ತಮಿಳು ಬೇಡ ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ನಟಿ ಮೀನಾ ಕೊಟ್ಟ ತಿರುಗೇಟು ಹೀಗಿತ್ತು… ವಿಡಿಯೋ ವೈರಲ್! A​ctress Meena

A​ctress Meena
Published on

ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ ( A​ctress Meena ), ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ.

ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಹೀಗಿರುವಾಗ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು. ಸದ್ಯ ಮೀನಾ ಅವರು ತಮ್ಮ ಮಗಳೊಂದಿಗೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ ಮತ್ತು ಬಣ್ಣದ ಜಗತ್ತಿನಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, ಹಿಂದಿಯಲ್ಲಿ ಮಾತನಾಡಿ ಅಂದಿದ್ದಕ್ಕೆ ನಟಿ ಮೀನಾ ಅವರು ಆಕ್ರೋಶಗೊಂಡ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇತ್ತೀಚೆಗೆ ನಡೆದ ಐಐಎಫ್​ಎ ಪ್ರಶಸ್ತಿ ಸಮಾರಂಭಕ್ಕೆ ಮೀನಾ ಅವರನ್ನು ಆಹ್ವಾನಿಸಲಾಗಿತ್ತು. ಹಿಂದಿ, ತೆಲುಗು, ಕನ್ನಡ ಹಾಗೂ ತಮಿಳು ಸೇರಿದಂತೆ ಹಲವು ಭಾಷೆಯ ನಟ-ನಟಿಯರು ಪಾಲ್ಗೊಂಡಿದ್ದರು. ಮೀನಾ ಅವರು ಕಾರ್ಯಕ್ರಮಕ್ಕೆ ಆಗಮಿಸಿದಾಗ ಮಾಧ್ಯಮಗಳ ಮೈಕ್‌ಗಳ ಮುಂದೆ ನಿಂತು ತಮಿಳಿನಲ್ಲಿ ಮಾತನಾಡಲು ಆರಂಭಿಸಿದರು. ಈ ವೇಳೆ ಕೆಲ ಸುದ್ದಿಗಾರರು ಹಿಂದಿಯಲ್ಲಿ ಮಾತನಾಡುವಂತೆ ಹೇಳಿದರು.

ಸುದ್ದಿಗಾರರ ಮಾತಿಗೆ ನಗುತ್ತಲೇ ಟಾಂಗ್​ ಕೊಟ್ಟ ಮೀನಾ, ಹಿಂದಿಯಲ್ಲಿ ಮಾತನಾಡಲು ನನ್ನನೇಕೆ ಕರೆದ್ರಿ, ದಕ್ಷಿಣ ಭಾರತೀಯರು ಇರುತ್ತಾರೆ ಅಂದುಕೊಂಡಿದ್ದೆ ಎಂದರು. ಬಳಿಕ ಇಂಗ್ಲಿಷ್​ನಲ್ಲಿ ಮಾತು ಮುಂದುವರಿಸಿದ ಮೀನಾ, ದಕ್ಷಿಣ ಭಾರತದ ಸಿನಿಮಾಗಳು ಅದ್ಭುತವಾಗಿವೆ. ನಾನು ದಕ್ಷಿಣ ಭಾರತೀಯಳಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದರು. ಅಲ್ಲದೆ, ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ವ್ಯತ್ಯಾಸ ಇಲ್ಲ. ಎಲ್ಲ ಭಾಷೆಗಳಲ್ಲಿ ಎಲ್ಲ ಭಾಷೆಯ ಕಲಾವಿದರು ನಟಿಸುತ್ತಿದ್ದಾರೆ ಎಂದು ಮೀನಾ ಹೇಳಿದರು.

ಮೀನಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಮೀನಾ ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net