More

    ಹೈವೆ ಕಾಮಗಾರಿಗೆ ನೀರಿನ ಕೊರತೆ

    ನೀರು ನದಿ, ಕಿಂಡಿ ಅಣೆಕಟ್ಟೆ, ಬಾವಿ, ಕೆರೆಗಳಲ್ಲಿ ಬತ್ತಿದ ಪರಿಣಾಮವಾಗಿ ಹೆದ್ದಾರಿ ಕಾಮಗಾರಿಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. –ನರೇಂದ್ರ ಎಸ್. ಮರಸಣಿಗೆ ಹೆಬ್ರಿ

    ನದಿ, ಕಿಂಡಿ ಅಣೆಕಟ್ಟೆ, ಬಾವಿ, ಕೆರೆಗಳಲ್ಲಿ ನೀರು ಬತ್ತಿದ ಪರಿಣಾಮವಾಗಿ ಹೆದ್ದಾರಿ ಕಾಮಗಾರಿಗೆ ಬಹುದೊಡ್ಡ ಹೊಡೆತ ಬಿದ್ದಿದ್ದು, ರಸ್ತೆ ನಿರ್ಮಾಣವಾಗುವ ಸ್ಥಳದಲ್ಲಿ ದಿನಕ್ಕೆ ಒಂದೆರಡು ಬಾರಿ ಮಾತ್ರ ನೀರು ಸಿಂಪಡಿಸುತ್ತಿರುವುದರಿಂದ ಹಿರಿಯಡ್ಕದಿಂದ ಹೆಬ್ರಿ ತನಕ ಧೂಳು ಜನರನ್ನು ಕಾಡುತ್ತಿದೆ.

    ರಾಷ್ಟ್ರೀಯ ಹೆದ್ದಾರಿ 169ಎ ಕೆಲಸ ಹೆಬ್ರಿಯಿಂದ ಹಿರಿಯಡ್ಕದ ತನಕ ಭರದಿಂದ ಸಾಗುತ್ತಿದೆ. ನೀರು ಧಾರಾಳವಾಗಿ ಸಿಗುತ್ತಿರುವಾಗ ದಿನಕ್ಕೆ 4-5 ಬಾರಿ ಸಿಂಪಡಿಸಿ ಧೂಳು ಏಳದಂತೆ ಮಾಡುತ್ತಿದ್ದರು. ಆದರೆ ಈಗ ನದಿ, ಕಿಂಡಿಅಣೆಕಟ್ಟೆಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ಆದ್ದರಿಂದ ಧೂಳು ನಿವಾರಣೆ ಸವಾಲಾಗಿದೆ. ಕೆಲವೊಂದು ವಾಹನಗಳು ವಿಪರೀತ ವೇಗದಲ್ಲಿ ಚಲಿಸುವಾಗ ಧೂಳು ಮುಗಿಲೆತ್ತರಕ್ಕೆ ಏಳುತ್ತದೆ. ಬೈಕ್ ಸವಾರರು ಚಲಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ. ಸಂಬಂಧಪಟ್ಟವರು ಪರ್ಯಾಯವಾಗಿ ಏನಾದರೂ ಮಾರ್ಗ ಹುಡುಕಬೇಕಾಗಿದೆ.

    ನೀರು ಇಲ್ಲ

    ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ಸಣ್ಣ ಸೇತುವೆ, ದೊಡ್ಡ ಸೇತುವೆ, ತಡೆಗೋಡೆ ನಿರ್ಮಾಣವಾಗುತ್ತಿದೆ. ಬಹುತೇಕ ಅಂತಿಮ ಹಂತದಲ್ಲಿದೆ. ಸಮರ್ಪಕವಾಗಿ ಕ್ಯೂರಿಂಗ್ ಆಗದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗುತ್ತದೆ. ಆದರೆ ಕ್ಯೂರಿಂಗ್‌ಗೆ ಅಗತ್ಯವಿರುವಷ್ಟು ನೀರು ಹೊಂದಿಸುವುದು ಕಷ್ಟವಾಗುತ್ತಿದೆ.

    ಕೆಲಸಗಾರರಿಗೂ ಸಂಕಷ್ಟ

    ಹೆದ್ದಾರಿಯ ಕೆಲಸಗಾರರಿಗೆ ನಿತ್ಯದ ಉಪಯೋಗಕ್ಕೆ ನೀರು ಸಿಗುತ್ತಿಲ್ಲ. ಹರಿಯದೆ ನಿಂತ ನೀರು ಬಳಸುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮವಾಗುತ್ತಿದೆ.

    ರೈತರ ಆಕ್ರೋಶ

    ಪುತ್ತಿಗೆ ಬಳಿ ಸ್ವರ್ಣಾ ನದಿಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವಲ್ಲಿ ರಸ್ತೆಗೆ ನೀರಾಯಿಸಲು ನೀರು ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ರೈತರು ನಮಗೆ ಕೃಷಿಗೆ ಬಳಸಲು ವಾರದಲ್ಲಿ ಎರಡು ದಿನ ಮಾತ್ರ ಅವಕಾಶ ಮಾಡಿ ಕೊಟ್ಟಿದ್ದೀರಿ, ಕಾಮಗಾರಿಗೆ ನೀರು ಬೃಹತ್ ಪ್ರಮಾಣದಲ್ಲಿ ನೀಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿ ಉಡುಪಿ ನಗರಸಭೆಗೆ ದೂರು ನೀಡಿದ್ದಾರೆ.

    road work
    ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುವ ವಿಪರೀತ ಧೂಳು ಏಳುತ್ತಿರುವುದು.

    ಪ್ರಕರಣ ದಾಖಲು

    ಕೃಷಿಗೆ ನೀರಿಲ್ಲದಿರುವಾಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಯಥೇಚ್ಛವಾಗಿ ನೀರು ಬಳಸುತ್ತಿರುವುದನ್ನು ಗಮನಿಸಿ ದೂರು ದಾಖಲಿಸಿದ ಪರಿಣಾಮವಾಗಿ, ಉಡುಪಿ ನಗರಸಭೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿದೆ. ಅಲ್ಲದೆ ನೀರು ತೆಗೆಯದಂತೆ ಎಚ್ಚರಿಕೆ ನೀಡಿದ್ದಾರೆ. ಈ ತಿಂಗಳಲ್ಲಿ ಮಳೆ ಸುರಿಯದಿದ್ದರೆ ನೀರಿನ ಸಮಸ್ಯೆ ತೀವ್ರಗೊಳ್ಳಬಹುದು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಹಿನ್ನಡೆಯಾಗಿ ಪೂರ್ತಿಯಾಗಲು ವಿಳಂಬವಾಗಬಹುದು. ರಸ್ತೆಯಲ್ಲಿ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುವಾಗ ಧೂಳಿನ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಬಹುತೇಕ ಕಡೆಗಳಲ್ಲಿ ಮಣ್ಣು ಅಗೆದ ಕಾರಣ ಹೆಬ್ರಿಯಿಂದ ಹಿರಿಯಡ್ಕದ ತನಕ ಧೂಳು ಕಾಡುತ್ತದೆ.

    ರಾಷ್ಟ್ರೀಯ ಹೆದ್ದಾರಿಯ ಕೆಲಸ ನಡೆಯುತ್ತಿದೆ. ಆದರೆ ನೀರಿನ ಸಮಸ್ಯೆಯಿಂದಾಗಿ ಅನೇಕ ತೊಂದರೆಗಳು ಆಗುತ್ತಿವೆ. ಒಂದೆಡೆ ನೀರು ತೆಗೆಯಬೇಡಿ ಎಂದು ಪ್ರಕರಣ ದಾಖಲು, ಮತ್ತೊಂದೆಡೆ ರಸ್ತೆಗೆ ನೀರು ಸಿಂಪಡಿಸಿಲ್ಲವೆಂದು ದೂರು ದಾಖಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ನೀರು ತರಿಸಿ ರಸ್ತೆಯ ಧೂಳು ನಿವಾರಿಸಿ ಕಾಮಗಾರಿ ಮಾಡಲಾಗುತ್ತಿದೆ.
    -ಮಂಜುನಾಥ್ ನಾಯ್ಕ್, ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ

    ರೈತರಿಗೆ ಕೃಷಿ ಚಟುವಟಿಕೆಗೆ ವಾರದಲ್ಲಿ ಎರಡು ದಿನ ಬಳಸಲು ಅನುಮತಿ ನೀಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಯಥೇಚ್ಛವಾಗಿ ನೀರು ಬಳಸುತ್ತಿರುವ ಕುರಿತು ರೈತರು ದೂರು ನೀಡಿದಾಗ, ನೀರು ತೆಗೆಯದಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ.
    -ರಮೇಶ್ ಪಿ ನಾಯ್ಕ್, ಕಮಿಷನರ್, ಉಡುಪಿ ನಗರಸಭೆ

    ರಸ್ತೆಗೆ ಸಮರ್ಪಕವಾಗಿ ನೀರು ಸಿಂಪಡಿಸದರಿವುದರಿಂದ ಧೂಳಿನಿಂದಾಗಿ ಬೈಕ್ ಸವಾರರಿಗೆ ಸಮಸ್ಯೆಯಾಗುತ್ತಿದೆ. ಕೆಲವೊಂದು ವಾಹನಗಳು ವಿಪರೀತ ವೇಗದಲ್ಲಿ ಚಲಿಸುವಾಗ ಬಾನೆತ್ತರಕ್ಕೆ ಧೂಳು ಹಾರುತ್ತದೆ. ನೀರಿನ ಸಮಸ್ಯೆ ಇದೆ, ಆದರೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ.
    -ರವೀಶ್, ಬೈಕ್ ಸವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts