More

  ರಾಜ್ಯದಲ್ಲಿ ನಡೆಯಲಿದೆ ನೀರಿನ ಆಡಿಟ್

  |ರುದ್ರಣ್ಣ ಹರ್ತಿಕೋಟೆ ಬೆಂಗಳೂರು
  ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಸೃಷ್ಟಿಯಾಗಲಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿ ಅವಧಿಯಲ್ಲಿ ಲಭ್ಯ ನೀರಿನ ವೈಜ್ಞಾನಿಕ ನಿರ್ವಹಣೆಗೆ ಅನುಕೂಲವಾಗುವಂತೆ ಸರ್ಕಾರ ನೀರಿನ ಮೂಲಗಳ ಲೆಕ್ಕ ಪರಿಶೋಧನೆ (ವಾಟರ್ ಆಡಿಟ್) ಮಾಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

  ನೀರಿನ ಕೊರತೆಯಾದಂತೆ ಫ್ಲೋರೈಡ್, ಜಿಂಕ್ ಸೇರಿದಂತೆ ರಾಸಾಯನಿಕ ಅಂಶಗಳು ಸೇರಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ತಾಪಮಾನ ಹೆಚ್ಚಾದಂತೆ ನೀರಿನ ಮೂಲಗಳು ನಾಶವಾಗುವ ಸಾಧ್ಯತೆಗಳಿವೆ. ಆದ್ದರಿಂದ ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗುವುದನ್ನು ತಪ್ಪಿಸಲು ಸರ್ಕಾರ ಇರುವ ಮೂಲಗಳ ಸಂರಕ್ಷಣೆಯ ಅಗತ್ಯವನ್ನು ಮನಗಂಡಿದೆ. ರಾಜ್ಯದಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ. ಒಂದು ದಶಕದ ಅವಧಿಯಲ್ಲಿ ಬಯಲುಸೀಮೆ ಮಾತ್ರವಲ್ಲ ಮಲೆನಾಡು, ಪಶ್ಚಿಮಘಟ್ಟ, ಕರಾವಳಿಯಲ್ಲಿಯೂ ನೀರಿನ ಕೊರತೆ ಕಾಣಿಸಲಾರಂಭಿಸಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ನೀರಿನ ತೀವ್ರ ಅಭಾವ ಕಾಣಿಸಿಕೊಳ್ಳಲಿದೆ. ಆದ್ದರಿಂದಲೇ ಸರ್ಕಾರ ವಾಟರ್ ಆಡಿಟ್ ಮೂಲಕ ನೀರಿನ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ವಾಟರ್ ಆಡಿಟ್ ಮಾಡುವ ಮೂಲಕ ಬಳಕೆಗೆ ಯೋಗ್ಯವಾದ ಹಾಗೂ ಯೋಗ್ಯವಲ್ಲದ ನೀರು ಯಾವುದು ಎಂಬುದನ್ನು ಗುರುತಿಸಲಾಗುತ್ತದೆ. ಇದುವರೆಗೂ ಇಂತಹ ಪ್ರಯತ್ನವೇ ಆಗಿಲ್ಲ. ಆಡಿಟ್ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ನೀರು ಸರಬರಾಜು ಮಾಡಲು ಸಾಧ್ಯವಾಗಲಿದೆ ಎಂಬುದು ಸರ್ಕಾರದ ಅಭಿಪ್ರಾಯ. ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಣಕಾಸಿನ ನೆರವು ಇದೆ. ಆದ್ದರಿಂದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾದರೆ ಆಡಿಟ್ ಮಾಡಲೇಬೇಕಾಗಿದೆ.

  ನೀರಿನ ಮೂಲಗಳ ಪರಿಶೋಧನೆ ಏಕೆ?

  ಎಲ್ಲರಿಗೂ ದಿನದ 24 ಗಂಟೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಸರಬರಾಜು ಮಾಡುವುದೇ ಜಲಜೀವನ್ ಮಿಷನ್​ನ ಉದ್ದೇಶ . ಈ ಯೋಜನೆಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ನೀರಿನ ಮೂಲಗಳು ಎಷ್ಟಿವೆ ಎಂಬ ಮಾಹಿತಿಯೇ ಲಭ್ಯವಿಲ್ಲ.

  ರಾಜ್ಯದಲ್ಲಿ ಕೆಲವೆಡೆ ಶಾಶ್ವತ ನೀರಿನ ಮೂಲವಿದ್ದರೆ, ಇನ್ನೂ ಕೆಲವೆಡೆ ಮಳೆಗಾಲದಲ್ಲಿ ಹರಿಯುವ, ಬೋರ್​ವೆಲ್​ಗಳೇ ನೀರಿನ ಮೂಲಗಳಾಗಿವೆ. ಆದರೆ ಯಾವ ಮೂಲ ಎಷ್ಟಿದೆ ಎಂಬ ಅಂಕಿ-ಅಂಶಗಳು ಒಂದೆಡೆ ಲಭ್ಯವಾಗುವುದಿಲ್ಲ. ಕೆಲವು ಮೂಲಗಳು ಬತ್ತಿ ಹೋಗಿವೆ, ಕಲುಷಿತಗೊಂಡು ಬಳಕೆಗೆ ಯೋಗ್ಯವಲ್ಲವೆಂಬಂತೆ ಆಗಿವೆ. ಎಲ್ಲ ಅಂಕಿಅಂಶಗಳು ಒಂದೆಡೆ ಇದ್ದರೆ ಆಗ ಪುನಶ್ಚೇತನದ ಯೋಜನೆ ರೂಪಿಸಲು ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಗ್ರಾಮೀಣಾಭಿವೃದ್ದಿ ಇಲಾಖೆ ಆಡಿಟ್​ಗೆ ನಿರ್ಧರಿಸಿದೆ.

  water audit

  ಸದ್ಯ ಡೇಟಾ ಎಲ್ಲೆಲ್ಲಿ ಲಭ್ಯ?

  ನೀರಿನ ಮೂಲಗಳ ಕುರಿತಂತೆ ಈಗ ಇಸ್ರೋ, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಸಣ್ಣ ನೀರಾವರಿ ಇಲಾಖೆ, ಆರ್​ಡಿಪಿಆರ್ ಹೀಗೆ ಬೇರೆ ಬೇರೆ ಮೂಲಗಳಲ್ಲಿ ಲಭ್ಯವಿವೆ. ಆದರೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಹೀಗಾಗಿ ಇಡೀ ರಾಜ್ಯದ ನೀರಿನ ಮೂಲಗಳ ಡೇಟಾ ಒಂದೆಡೆ ಲಭ್ಯವಾದರೆ ಮಾತ್ರ ಏನಾದರೂ ಕ್ರಮ ಕೈಗೊಳ್ಳಲು ಸಾಧ್ಯವೆಂಬುದು ಸರ್ಕಾರದ ಆಲೋಚನೆ.

  ಆಡಿಟ್ ಎಲ್ಲೆಲ್ಲಿ?

  ಕೆರೆಗಳು, ಸಾರ್ವಜನಿಕ ಮತ್ತು ಖಾಸಗಿ ಬೋರ್​ವೆಲ್​ಗಳು, ಕೆರೆಗಳಿಗೆ ನೀರು ಹರಿದು ಬರುವ ಜಲಾನಯನ ಪ್ರದೇಶ, ಮೇಲ್ಮೈ ನೀರಿನ ಮೂಲಗಳು, ಮುಚ್ಚಿರುವ ಕೆರೆಗಳು, ಬೆಟ್ಟದ ತಪ್ಪಲು, ಝುರಿಗಳು ಹೀಗೆ ಎಲ್ಲೆಡೆ ನೀರಿನ ಮೂಲಗಳನ್ನು ಗುರುತಿಸಿ ಇವತ್ತಿನ ಸ್ಥಿತಿ ಏನಿದೆ? ಐತಿಹಾಸಿಕ ದಾಖಲೆಗಳು ಏನು ಸಿಗುತ್ತವೆ, ಪುನಶ್ಚೇತನಕ್ಕೆ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಆಡಿಟ್ ಮೂಲಕ ಯೋಜನೆ ರೂಪಿಸುವ ಚಿಂತನೆ ಸರ್ಕಾರದ್ದು.

  water audit

  ರಾಜ್ಯದ ನೀರಿನ ಮಾಹಿತಿ

  ರಾಜ್ಯದಲ್ಲಿ 36, 753 ಕೆರೆಗಳಿವೆ. ಇಡೀ ದೇಶದ ಮೇಲ್ಮೈ ನೀರಿನಲ್ಲಿ ಶೇ.6 ರಷ್ಟು ರಾಜ್ಯದಲ್ಲಿ ಲಭ್ಯವಾಗುತ್ತದೆ. ಅಂದಾಜು 485 ಟಿಎಂಸಿ ಅಂತರ್ಜಲ, ಪಶ್ಚಿಮಾಭಿಮುಖವಾಗಿ ಹರಿಯುವ 1,440 ಟಿಎಂಸಿ ಸೇರಿ ಒಟ್ಟಾರೆ 3,475 ಟಿಎಂಸಿ ನೀರಿನ ಲಭ್ಯತೆ ಇದೆ ಎಂಬ ಅಂದಾಜಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಶೇ.90 ರಷ್ಟು ಬೋರ್​ವೆಲ್ ಮೇಲೆ ಅವಲಂಬಿತರಾಗಿದ್ದೇವೆ.

  ಉಳಿತಾಯವಾಗುತ್ತಿದೆಯೇ?

  ಜಲಜೀವನ ಮಿಷನ್ ಯೋಜನೆ ಜಾರಿಗೆ ಬಂದ ನಂತರ ಶೇ.17 ರಷ್ಟು ನೀರಿನ ಉಳಿತಾಯವಾಗುತ್ತದೆ ಎಂಬ ಮಾಹಿತಿ ಇದೆ. ಆದರೆ ಎಲ್ಲಿಯೂ ಅದರ ಅಧ್ಯಯನ ನಿಖರವಾಗಿ ನಡೆದಿಲ್ಲ. ಆ ಬಗ್ಗೆಯೂ ಮಾಹಿತಿ ಪಡೆಯುವುದು ಸರ್ಕಾರದ ಉದ್ದೇಶ.

  ಆಡಿಟ್ ಮಾಡುವವರು ಯಾರು?

  ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರನ್ನು ಒಳಗೊಂಡ ತಂಡ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ನಿರ್ಧಾರವಾಗಿದೆ. ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಸಧ್ಯದಲ್ಲಿಯೇ ಆಡಿಟ್​ಗೆ ತಜ್ಞರ ತಂಡವನ್ನು ಪ್ರಕಟಿಸಲಾಗುತ್ತದೆ. ಈ ತಂಡ ಪ್ರತಿಯೊಂದು ಜಲಮೂಲಕ್ಕೂ ಹೋಗಿ ಪರಿಶೀಲನೆ ನಡೆಸಿ ವರದಿ ನೀಡಲಿದೆ.

  water audit

  ಮರುಪೂರಣ

  ರಾಜ್ಯದಲ್ಲಿ ಅಂದಾಜು 27 ಸಾವಿರ ಬೋರ್​ವೆಲ್​ಗಳು ಇದ್ದು ಅವುಗಳಲ್ಲಿ ಶೇ.78 ರಷ್ಟು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಕೆಲವು ಮುಚ್ಚಿ ಹೋಗಿವೆ. ಅವುಗಳನ್ನು ವಿಶೇಷ ತಂತ್ರಜ್ಞಾನದ ಮೂಲಕ ಮರು ಪೂರಣ ಮಾಡಿ ಬಳಸಲು ಯೋಗ್ಯವನ್ನಾಗಿ ಮಾಡುವುದು ಸರ್ಕಾರದ ಗುರಿ. ಇದರ ಜತೆಗೆ 948 ನೀರಿನ ಮೂಲಗಳು ಒತ್ತುವರಿಯಾಗಿವೆ ಎಂಬ ಮಾಹಿತಿ ಇದೆ. ಅದೆಲ್ಲವನ್ನೂ ತೆರವು ಮಾಡಲೇಬೇಕಾಗಿದೆ.

  ಬಾಧಿಸಲಿದೆ ಕೊರತೆ

  ತಾಪಮಾನ ಏರಿಕೆಯಿಂದಾಗಿ ರಾಜ್ಯದಲ್ಲಿ 2030ರ ವೇಳೆಗೆ ಶೇ.40 ರಷ್ಟು ಜನರಿಗೆ ನೀರಿನ ಕೊರತೆ ಕಾಡಲಿದೆ. 2,000 ಹಳ್ಳಿಗಳಲ್ಲಿ ನಿರಂತರ ಬರ ಇರುತ್ತದೆ ಎಂಬ ಮಾಹಿತಿ ಇದೆ. ರಾಜ್ಯದ ಶೇ.96 ರಷ್ಟು ಅಂತರ್ಜಲ ಕಲುಷಿತವಾಗಿದೆ. 136 ತಾಲೂಕುಗಳಲ್ಲಿ ಅಂತರ್ಜಲ ಕುಸಿದಿದೆ. ಬೆಂಗಳೂರಿನಲ್ಲಿಯೇ ಶೇ. 48 ರಷ್ಟು ನೀರು ಸೋರಿಕೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಇನ್ನೂ ಹೆಚ್ಚಾಗಿದೆ. ಕೃಷಿಗೆ ಶೇ.80 ರಷ್ಟು ನೀರು ಬಳಕೆಯಾಗುತ್ತಿದೆ ಎಂಬ ಅಂದಾಜಿದೆ. ಎಲ್ಲವನ್ನೂ ತಗ್ಗಿಸುವ ಕೆಲಸವೂ ಆಗಬೇಕಾಗಿದೆ. ಆಡಿಟ್ ವರದಿ ಬಂದ ನಂತರ ಈ ನಿಟ್ಟಿನಲ್ಲಿ ಯೋಜನೆಯೊಂದು ರೂಪುಗೊಳ್ಳುವ ಸಾಧ್ಯತೆ ಇದೆ.

  • ಬಳಕೆಗೆ ಯೋಗ್ಯ ಹಾಗೂ ಯೋಗ್ಯವಲ್ಲದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಿ ಕ್ರಮ
  • ತಜ್ಞರ ಸಮಿತಿಯಿಂದ ಆಡಿಟ್
  • ವಿವಿಧ ಇಲಾಖೆಗಳಲ್ಲಿ ತಮ್ಮದೇ ಆದ ಅಂಕಿ-ಅಂಶ
  • ಅತಿವೃಷ್ಟಿ ಮತ್ತು ಅನಾವೃಷ್ಟಿ ನಿರ್ವಹಣೆಗೆ ಸುಲಭ
  • ಅತಿವೃಷ್ಟಿ ಮತ್ತು ಅನಾವೃಷ್ಟಿ ನಿರ್ವಹಣೆಗೆ ಸುಲಭ

  ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡೂ ಸಂದರ್ಭದಲ್ಲಿ ನೀರು ನಿರ್ವಹಣೆ ಸರಿಯಾಗಿ ಮಾಡಬೇಕಾಗುತ್ತದೆ. ಕಳೆದ ಒಂದು ದಶಕದ ಅವಧಿಯಲ್ಲಿ ಕೊರತೆ ನಿಧಾನವಾಗಿ ಕಾಡಲಾರಂಭಿಸಿದೆ. ನೀರಿನ ಮೂಲಗಳನ್ನು ಕಾಪಾಡಿಕೊಳ್ಳಲೇಬೇಕಾಗಿದೆ. ಅದಕ್ಕೆ ಮೊದಲು ತಜ್ಞರಿಂದ ಆಡಿಟ್ ಮಾಡಿಸಿದರೆ ಮಾತ್ರ ಸ್ಪಷ್ಟ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ.

  | ಪ್ರಿಯಾಂಕ್ ಖರ್ಗೆ ಆರ್​ಡಿಪಿಆರ್ ಸಚಿವ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts