ನೆಟ್ಟಣಿಗೆ ಮುಡ್ನೂರು ವ್ಯಾಪ್ತಿ ನೀರಿನ ಸಮಸ್ಯೆ

water problem
Published on

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಜನರಿಗೆ ತುರ್ತಾಗಿ ಕುಡಿಯುವ ನೀರು ಪೂರೈಕೆ ಮಾಡಲು ನಾಲ್ಕು ಕಡೆಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಲು ಹಾಗೂ ಬದಲಿ ನೀರಿನ ವ್ಯವಸ್ಥೆ ಕಲ್ಪಿಸಲು ಪೈಪ್‌ಲೈನ್ ವಿಸ್ತರಣೆಗಾಗಿ ಅನುದಾನ ಮಂಜೂರುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿ ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕ್ಷೇತ್ರದ ಶಾಸಕರಿಗೆ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಪಂಚಾಯಿತಿ ವತಿಯಿಂದ ಮನವಿ ಸಲ್ಲಿಸಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಇರುವ ಕುಡಿಯುವ ನೀರು ಸರಬರಾಜು ಯೋಜನೆ ಕೊಳವೆಬಾವಿಗಳು ಕಳೆದ 2 ತಿಂಗಳಿಂದ ಬತ್ತಿ ಹೋಗಿದ್ದು, ಚಿಮಿಣಿಗುಡ್ಡೆ, ನಡುಬೈಲು, ಕರ್ನೂರು ಸೊಸೈಟಿ ಬಳಿ ಹಾಗೂ ಚಾರ್ಪಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಪ್ರದೇಶದಲ್ಲಿ ತುರ್ತು ಕೊಳವೆ ಬಾವಿಗಳ ಅವಶ್ಯಕತೆ ಇದೆ. ಬದಲಿ ನೀರಿನ ವ್ಯವಸ್ಥೆ ಕಲ್ಪಿಸಲು ಮಾಡದಗುಡ್ಡೆ, ಸುರುಳಿಮೂಲೆ (ಗುತ್ತು), ಗುಜಿರಮೂಲೆ-ಕುದ್ರೋಳಿ ಎಂಬ ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ವಿಸ್ತರಣೆಯ ಅವಶ್ಯಕತೆಯೂ ಇದೆ ಎಂದು ಪಂಚಾಯಿತಿ ವತಿಯಿಂದ ನೀಡಲಾದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಚಿಮಿಣಿಗುಡ್ಡೆ, ನಡುಬೈಲು, ಕರ್ನೂರು ಸೊಸೈಟಿ ಬಳಿ ಹಾಗೂ ಚಾರ್ಪಟ್ಟೆ ಪ್ರದೇಶದಲ್ಲಿ ತುರ್ತಾಗಿ ಹೊಸ ಕೊಳವೆಬಾವಿ ಕೊರೆಯಲು ಹಾಗೂ ಪೈಪ್‌ಲೈನ್ ವಿಸ್ತರಣೆಗೆ ಅನುದಾನ ಮಂಜೂರು ಮಾಡಲು ಕ್ರಮಕೈಗೊಳ್ಳಬೇಕೆಂದು ಪಂಚಾಯಿತಿ ವತಿಯಿಂದ ಸಲ್ಲಿಸಲಾದ ಪತ್ರದಲ್ಲಿ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net