

ನವದೆಹಲಿ : ಸಂಗೀತಾಭ್ಯಾಸ ಮಾಡುತ್ತಿರುವ ತಾಯಿಯೊಂದಿಗೆ ಪುಟ್ಟ ಕೂಸೊಂದು ಆಲಾಪ ಮಾಡಿರುವ ಕ್ಯೂಟ್ ವಿಡಿಯೋ ಒಂದು ಟ್ವಿಟರ್ನಲ್ಲಿ ಹರಿದಾಡುತ್ತಿದೆ. ಇಂದು ಬೆಳ್ಳಂಬೆಳಿಗ್ಗೆ ಈ ಪುಟ್ಟ ಕಂದಮ್ಮನ ಧ್ವನಿ ನೆಟ್ಟಿಗರಿಗೆ ಆಹ್ಲಾದಕರ ಸ್ವಾಗತ ನೀಡಿದೆ.
ಅರುಣ್ ಬೋತ್ರಾ ಎಂಬುವರು 'ನಿಮ್ಮ ಬೆಳಿಗ್ಗೆಯನ್ನು ಸುಂದರಗೊಳಿಸಲು ಒಂದು ಸವಿಯಾದ ಜುಗಲ್ಬಂದಿ' ಎಂಬ ಶೀರ್ಷಿಕೆಯಡಿ ಈ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಗಾಯಕಿ ಪ್ರಿಯಾಂಕಾ ಬರ್ವೇ ತಮ್ಮ ನಿತ್ಯದ ಹಿಂದೂಸ್ತಾನಿ ಸಂಗೀತದ ರಿಯಾಜ್ ಮಾಡುತ್ತಿದ್ದಾರೆ. ಅವರ ತೊಡೆಯ ಮೇಲೆ ಕುಳಿತಿರುವ ಪುಟಾಣಿ ಯುವಾನ್ ಅಮ್ಮನ ಸುಮಧುರ ಕಂಠದೊಂದಿಗೆ ತನ್ನ ಪುಟ್ಟ ದನಿಯನ್ನೂ ಕೂಡಿಸುತ್ತಿದ್ದಾನೆ.
ಸಂಗೀತ ಎಂಬುದೇ ತುಂಬಾ ಆಕರ್ಷಕ. ಇನ್ನು ಅದರೊಂದಿಗೆ ಮಗುವಿನ ಮುಗ್ಧ ಧ್ವನಿ ಸೇರಿದರೆ ಕೇಳಬೇಕೇ ? ಈ ವಿಡಿಯೋಗೆ 20 ಸಾವಿರಕ್ಕೂ ಹೆಚ್ಚು ಲೈಕ್ಗಳು ಸಿಕ್ಕಿದ್ದು ನೂರಾರು ಜನರು ರೀಟ್ವೀಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)