More

    ಅಪರಾಧ ಪ್ರಕರಣ ಯಾರನ್ನೂ ಹುಡುಕಿಕೊಂಡು ಬರದು

    ವಿಶ್ರಾಂತ ನ್ಯಾ. ಡಾ. ಎಚ್​.ಬಿ. ಪ್ರಭಾಕರ ಶಾಸ್ತ್ರಿ ಹೇಳಿಕೆ — ನೂತನ ಕಾಯ್ದೆ ಕುರಿತು ಉಪನ್ಯಾಸ

    ವಿಜಯವಾಣಿ ಸುದ್ದಿಜಾಲ ಉಡುಪಿ
    ದೇಶದಲ್ಲಿರುವ ಅಪರಾಧಿಕ ಕಾನೂನುಗಳ ಕುರಿತಾಗಿ ನ್ಯಾಯಾಂಗ ಇಲಾಖೆಯಲ್ಲಿ ಇದ್ದವರು ಮಾತ್ರ ಅರಿತರೆ ಸಾಲದು. ಏಕೆಂದರೆ, ಅಪರಾಧ ಪ್ರಕರಣ ಯಾವುದೇ ಸೀಮಿತ ವ್ಯಕ್ತಿಯನ್ನು ಮಾತ್ರ ಹುಡುಕಿಕೊಂಡು ಬರುವುದಿಲ್ಲ. ಹೀಗಾಗಿ ವಕೀಲರೇತರರಿಗೂ ಕಾನೂನು ಪರಿಜ್ಞಾನ ಇರಲೇಬೇಕು ಎಂದು ಹೈಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಡಾ.ಎಚ್​.ಬಿ. ಪ್ರಭಾಕರ ಶಾಸ್ತ್ರಿ ಹೇಳಿದರು.

    ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ವಕೀಲರ ಸಂಘ (ರಿ.) ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ 2024ರ ಜು.1ರಂದು ಜಾರಿಗೆ ಬರಲಿರುವ ಹೊಸ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ-2023 (ಬಿಎನ್​ಎಸ್​), ಭಾರತೀಯ ನಾಗರಿಕ ಸುರಾ ಸಂಹಿತೆ-2023 (ಬಿಎನ್​ಎಸ್​ಎಸ್​) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ- 2023 (ಬಿಎಸ್​ಎ) ಕುರಿತು ವಿವರ ಮಾಹಿತಿ ನೀಡಿದರು.

    ಸ್ವಾತಂತ್ಯದ ನಂತರವೂ ಬ್ರಿಟಿಷ್​ ಕಾನೂನು

    ಬ್ರಿಟಿಷ್​ ಈಸ್ಟ್​ ಇಂಡಿಯಾ ಕಂಪನಿ ಭಾರತದಲ್ಲಿ ಆಡಳಿತ ನಡೆಸಿದ ಬಳಿಕ ಇಲ್ಲಿನ ಜನರ ಜೀವನ ಪದ್ಧತಿಯೇ ಬದಲಾಗಿ ಹೋಯಿತು. ವ್ಯಾಪಾರಕ್ಕಾಗಿ ಅನ್ಯದೇಶದಿಂದ ಭಾರತಕ್ಕೆ ಬಂದ ಆ ಅಲ್ಪಸಂಖ್ಯಾತರು, ಇಲ್ಲಿ ಆಡಳಿತ ನಡೆಸಲು ಬಹುಸಂಖ್ಯಾತರಾದ ಭಾರತೀಯರ ಮೇಲೆ ಬ್ರಿಟಿಷ್​ ಕಾನೂನುಗಳನ್ನು ಹೇರಿದರು. 1962ರಲ್ಲಿ ‘ಇಂಡಿಯನ್​ ಪೆನಲ್​ ಕೋಡ್​’ ಎಂಬ ಕಾನೂನು ಜಾರಿಗೆ ತಂದು ಭಾರತೀಯರು ಏನು ಮಾಡಿದರೂ ತಪ್ಪು ಎಂದು ಬಂಧಿಸಿ, ಜೈಲು ಶಿಕ್ಷೆ ವಿಧಿಸಿದರು. ಅಂದಿನ ಬ್ರಿಟಿಷ್​ ಕಾನೂನು ಸ್ವಾತಂತ್ಯದ ನಂತರವೂ ಮುಂದುವರಿದಿದ್ದು, 2024ರ ಜೂ.30ರ ವರೆಗೆ ಮಾತ್ರ ಇರಲಿದೆ ಎಂದರು.

    ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದಿನೇಶ್​ ಹೆಗ್ಡೆ, ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ್​ ಸುವರ್ಣ ಉಪಸ್ಥಿತರಿದ್ದರು.

    ವಕೀಲೆ ರೂಪಶ್ರೀ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವಿಣಕುಮಾರ್​ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ರಾಜೇಶ್​ ಎ.ಆರ್​. ವಂದಿಸಿದರು. ಲೋಕಾಯುಕ್ತ ವಿಶೇಷ ಅಭಿಯೋಜಕ ಟಿ.ವಿಜಯಕುಮಾರ್​ ಶೆಟ್ಟಿ ನಿರೂಪಿಸಿದರು.

    ಹೊಸ ಕಾನೂನಿನಲ್ಲಿ ಅನೇಕ ಮಾರ್ಪಾಡು

    ಬ್ರಿಟಿಷ್​ ಕಾಲದ ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವು ಹೊಸ ಹೆಸರು ಮತ್ತು ಕೋಡ್​ ಮೂಲಕ ಬದಲಾಗಿ ಜಾರಿಗೊಳ್ಳುತ್ತಿದೆ. ಕಾಯ್ದೆ 45, 46, 47 -2023 ಇವುಗಳನ್ನು ಲೋಕಸಭೆಯಲ್ಲಿ ಮಂಡಿಸಿ, ಚರ್ಚಿಸಲಾಯಿತು. ಬಳಿಕ ಇನ್ನಷ್ಟು ತಿದ್ದುಪಡಿ ಮಾಡಿ, 2023ರ ಡಿಸೆಂಬರ್​ 25ರಂದು ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಮಂಡನೆಯಾಗಿ, ರಾಷ್ಟ್ರಪತಿಗಳಿಂದ ಅಂಕಿತವೂ ದೊರೆತು ಜಾರಿಗೊಳ್ಳಲಿದೆ. ಹೊಸ ಕಾಯ್ದೆಗಳಲ್ಲಿ ಅಪರಾಧಿಕ ಪ್ರಕರಣಗಳಿಗೆ ಸಂಬಂಧಿಸಿ ಸೆಕ್ಷನ್​ಗಳನ್ನೂ ಸಹ ಬದಲಾವಣೆ ಮಾಡಲಾಗಿದ್ದು, ಪ್ರಕರಣಗಳ ತನಿಖೆ, ಸಾಕ್ಷ್ಯ ಸಂಗ್ರಹ, ತೀರ್ಪು ಇವುಗಳಿಗೂ ಸಹ ಕನಿಷ್ಠ 45 ದಿನದಿಂದ ಗರಿಷ್ಠ 90 ದಿನಗಳ ಚೌಕಟ್ಟನ್ನೂ ಅಳವಡಿಸಲಾಗಿದೆ. ಹೊಸ ಕಾಯ್ದೆ ಅನುಸರಣೆ ಬಳಿಕ ಆಗಬಹುದಾದ ತೊಡಕುಗಳು ತಿಳಿದುಬರಲಿವೆ. ಒಟ್ಟಿನಲ್ಲಿ ಹೊಸ ಕಾನೂನುಗಳು ಭಾರತೀಯರ ಹಿತರಕ್ಷಣೆಗಾಗಿಯೇ ಮಾಡಿರುವುದು ವಿಶೇಷವಾಗಿದೆ ಎಂದು ಪ್ರಭಾಕರ ಶಾಸ್ತ್ರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts