ಇದು ಹೀಗೆ ಮುಂದುವರಿದ್ರೆ ಸಿನಿಮಾ ಥಿಯೇಟರ್​ಗಳನ್ನೇ ಮುಚ್ಚಬೇಕಾಗುತ್ತೆ: ಸುಪ್ರೀಂ ಕೋರ್ಟ್​ ಎಚ್ಚರಿಕೆ! Movie theaters

Movie theaters
Published on

ನವದೆಹಲಿ: ಟಿಕೆಟ್​ ಸೇರಿದಂತೆ ಚಿತ್ರಮಂದಿರಗಳಲ್ಲಿ ( Movie theaters ) ಮಾರಾಟವಾಗುವ ವಸ್ತುಗಳ ಬೆಲೆ ಯಾವ ಮಟ್ಟಕ್ಕೆ ಏರಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಅದರಲ್ಲೂ ಮಲ್ಟಿಫ್ಲೆಕ್ಸ್​ಗಳಲ್ಲಿನ ದರ ಅತಿ ದುಬಾರಿಯಾಗಿದೆ. ಎಷ್ಟರ ಮಟ್ಟಿಗೆ ಅಂದರೆ, ಸಾಮಾನ್ಯ ಜನರು ಅಥವಾ ಮಧ್ಯಮ ವರ್ಗದವರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಹಿಂದೆ-ಮುಂದೆ ಯೋಚನೆ ಮಾಡುವಂತಾಗಿದೆ. ಇದನ್ನು ಗಮನಿಸಿರುವ ದೇಶದ ಉನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್​ ಚಿತ್ರಮಂದಿರಗಳಿಗೆ ಚಾಟಿ ಬೀಸಿದೆ.

ಹೌದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ಚಿತ್ರಮಂದಿರಗಳಲ್ಲಿನ ಬೆಲೆ ಏರಿಕೆಯ ಬಗ್ಗೆ ಗಂಭೀರ ನಿಲುವು ತೆಗೆದುಕೊಂಡಿದೆ. ಪ್ರತಿಯೊಂದು ವಸ್ತುವಿನ ಬೆಲೆ ಕೇಳಿ ಅಚ್ಚರಿ ವ್ಯಕ್ತಪಡಿಸಿದೆ. ಟಿಕೆಟ್​ ಸೇರಿದಂತೆ ಚಿತ್ರಮಂದಿರಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳಿಗೆ ದೊಡ್ಡ ಮೊತ್ತವನ್ನು ವಿಧಿಸುವುದು ದೊಡ್ಡ ತಪ್ಪು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನೀರಿನ ಬಾಟಲಿಗೆ 100 ರೂಪಾಯಿ ಮತ್ತು ಒಂದು ಕಪ್ ಕಾಫಿಗೆ 700 ರೂಪಾಯಿ ವಿಧಿಸುತ್ತಾರೆಯೇ? ಎಂದು ನ್ಯಾಯಾಲಯ ಆಕ್ರೋಶ ಹೊರಹಾಕಿದೆ. ಟಿಕೆಟ್‌ಗಳು ಮತ್ತು ಆಹಾರ ಪದಾರ್ಥಗಳ ಬೆಲೆಗಳು ಸಾರ್ವಜನಿಕರ ಕೈಗೆಟುಕದಿದ್ದರೆ, ಖಂಡಿತವಾಗಿಯೂ ಚಿತ್ರಮಂದಿರಗಳು ಖಾಲಿಯಾಗುತ್ತವೆ ಎಂದು ಸರ್ವೋಚ್ಛ ನ್ಯಾಯಲಯ ಹೇಳಿದೆ.

ಟಿಕೆಟ್ ದರಗಳಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಲೆಗಳು ಗಗನಕ್ಕೇರಿವೆ. ಕನಿಷ್ಠ ಟಿಕೆಟ್ ಬೆಲೆಯೇ 200 ರೂ.ಗಳಿಗಿಂತ ಹೆಚ್ಚಿದೆ. ನೀರಿನ ಬಾಟಲಿಗೆ 100 ಮತ್ತು ಕಾಫಿಗೆ 700 ರೂಪಾಯಿ ಇದೆ. ಅಲ್ಲದೆ, ಸಾಮಾನ್ಯ ಪಾಪ್​ಕಾರ್ನ್​ ಬೆಲೆ 500 ರೂ. ಇದೆ. ಇದಕ್ಕೆ ಕ್ಯಾರೆಮಲ್​ ಮತ್ತು ಚೀಸ್​ ಸೇರಿಸಿದರೆ 700 ರೂ. ತೆಗೆದುಕೊಳ್ಳುತ್ತಾರೆ. ಈ ಬೆಲೆ ಏರಿಕೆಯಿಂದ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳು ಮಲ್ಟಿಪ್ಲೆಕ್ಸ್‌ಗಳಿಗೆ ಕಾಲಿಡುವುದೇ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ತನ್ನ ಅಸಮಾಧಾನ ಹೊರಹಾಕಿದೆ. ಬೆಲೆಗಳು ಹೀಗೆ ಮುಂದುವರಿದರೆ ಮುಂದೊಂದು ದಿನ ಸಿನಿಮಾ ಮಂದಿರಗಳನ್ನು ಮುಚ್ಚಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಒಬ್ಬ ಸಾಮಾನ್ಯ ವ್ಯಕ್ತಿ ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್‌ಗೆ ಹೋದರೆ, ಆತ 1,500 ರಿಂದ 2,000 ರೂ.ಗಳನ್ನು ಖರ್ಚು ಮಾಡಬೇಕಾಗಿದೆ. ಅಂದರೆ, ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ನೀವು ಇದರಿಂದ ಅರ್ಥಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿತು.

ಅಂದಹಾಗೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ 200 ರೂ.ಗಳನ್ನು ಮೀರಬಾರದು ಎಂದು ಕರ್ನಾಟಕ ಸರ್ಕಾರ ಇತ್ತೀಚೆಗೆ ಆದೇಶಿಸಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನೆ ಮಾಡಿ ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಇತ್ತೀಚೆಗೆ ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿತು.

ಟಿಕೆಟ್‌ಗಳು ಮತ್ತು ಆಹಾರ ಪದಾರ್ಥಗಳ ಬೆಲೆಗಳು ಜನರಿಗೆ ಕೈಗೆಟುಕದಿದ್ದರೆ, ಚಿತ್ರಮಂದಿರಗಳು ಖಂಡಿತವಾಗಿಯೂ ಖಾಲಿಯಾಗುತ್ತವೆ. ಟಿಕೆಟ್ ಬೆಲೆ 200 ರೂ. ಮೀರಬಾರದು ಎಂಬ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ನಾವು ಬೆಂಬಲಿಸುತ್ತೇವೆ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು. ಜನರು ಬಂದು ಚಿತ್ರವನ್ನು ಆನಂದಿಸುವ ರೀತಿಯಲ್ಲಿ ಬೆಲೆಗಳು ಇರಬೇಕು. ಇಲ್ಲದಿದ್ದರೆ, ಸಿನಿಮಾ ಮಂದಿರಗಳು ಮರುಭೂಮಿಯಂತಾಗುತ್ತವೆ ಎಂದು ಎಚ್ಚರಿಸಿದರು.

ಅಂದಹಾಗೆ, ಪ್ರಸ್ತುತ ಸಿನಿಮಾ ಮಂದಿರಗಳಲ್ಲಿ ಪಾಪ್‌ಕಾರ್ನ್‌ನ ಬೆಲೆ 500 ರೂಪಾಯಿಗಳವರೆಗೆ ಇದೆ. ಹೊರಗೆ 50 ರೂಪಾಯಿಗೆ ಸಿಗುವ ಕೂಲ್ ಡ್ರಿಂಕ್‌ನ ಬೆಲೆ ಥಿಯೇಟರ್‌ಗಳಲ್ಲಿ 400 ರೂಪಾಯಿಗಳು. ಅರ್ಧ ಲೀಟರ್ ನೀರಿನ ಬಾಟಲಿಯ ಬೆಲೆ 100 ರೂಪಾಯಿಗಳು. ಇದೆಲ್ಲವನ್ನು ಗಮನಿಸಿರುವ ನ್ಯಾಯಾಲಯ ಥಿಯೇಟರ್​ ಮಾಲೀಕರಿಗೆ ಖಡಕ್​ ಸಂದೇಶವನ್ನು ರವಾನಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net