ರೀಲ್ಸ್​ ನೋಡುವುದರಿಂದಲೂ ನೀವು ದೇಹದ ತೂಕ ಹೆಚ್ಚಿಸಿಕೊಳ್ಳಬಹುದು ಹೇಗೆ ಗೊತ್ತಾ?

Reels Scrolling
Published on

ನವದೆಹಲಿ: ವರ್ಷಗಳು ಕಳೆದಂತೆ ಜಗತ್ತು ಹೊಸ ಆವಿಷ್ಕಾರಗಳನ್ನು ನೋಡುತ್ತಿದ್ದು, ಪ್ರಪಂಚವು ಪ್ರತಿನಿತ್ಯ ಒಂದಿಲ್ಲೊಂದು ವಿಸ್ಮಯಕ್ಕೆ ಸಾಕ್ಷಿಯಾಗುತ್ತಿರುತ್ತದೆ. ಅದೇ ರೀತಿ ಮನುಷ್ಯರು ಕೂಡ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಸ್ಮಾರ್ಟ್​ಫೋಣ್​ ಹೊಂದಿದ್ದಾರೆ. ಬಹುತೇಕ ಸ್ಮಾರ್ಟ್​ಫೋನ್​ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಹೊಂದಿದ್ದು, ಪ್ರತಿನಿತ್ಯ ರೀಲ್ಸ್​ ನೋಡುವುದು ಹಾಗೂ ಅದನ್ನು ಶೇರ್​ ಮಾಡುವುದನ್ನು ಮಾಡುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡುವ ರೀಲ್ಸ್​ ಹೆಚ್ಚು ವ್ಯಸನಕಾರಿಯಾಗಿದ್ದು, ಒಮ್ಮೆ ನೋಡಲು ಶುರು ಮಾಡಿದರೆ ಸ್ಕ್ರೋಲ್​ ಮಾಡುತ್ತಾ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಅದೇ ರೀತಿ ನಾವು ಇತ್ತೀಚಿನ ದಿನಗಳಲ್ಲಿ ಆಹಾರ ಕುರಿತಾದ ರೀಲ್ಸ್​ಗಳನ್ನು ಹೆಚ್ಚಾಗಿ ನೋಡುತ್ತಿದ್ದೇವೆ. ಇದು ಕೂಡ ಒಂದು ವ್ಯಸನವಾಗಿದ್ದು, ಅದು ಮನುಷ್ಯನ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಖ್ಯಾತ ಯೂಟ್ಯೂಬರ್​ ಒಬ್ಬರು ವಿವರಿಸಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಈ ಕುರಿತು ಮಾತನಾಡಿದ ಖ್ಯಾತ ಯೂಟ್ಯೂಬರ್​ ಕೆವಿನ್ ಜಿಂಗ್‌ಖಾಯ್, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವ್ಲಾಗರ್​ಗಳು ಆಹಾರದ ಬಗ್ಗೆ ಕಂಟೆಂಟ್​ ಮಾಡುವುದನ್ನು ನಾನು ನೋಡಿದ್ದೇನೆ. ಪ್ರತಿಯೊಬ್ಬರು ವಿಭಿನ್ನ ಶೈಲಿಯಲ್ಲಿ ಕಂಟೆಂಟ್​ ಮಾಡುವ ಮೂಲಕ ಅಪಾರ ಸಂಖ್ಯೆಯ ಫಾಲೋವರ್ಸ್​ಅನ್ನು ಹೊಂದಿದ್ದಾರೆ. ಆಹಾರದ ರೀಲ್‌ಗಳನ್ನು ನೋಡುವುದು ನಿಮ್ಮ ಮನಸ್ಸಿನ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಈ ರೀಲ್‌ಗಳು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಬಹುದು, ರಿಲ್ಯಾಕ್ಸ್​ ನೀಡಬಹುದು ಮತ್ತು ವಿಭಿನ್ನವಾಗಿ ಅಡುಗೆ ಮಾಡಲು ಐಡಿಯಾ ನೀಡಬಹುದು.

Food Reels

ಆಹಾರ ಕುರಿತಾದ ರೀಲ್ಸ್​ಗಳನ್ನು ನೋಡುವುದರಿಂದ ಅತಿಯಾಗಿ ತಿನ್ನುವುದು ಅಥವಾ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳಿದೆ. ಏಕೆಂದರೆ ಪ್ರಲೋಭನಗೊಳಿಸುವ ಆಹಾರ ಚಿತ್ರಗಳಿಗೆ ನಿರಂತರ ಒಡ್ಡಿಕೊಳ್ಳುವಿಕೆಯು ಮೆದುಳಿನ ಡೋಪಮೈನ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಆಹ್ಲಾದಕರ ಭಾವನೆಗಳನ್ನು ಸೃಷ್ಟಿಸುತ್ತದೆ. ನೀವು ಹಲವಾರು ವಿಭಿನ್ನ ವೀಡಿಯೊಗಳನ್ನು ನೋಡುವುದರಿಂದ, ನಿಮ್ಮ ಬೆರಳುಗಳು ಸ್ಕ್ರೋಲಿಂಗ್ ಮಾಡುತ್ತಲೇ ಇರುತ್ತವೆ, ಇದು ಹೆಚ್ಚಿದ ಸಮಯ ಮತ್ತು ದೈಹಿಕ ಚಟುವಟಿಕೆಯ ಕೊರತೆಗೆ ಕಾರಣವಾಗುತ್ತದೆ.

ನಿಷ್ಕ್ರಿಯತೆಯು ನಿಮ್ಮ ಸಾಮಾನ್ಯ ಹಸಿವಿನ ಸಂಕೇತವನ್ನು ಅಡ್ಡಿಪಡಿಸುತ್ತದೆ ಮತ್ತು ತಿನ್ನಲು ಕಾರಣವಾಗಬಹುದು. ಹೀಗಾಗಿ ಜನರು ಆಹಾರಕ್ಕೆ ಸಂಬಂಧಿಸಿದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್​ ನೋಡುವುದನ್ನು ಕಡಿಮೆ ಮಾಡಿದರೆ ಉತ್ತಮ ಆರೋಗ್ಯ ಹೊಂದಬಹುದು ಎಂದು ಖ್ಯಾತ ಯೂಟ್ಯೂಬರ್​ ಕೆವಿನ್ ಜಿಂಗ್‌ಖಾಯ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net