ಜನ ನೋಡಿ ಅಪಹಾಸ್ಯ ಮಾಡ್ತಿದ್ದಾರೆ! ಇಷ್ಟಾದ್ರೂ… ಪಿಸಿಬಿ ವಿರುದ್ಧ ಮಾಜಿ ಕ್ರಿಕೆಟಿಗ ಗರಂ

Untitled design - 2024-06-22T123205.603
Published on

ನ್ಯೂಯಾರ್ಕ್​: ಪ್ರಸಕ್ತ ಐಸಿಸಿ ಟಿ20 ವಿಶ್ವಕಪ್​ ಪಂದ್ಯಾವಳಿಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಮೊದಲ ಹಂತದಲ್ಲೇ ವಿಶ್ವಕಪ್​ ಸೆಣಸಾಟದಿಂದ ಪಾಕಿಸ್ತಾನ ತಂಡ ಅಧಿಕೃತವಾಗಿ ಹೊರಗುಳಿದಿದೆ. ಸೂಪರ್​ 8 ಕ್ಲ್ಯಾಶ್​ಗೆ ಎಂಟ್ರಿ ಕೊಡಬೇಕಿದ್ದ ಬಾಬರ್ ಆಜಂ ನೇತೃತ್ವದ ಟೀಮ್​, ಸತತ ಹೀನಾಯ ಸೋಲುಗಳಿಂದ ಇದೀಗ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಪಾಕ್​ ಆಟಗಾರರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ, ಆರೋಪಗಳು ವ್ಯಕ್ತವಾಗಿವೆ. ಅದರಲ್ಲೂ ಸ್ಪಾಟ್ ಹಾಗೂ ಮ್ಯಾಚ್ ಫಿಕ್ಸಿಂಗ್ ಕಳಂಕವನ್ನು ಸಹ ಹೊತ್ತಿರುವ ಪಾಕ್​ ಆಟಗಾರರ ಕುರಿತು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಧ್ವನಿ ಎತ್ತಿದೆ. ಸುಖಾಸುಮ್ಮನೆ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಆಟಗಾರರ ಮೇಲೆ ಆಪಾದನೆ ಹಾಕುವುದು ಸರಿಯಲ್ಲ. ಫಿಕ್ಸಿಂಗ್ ಮಾಡಿರುವ ಬಗ್ಗೆ ನಿಮ್ಮ ಬಳಿ ಬಲವಾದ ಸಾಕ್ಷಿ ಇದ್ದರೆ ಮಾತ್ರ ಆರೋಪಿಸಿ, ಇಲ್ಲದಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.

ಇನ್ನು ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಪಾಕ್​ನ ಮಾಜಿ ಹಿರಿಯ ಆಟಗಾರ ವಾಸಿಂ ಅಕ್ರಮ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನಡೆ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಒಂದು ವರ್ಷದ ಅವಧಿಯಲ್ಲಿ ಪಿಸಿಬಿ ನಾಲ್ವರು ಅಧ್ಯಕ್ಷರನ್ನು ಹೇಗೆ ಪದೇ ಪದೇ ಬದಲಾಯಿಸಿದೆಯೋ, ಅದೇ ರೀತಿ ತಂಡವನ್ನು ಸಹ ಮುನ್ನಡೆಸುತ್ತಿದೆ. ಈ ರೀತಿ ಕಳಪೆ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋದರೆ ಸ್ಥಿರವಾಗಿರಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

"ಈ ವಿಷಯಗಳನ್ನು ಗಮನಿಸುತ್ತಿರುವ ಜನರು ವ್ಯಾಪಕವಾಗಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಗೇಲಿ ಮಾಡುತ್ತಾರೆ. ಪಾಕ್​ ಕ್ರಿಕೆಟ್​ ಬೋರ್ಡ್​ನೊಂದಿಗೆ ಸಂಪರ್ಕವಿಲ್ಲದೆ ಇರುವುದು ನನಗೆ ಬಹಳ ಸಂತೋಷದ ವಿಷಯ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net