More

    ನ್ಯಾಯಾಧೀಶ-ವಕೀಲರು ನಾಣ್ಯದ ಎರಡು ಮುಖವಿದ್ದಂತೆ

    ಜಿಲ್ಲಾ ನ್ಯಾ. ಶಾಂತವೀರ ಶಿವಪ್ಪ ಅಭಿಪ್ರಾಯ — ವರ್ಗಾವಣೆಗೊಂಡವರಿಗೆ ಬೀಳ್ಕೊಡುಗೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಸರ್ಕಾರಿ ಸೇವೆಗೆ ಸೇರಿದಾಗ ವರ್ಗಾವಣೆ ಹಾಗೂ ನಿವೃತ್ತಿ ಎಂಬ ಈ ಎರಡು ವಿಷಯ ಗ್ಯಾರಂಟಿ. ಆದರೆ, ಇವೆರಡರ ನಡುವಿನ ಅವಧಿಯಲ್ಲೆ ಹೇಗೆ ಕಾರ್ಯ ನಿರ್ವಹಿಸಿದ್ದೇವೆ ಎನ್ನುವುದು ಬಹಳ ಪ್ರಮುಖವಾಗಿರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶ ಹಾಗೂ ವಕೀಲರು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ವರ್ಗಾವಣೆಗೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಭಿಪ್ರಾಯಪಟ್ಟರು.

    ಉಡುಪಿ ಜಿಲ್ಲಾ ನ್ಯಾಯಾಲಯದ ಹೊರಾವರಣದಲ್ಲಿ ಜಿಲ್ಲಾ ವಕೀಲರ ಸಂಘ (ರಿ.) ಉಡುಪಿ ಸೋಮವಾರ ಆಯೋಜಿಸಿದ್ದ ವರ್ಗಾವಣೆಗೊಂಡ ಏಳು ನ್ಯಾಯಾಧೀಶರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    18.50 ಕೋಟಿ. ರೂ. ಮಂಜೂರು

    ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಕೆಲವೊಮ್ಮೆ ನ್ಯಾಯಾಧೀಶರು ವಕೀಲರ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿರುತ್ತೇವೆ. ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು ಎನ್ನುವುದೇ ಅದಕ್ಕೆ ಕಾರಣವಾಗಿರುತ್ತದೆ. ಆ ರೀತಿ ಹೈಕೋರ್ಟ್​ನಿಂದಲೂ ನಮಗೆ ಮಾರ್ಗಸೂಚಿ ಇರುತ್ತದೆ. ನನ್ನ ಅವಧಿಯಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯದ ಹೊಸ ಸಂಕೀರ್ಣ ನಿರ್ಮಾಣಕ್ಕೆ 18.50 ಕೋಟಿ. ರೂ. ಮಂಜೂರಾತಿ ದೊರೆತಿದ್ದು, ಉಡುಪಿಯಲ್ಲಿ ಕೆಲಸ ಮಾಡಿದ್ದು ಬಹಳ ಖುಷಿ ಕೊಟ್ಟಿದೆ ಎಂದರು.

    ವಕೀಲರ ಕ್ಷಮೆ ಯಾಚಿಸುವೆ

    2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್​ ಹೆಗ್ಡೆ ಮಾತನಾಡಿ, ಪ್ರಕರಣಗಳ ಕಲಾಪದ ಸಂದರ್ಭದಲ್ಲಿ ನ್ಯಾಯದ ವಿಚಾರವಾಗಿ ನಿಷ್ಠುರವಾಗಿರಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಕೀಲರ ಮನಸ್ಸಿಗೆ ಬೇಸರ ಮೂಡಿದ್ದಲ್ಲಿ ಈಗ ಕ್ಷಮೆಯಾಚಿಸುತ್ತೇನೆ. ಇಲ್ಲಿಂದ ವರ್ಗಾವಣೆಗೊಳ್ಳುತ್ತಿರುವುದಕ್ಕೆ ಬೇಸರವಿದ್ದರೂ, ಇಲ್ಲಿನ ಸಂಸತಿಯನ್ನು ನನ್ನ ಜತೆ ಕೊಂಡೊಯ್ಯುತ್ತಿರುವ ಸಂತಸವಿದೆ ಎಂದರು.

    ನ್ಯಾಯಾಧೀಶರಿಗೆ ಶುಭ ಹಾರೈಕೆ

    ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠ ಡಾ.ಕೆ.ಅರುಣಕುಮಾರ್​ ಮಾತನಾಡಿ, ಜಿಲ್ಲಾ ನ್ಯಾಯಾಧೀಶರುಗಳ ಕರ್ತವ್ಯದ ಬದ್ಧತೆಯ ಜತೆಗೆ ಅವರಲ್ಲಿನ ಅಂತ:ಕರಣ ಹಾಗೂ ಮಾನವೀಯ ಬಾಂಧವ್ಯ ಹೊಂದಿದ್ದನ್ನೂ ಕೆಲ ಟನೆಗಳ ಸಹಿತ ತಿಳಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ್​, ಹಿರಿಯ ವಕೀಲರಾದ ಆನಂದ ಮಡಿವಾಳ, ಎಚ್​.ರಾಘವೇಂದ್ರ ಶೆಟ್ಟಿ ಮಾತನಾಡಿ, ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳ ಕಾರ್ಯವೈಖರಿ, ಆತ್ಮೀಯತೆ ಹಾಗೂ ನ್ಯಾಯಾಂಗ ಕಲಾಪಗಳಲ್ಲಿನ ಬದ್ಧತೆ ವಿವರಿಸಿ ಶುಭಾಂಶನೆಗೈದರು. ನ್ಯಾಯಾಧೀಶ ಶ್ರೀನಿವಾಸ್​ ಉಪಸ್ಥಿತರಿದ್ದರು.
    ವಕೀಲೆ ರಮ್ಯಾ ಕಾಮತ್​ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್​ ಪ್ರವಿಣಕುಮಾರ್​ ಪಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್​ ಎ.ಆರ್​. ವಂದಿಸಿದರು. ವಕೀಲೆ ಸಹನಾ ಕುಂದರ್​ ಕಾರ್ಯಕ್ರಮ ನಿರೂಪಿಸಿದರು.

    ಜಿಲ್ಲೆಯ ಏಳು ನ್ಯಾಯಮೂರ್ತಿಗಳಿಗೆ ಸನ್ಮಾನ

    ಉಡುಪಿ ಜಿಲ್ಲಾ ನ್ಯಾಯಾಲಯದಿಂದ ವರ್ಗಾವಣೆಗೊಳ್ಳುತ್ತಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್​ ಹೆಗ್ಡೆ, ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶ ವಿಘ್ನೇಶಕುಮಾರ್​, 2ನೇ ಹೆಚ್ಚುವರಿ ಹಿರಿಯ ಸಿವಿಲ್​ ನ್ಯಾಯಾಧೀಶ ಸೋಮನಾಥ, ಹಿರಿಯ ಸಿವಿಲ್​ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​., ಪ್ರಧಾನ ಸಿವಿಲ್​ ನ್ಯಾಯಾಧೀಶೆ ದೀಪಾ, ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ಶ್ಯಾಮ್​ ಪ್ರಕಾಶ್​ ಇವರನ್ನು ವಕೀಲರ ಸಂದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

    ಅನೈತಿಕ ಸಂಬಂಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಇದರಿಂದ ದ್ವೇಷಮಯ ವಾತಾವರಣ ಉಂಟಾಗಿ, ಹತ್ಯೆಯಂತಹ ಕೃತ್ಯವೂ ಹೆಚ್ಚುತ್ತಲಿದೆ. ಪೊಲೀಸ್​ ಠಾಣೆ ಹಾಗೂ ನ್ಯಾಯಾಲಯದಲ್ಲಿ ಶನಿ ಇರುತ್ತಾನೆ. ಇಲ್ಲಿಗೆ ಬರುವವರ ಬೆನ್ನೇರಿ ಕಾಡುತ್ತಾನೆ. ಹೀಗಾಗಿ ದ್ವೇಷಭಾವ ಬಿಡಿ, ಎಲ್ಲರನ್ನೂ ಪ್ರೀತಿಸಿ. ಪ್ರೀತಿಯ ಬದುಕಿನಿಂದ ಅಪರಾಧ ಪ್ರಕರಣ ಘಟಿಸದು.

    ಶ್ಯಾಮ್​ಪ್ರಕಾಶ್​.
    ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts