More

    ಸ್ವರ್ಣಾ ನದಿಯಲ್ಲಿ ಜಲಮಟ್ಟ ಕ್ಷೀಣ

    ವಿಜಯವಾಣಿ ಸುದ್ದಿಜಾಲ ಉಡುಪಿ

    ಸ್ವರ್ಣಾ ನದಿ ನಗರಕ್ಕೆ ನೀರುಣಿಸುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿರುವುದರಿಂದ ಹಿರಿಯಡಕ ಭಾಗದಲ್ಲಿ 400 ಹೆಕ್ಟೆರ್ ಕೃಷಿ ಹಾನಿಗೊಳಗಾಗುವ ಭೀತಿ ಎದುರಾಗಿದೆ.

    ಬಜೆ ಡ್ಯಾಂನಲ್ಲಿ ಮಂಗಳವಾರ 3.65 ಮೀ. ನೀರು ಸಂಗ್ರಹವಿದ್ದು, ಶಿರೂರು ಭಾಗದಲ್ಲಿರುವ ಗುಂಡಿಗಳಿಂದ ಪಂಪ್ ಮೂಲಕ ಡ್ಯಾಂಗೆ ನೀರು ಹರಿಸಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಎಪ್ರಿಲ್ ಅಂತ್ಯದವರೆಗೆ ಮಾತ್ರ ನಿಯಮಿತವಾಗಿ ನೀರು ಸರಬರಾಜು ಮಾಡಲು ನಗರಸಭೆಗೆ ಸಾಧ್ಯವಾಗಲಿದ್ದು, ಮೇ ತಿಂಗಳಲ್ಲಿ ಟ್ಯಾಂಕರ್ ನೀರಿಗೆ ಮೊರೆ ಹೋಗುವ ಪ್ರಸಂಗ ಬರಲಿದೆ.

    ಹಿರಿಯಡಕ ವ್ಯಾಪ್ತಿಯ ತೋಟಗಳಿಗೆ ನೀರು ಪೂರೈಸಲು ಅವಕಾಶ ನೀಡಿದರೆ ಉಡುಪಿ ನಗರಕ್ಕೆ ಕೊರತೆಯಾಗಬಹುದು ಎಂಬ ಕಾರಣಕ್ಕೆ ಸ್ವರ್ಣಾ ನದಿ ಎಡ, ಬಲದಂಡೆಯ ಸುಮಾರು 68 ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ವಾರಕ್ಕೆ 1 ದಿನ ಮಾತ್ರ ನೀರು ಪಡೆಯಲು ಅವಕಾಶ ನೀಡಲಾಗಿದೆ. ಪರಿಣಾಮ 400 ಹೆಕ್ಟೆರ್ ಬೆಳೆಗೆ ನೀರಿನ ಸಮಸ್ಯೆ ಎದುರಾಗಿದೆ. ಈ ಪ್ರದೇಶದಲ್ಲಿ ಪ್ರಮುಖ ಬೆಳೆಗಳಾದ ತೆಂಗು, ಅಡಕೆ, ಬಾಳೆ, ಕಾಳುಮೆಣಸಿಗೆ ನೀರಿನ ಅಗತ್ಯ ಹೆಚ್ಚಿರುವುದರಿಂದ ಅಧಿಕ ನೀರಿಲ್ಲದೆ ಬೆಳೆಗಳು ಸೊರಗಲಾರಂಭಿಸಿವೆ. ಹೈನುಗಾರಿಕೆಗೂ ನೀರಿನ ಬಿಸಿ ತಟ್ಟಿದ್ದು, ಜಾನುವಾರುಗಳಿಗೆ ಕುಡಿಯುವ ನೀರು, ಮೇವಿಗೂ ಕುಂದುಂಟಾಗುವ ಸಾಧ್ಯತೆಯಿದೆ. ಹೀಗಾಗಿ ವಾರಕ್ಕೆ 2 ದಿನ ನದಿಯಿಂದ ನೀರು ಪಡೆಯಲು ಅವಕಾಶ ನೀಡಬೇಕು ಎಂಬುದು ರೈತರ ಮನವಿ.

    ಸ್ವರ್ಣಾ ನದಿ ಜಲಮೂಲ

    ಈ ವರ್ಷ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭತ್ತ ಹಿಂಗಾರು ಬೆಳೆಯಾಗಿ ಬೆಳೆದಿದ್ದು, ಅದಕ್ಕೂ ನೀರಿಲ್ಲದೆ ರೈತರು ಸಂಕಟಪಡುವಂತಾಗಿದೆ. ಉಡುಪಿ, ಮಣಿಪಾಲ ನಗರಕ್ಕೆ ಕುಡಿಯುವ ನೀರು, ಹಿರಿಯಡಕ, ಪೆರ್ಡೂರು, ಉಡುಪಿವರೆಗೂ ಕೃಷಿ ಕಾರ್ಯಕ್ಕೆ ಜನರು ಸ್ವರ್ಣಾ ನದಿಯನ್ನೇ ಆಶ್ರಯಿಸಿದ್ದು, ಎಪ್ರಿಲ್ ಕೊನೇ ವಾರ ಅಥವಾ ಮೇ ತಿಂಗಳಲ್ಲಿ ಕೃಷಿಗೆ ನೀರು ಸ್ಥಗಿತಗೊಳಿಸಲಾಗುತಿತ್ತು. ಈ ವರ್ಷ ಅವಧಿಗೆ ಮುನ್ನವೇ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದರಿಂದ ರೈತರೂ ಸಮಸ್ಯೆ ಎದುರಿಸುವಂತಾಗಿದೆ.

    ಹೆಚ್ಚಿದ ಟ್ಯಾಂಕರ್ ಓಡಾಟ

    ನಗರದಲ್ಲಿ ಎಪ್ರಿಲ್ ತಿಂಗಳ ಕೊನೆಯವರೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ನಗರಸಭೆ ಭರವಸೆ ನೀಡಿದ್ದರೂ ಎತ್ತರ ಪ್ರದೇಶಗಳಲ್ಲಿ ಹಲವು ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಹೊಟೇಲ್, ವಸತಿ ಸಮುಚ್ಚಯಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೂರಿದೆ. ನಗರದಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಿದ್ದು, ಟ್ಯಾಂಕರ್‌ಗಳ ಓಡಾಟ ಹೆಚ್ಚಿದೆ. ಬೇಸಗೆ ಬಿಸಿಲು ತಾಪ ಅಧಿಕವಾಗಿರುವುದರಿಂದ ಸ್ವರ್ಣಾ ನದಿಯಲ್ಲಿ ನೀರಿನ ಪ್ರಮಾಣ ತೀರ ಕಡಿಮೆಯಾಗುತ್ತಿದೆ. ಶಿರೂರು ಡ್ಯಾಂ ಮೇಲ್ಭಾಗದಲ್ಲಿ ಹೆಚ್ಚುವರಿ ಪಂಪಿಂಗ್ ಮಾಡಿ ನೀರನ್ನು ಬಜೆಗೆ ಹಾಯಿಸಲಾಗುತ್ತಿದೆ.

    ಸ್ವರ್ಣಾ ನದಿ ತಟದ ಕೃಷಿಕರು ಪರಂಪರೆಯಿಂದ ನೀರು ಉಪಯೋಗಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದರಿಂದ ಸುಮಾರು 70 ಮಂದಿ ರೈತರಿಗೆ ತೊಂದರೆಯಾಗಿದೆ. ಆ ಭಾಗದಲ್ಲಿ ದೀರ್ಘಕಾಲೀನ ಬೆಳೆಗಳಿರುವುದರಿಂದ ನೀರಿನಲ್ಲದೆ ಹಾಳಾದರೆ ರೈತರಿಗೆ ಬಹಳಷ್ಟು ನಷ್ಟವಾಗಲಿದೆ. ಹೀಗಾಗಿ ಜಿಲ್ಲಾಡಳಿತ ವಾರಕ್ಕೆ 2 ದಿನ ನೀರು ನೀಡಬೇಕು.
    -ರಾಮಕೃಷ್ಣ ಶರ್ಮ
    ಅಧ್ಯಕ್ಷರು, ಜಿಲ್ಲಾ ಕೃಷಿಕ ಸಂಘ

    ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
    ಬಜೆಯಲ್ಲಿ ನಿತ್ಯ ಪಂಪಿಂಗ್ ಆಗುತ್ತಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನಿಗಾವಹಿಸಲಾಗಿದೆ. ಎತ್ತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸಾರ್ವಜನಿಕರು ನೀರಿನ ಮಿತ ಬಳಕೆಗೆ ವ್ಯಾಪಕ ಜಾಗೃತಿ ಮೂಡಿಸುತ್ತಿದ್ದೇವೆ.

    -ಆರ್. ಪಿ. ನಾಯ್ಕ,
    ಪೌರಾಯುಕ್ತರು, ಉಡುಪಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts