಲಿ ಹೊಸ ಸೇತುವೆ ವರ

    ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾದ ನಂತರ ಏತ ನೀರಾವರಿ ಯೋಜನೆಯ ಮೂಲಕ ಮುಂದಿನ ಯೋಜನೆಯಲ್ಲಿ ಕೆರೆಗಳಿಗೆ ನೀರಾಯಿಸುವುದು ಹಾಗೂ ಕೃಷಿಗೆ ಸಂಬಂಧಪಟ್ಟ ಕ್ರಮದ ಕುರಿತು ಉಲ್ಲೇಖವಿದೆ. ಸ್ಥಳೀಯವಾಗಿ ನೂರಾರು ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಅಂತರ್ಜಲ ವೃದ್ಧಿಗೂ ಕಾರಣವಾಗಲಿದೆ. ಅಡಿಕೆ ತೋಟಗಳಿಗೆ ಈ ಯೋಜನೆ ವರವಾಗಿ ಪರಿಣಮಿಸಲಿದೆ ಎಂದು ನಿರೀಕ್ಷಿಸಲಾಗಿದೆ.

    ಸುಮಾರು 70 ಕೋಟಿ ರೂ.ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿಅಣೆಕಟ್ಟೆ ನಿರ್ಮಾಣವಾಗಲಿದೆ. ಮೈಸೂರು ಸರ್ಕಾರದ ಕಾಲದಲ್ಲಿ ನಿರ್ಮಾಣವಾದ ಹಳೇ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಆದಷ್ಟು ಬೇಗ ಸೇತುವೆ ಸಹಿತ ಕಿಂಡಿ ಆಣೆಕಟ್ಟು ನಿರ್ಮಾಣ ಮಾಡಿ ಸೇತುವೆ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗುವುದು. ಸದ್ಯ ಜನರು ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಿ ಸಹಕಾರ ನೀಡಿ.
    -ಜೆ.ಎಮ್.ರಾಥೋಡ್ ಎಇ ಸಣ್ಣ ನೀರಾವರಿ ಇಲಾಖೆ, ಉಡುಪಿ

    ಹಳೆಯ ಸೇತುವೆ ಶಿಥಿಲಾವಸ್ಥೆಯಲ್ಲಿತ್ತು ಸಂಬಂಧಪಟ್ಟ ಇಲಾಖೆ ಮುಂಜಾಗ್ರತ ಕ್ರಮವಾಗಿ ಯೋಜನೆ ರೂಪಿಸಿದ್ದು ಒಳ್ಳೆಯದಾಯಿತು. ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣವಾಗುವುದರಿಂದ ಸ್ಥಳೀಯ ರೈತರಿಗೆ ಉಪಯೋಗವಾಗಲಿದೆ. ಆದಷ್ಟು ಬೇಗ ನಿರ್ಮಾಣವಾಗಬೇಕು. ಕೃಷಿ ಭೂಮಿಯ ಉತ್ತೇಜನಕ್ಕೆ ಈ ಕಿಂಡಿ ಅಣೆಕಟ್ಟೆ ಸಹಾಯಕವಾಗಲಿದೆ.
    -ಗಂಗಾಧರ್ ಶೆಟ್ಟಿ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts