ಯುಎಸ್​ಎ ಗೆಲುವಿನ ರೂವಾರಿ ಆರನ್​ ಜೋನ್ಸ್​ಗೆ ವಿರಾಟ್​ ಕೊಹ್ಲಿ ಸ್ಪೂರ್ತಿಯಂತೆ; ಪಂದ್ಯದ ಬಳಿಕ ಹೇಳಿದ್ದಿಷ್ಟು

Virat Aaron
Published on

ಡಲ್ಲಾಸ್​: ಇಲ್ಲಿನ ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಕೆನೆಡಾ ವಿರುದ್ಧ ಜಯಿಸುವ ಮೂಲಕ ಯುಎಸ್​ಎ ಭರ್ಜರಿ ಗೆಲುವು ಕಂಡಿದೆ. ಯುಎಸ್​ಎ ಪರ ಆರನ್​ ಜೋನ್ಸ್​ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನಕ್ಕೆ ಹಲವು ದಿಗ್ಗಜ ಕ್ರಿಕೆಟಿಗರ ದಾಖಲೆಗಳು ಧೂಳೀಪಟವಾಗಿದ್ದು, ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಲ್ಲಾಸ್​ನ ಗ್ರ್ಯಾಡ್ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಕೆನೆಡಾ ನವನೀತ್​ ಧಳಿವಾಲ್​ (61 ರನ್, 44 ಎಸೆತ, 6 ಬೌಂಡರಿ, 3 ಸಿಕ್ಸರ್), ನಿಕೋಲಸ್​ ಕೀರ್ಟಾನ್​ (51 ರನ್, 31 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಲ ಬಲದಿಂದ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 194 ರನ್​ ಪೇರಿಸಿತ್ತು. ಬೃಹತ್​ ಗುರಿ ಬೆನ್ನತ್ತಿದ್ದ ಯುಎಸ್​ಎ ತಂಡವು ಆರನ್​ ಜೋನ್ಸ್​ (94 ರನ್, 40 ಎಸೆತ, 4 ಬೌಂಡರಿ, 10 ಸಿಕ್ಸರ್), ಆ್ಯಂಡ್ರಿಯಿಸ್ ಗೌಸ್​ (65 ರನ್, 46 ಎಸೆತ, 7 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ಫಲವಾಗಿ 17.4 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 197 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು.

ಇನ್ನೂ ಯುಎಸ್​ಎ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರನ್​ ಜೋನ್ಸ್​ ಯುಎಸ್​ಎ ಪಾಲಿಗೆ ಸೂಪರ್ ಹೀರೋ ಎಂದು ಹೇಳಬಹುದಾಗಿದೆ. ಇನ್ನೂ ತಮ್ಮ ಸ್ಫೋಟಕ ಬ್ಯಾಟಿಂಗ್​ಗೆ ವಿರಾಟ್​ ಕೊಹ್ಲಿ ಸ್ಪೂರ್ತಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಆರನ್​ ಈ ಹಿಂದೆ ಮಾಡಿದ್ದ ಟ್ವೀಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇನ್ನೂ ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿರುವ ಆರನ್​, ಪದಗಳಲ್ಲಿ ಹೇಳಲು ಅಷ್ಟು ಸುಲಭವಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ತಂಡವನ್ನು ಗೆಲ್ಲಿಸಿದ್ದು, ನನಗೆ ತುಂಬಾ ಖುಷಿ ನೀಡಿದೆ. 200ರನ್​ಗಳ ಒಳಗಿನ ಗುರಿಯನ್ನು ಸುಲಭವಾಗಿ ಬೆನ್ನಟ್ಟಬಹುದು ಎಂಬುದು ನನ್ನ ಭಾವನೆ. ನಾವು ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ಕೋಡಬೇಕಿದೆ. ನಿಜ ಹೇಳಬೇಕೆಂದರೆ ನನ್ನ ತಂಡ ಒತ್ತಡದ ಪರಿಸ್ಥಿತಿಯಲ್ಲಿದ್ದಾಗ ನಾನು ಉತ್ತಮವಾದುದ್ದನ್ನು ನೀಡಲು ಪ್ರಯತ್ನಿಸುತ್ತೇನೆ ಎಂದು ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net