

ಮುಂಬೈ: ಮೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಹಂತದ 68ನೇ ಐಪಿಎಲ್ ಪಂದ್ಯದಲ್ಲಿ ಅಲ್ರೌಂಡ್ ಪ್ರದರ್ಶನದ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ 27 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆದಿದೆ. ಆರ್‌ಸಿಬಿ ವಿರುದ್ಧ ಗೆದ್ದು ಪ್ಲೇಆಫ್ ಪ್ರವೇಶಿಸುತ್ತೇವೆ ಎಂದುಕೊಂಡಿದ್ದ ಸಿಎಸ್ಕೆಗೆ ಫಾಫ್ ಪಡೆಯೂ ತವರಿನ ಹಾದಿ ತೋರಿಸಿದೆ.
ಪಂದ್ಯ ಮುಗಿದ ಬಳಿಕ ಆರ್‌ಸಿಬಿ ಆಟಗಾರರು ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಗೌರವ ಸೂಚಿಸಿಲ್ಲ ಎಂಬ ವಿವಾದವೂ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಈ ಕುರಿತು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ವ್ಯಂಗ್ಯಭರಿತವಾಗಿ ಮಾತನಾಡಿದ್ದಾರೆ. ಅವರ ಮಾತುಗಳು ಸಖತ್ ವೈರಲ್ ಆಗಿದ್ದು, ಆರ್‌ಸಿಬಿ ಅಭಿಮಾನಿಗಳು ಕೆಂಗಣ್ಣಿಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಅಂಬಾಟಿ ರಾಯುಡು ಸಿಎಸ್ಕೆಯನ್ನು ಮಣಿಸಿ ಆರ್‌ಸಿಬಿ ಅವರು ಪ್ಲೇಆಫ್ ಪ್ರವೇಶಿಸಿರುವುದು ಫೈನಲ್ನಲ್ಲಿ ಗೆದ್ದ ರೀತಿ ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂದರೆ ಬೆಂಗಳೂರಿನ ಬೀದಿಗಳಲ್ಲಿ ಅಭಿಮಾನಿಗಳು ಸಂಭ್ರಮಿಸಿದ ರೀತಿ. ಇದನ್ನು ನೋಡಿದರೆ ನನ್ನ ಪ್ರಕಾರ ಸಿಎಸ್ಕೆ ಅವರು ಆರ್‌ಸಿಬಿ ತಮ್ಮ ಬಳಿ ಇರುವ ಒಂದು ಟ್ರೋಫಿಯನ್ನು ದಾನ ಮಾಡಿದರೆ ಅವರು ಅದನ್ನು ಇಟ್ಟುಕೊಂಡು ಬೆಂಗಳೂರಿನ ಸುತ್ತ ಪೆರೇಡ್ ಮಾಡಬಹುದು ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ವರುಣ್ ಆರನ್, ಸಿಎಸ್ಕೆ ಅವರನ್ನು ಆರ್‌ಸಿಬಿ ಅವರು ಸೋಲಿಸಿದ್ದಾರೆ ಎಂಬ ಅಂಶವನ್ನು ಅರಗಿಸಿಕೊಳ್ಳಲಾರದೆ ಅಂಬಾಟಿ ಮಾತನಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಲೈವ್ ಶೋನಲ್ಲೇ ತಿರುಗೇಟು ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.