

ಚಂಡೀಗಢ: ಪತ್ನಿಯಾಗಿ, ತಾಯಿಯಾಗಿ ಹಾಗೂ ಉದ್ಯೋಗಿಯಾಗಿ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಮಹಿಳೆ ತನ್ನ ಕುಟುಂಬಕ್ಕೆ ಎದುರಾಗುವ ಯಾವುದೇ ಅಪಾಯವನ್ನು ತನ್ನ ಪ್ರಾಣವನ್ನು ಲೆಕ್ಕಿಸದೇ ಎದುರಿಸಲು ಸಿದ್ಧಳಾಗಿರುತ್ತಾಳೆ. ಅನೇಕ ಮಹಿಳೆಯರು ( Superwoman ) ತಮ್ಮ ಕುಟುಂಬಕ್ಕಾಗಿ ಅಸಾಧಾರಣ ಧೈರ್ಯ ಪ್ರದರ್ಶಿಸಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಅದೇ ರೀತಿ ಇತ್ತೀಚೆಗಷ್ಟೇ ಪಂಜಾಬ್ ಮೂಲದ ಮಹಿಳೆಯೊಬ್ಬರು ತಮ್ಮ ಮನೆಯನ್ನು ದರೋಡೆ ಮಾಡಲು ಯತ್ನಿಸಿದ ಮೂವರು ದುಷ್ಟರನ್ನು ಏಕಾಂಗಿಯಾಗಿ ತಡೆದು ನಿಲ್ಲಿಸಿದ್ದಾರೆ. ಮಹಿಳೆಯ ಧೈರ್ಯ ಮತ್ತು ಶಕ್ತಿಯ ಮುಂದೆ ಆ ಖದೀಮರಿಂದಲೂ ಏನೂ ಮಾಡಲಾಗಲಿಲ್ಲ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಆ ಕಳ್ಳರು ಅಲ್ಲಿಂದ ಪರಾರಿಯಾಗಬೇಕಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.
ಘಟನೆಯ ಸಂಪೂರ್ಣ ವಿವರಗಳ ಕಡೆ ಬರುವುದಾದರೆ, ಜಗಜೀತ್ ಸಿಂಗ್ ಹೆಸರಿನ ಆಭರಣ ವ್ಯಾಪಾರಿ, ಅಮೃತಸರದ ವರ್ಕಾ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಪತ್ನಿ ಮಂಡೂಪ್ ಕೌರ್ ಮತ್ತು ಇಬ್ಬರು ಮಕ್ಕಳಿದ್ದಾರೆ. ಜಗಜಿತ್ ಸಿಂಗ್ ಅವರು ಪ್ರತಿದಿನ ಬೆಳಗ್ಗೆ ತಮ್ಮ ಚಿನ್ನದ ಅಂಗಡಿಗೆ ಹೋಗುತ್ತಾರೆ. ಮಂಗಳವಾರ (ಅ.01) ಮಧ್ಯಾಹ್ನ 3.30ರ ಸುಮಾರಿಗೆ ಮಂಡೂಪ್ ಕೌರ್ ತನ್ನ ಮಕ್ಕಳೊಂದಿಗೆ ಮನೆಯಲ್ಲಿದ್ದರು. ಈ ವೇಳೆ ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಗೋಡೆಯನ್ನು ಏರಿ ಮನೆಗೆ ಪ್ರವೇಶಿಸುವುದನ್ನು ಮಂಡೂಪ್ ನೋಡಿದರು. ತಕ್ಷಣ ಅಲರ್ಟ್ ಆದ ಮಂಡೂಪ್, ಎಲ್ಲ ರೂಮ್ಗಳಿಗೂ ಬೀಗ ಹಾಕಿದರು. ಅಲ್ಲದೆ, ಮಕ್ಕಳನ್ನು ಒಂದು ಕೋಣೆಯಲ್ಲಿ ಇರಿಸಿದರು.
ಇದೇ ವೇಳೆ ಮೂವರು ದುಷ್ಕರ್ಮಿಗಳು ಮನೆಯ ಮುಖ್ಯ ದ್ವಾರವನ್ನು ತೆರೆಯಲು ಯತ್ನಿಸಿದರು. ಆದರೆ, ಮಂಡೂಪ್ ಕೌರ್ ಒಳಗಿನಿಂದ ಬಾಗಿಲು ಮುಚ್ಚಲು ಪ್ರಯತ್ನಿಸಿದರು. ಅತ್ತ ಕಡೆಯಿಂದ ಮೂವರು ಕಳ್ಳರು ಎಷ್ಟೇ ಪ್ರಯತ್ನಿಸಿದರೂ ಇತ್ತ ಮಂಡೂಪ್ ಮಾತ್ರ ಹಿಂದೆ ಸರಿಯಲಿಲ್ಲ. ತನ್ನೆಲ್ಲ ಶಕ್ತಿಯನ್ನು ಪ್ರದರ್ಶಿಸಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಹೋರಾಡಿ ಕೊನೆಗೂ ಕಳ್ಳರನ್ನು ತಡೆದು, ಬಾಗಿಲನ್ನು ಮುಚ್ಚಿದರು. ಅಲ್ಲದೆ, ಪಕ್ಕದಲ್ಲಿದ್ದ ಸೋಫಾವನ್ನು ಬಾಗಿಲಿಗೆ ಅಡ್ಡಲಾಗಿ ಇಟ್ಟರು. ಇದರಿಂದ ಕಳ್ಳರು ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬಳಿಕ ಮಂಡೂಪ್ ಕೌರ್ ಜೋರಾಗಿ ಕೂಗಾಡಿ, ನೆರೆಮನೆಯವರನ್ನು ಸಹಾಯಕ್ಕೆ ಕರೆದರು. ಕೂಗಾಟ ಶಬ್ಧ ಕೇಳುತ್ತಿದ್ದಂತೆ ದಾಳಿಕೋರರು ತಕ್ಷಣ ಅಲ್ಲಿಂದ ಪರಾರಿಯಾದರು.
ಘಟನೆಯ ಬಗ್ಗೆ ಪತ್ನಿಯಿಂದ ಮಾಹಿತಿ ಪಡೆದ ಜಗಜಿತ್ ಸಿಂಗ್ ಕೂಡಲೇ ಮನೆಗೆ ಆಗಮಿಸಿ, ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಆಧರಿಸಿ ಕಳ್ಳರ ಪತ್ತೆಗೆ ಯತ್ನಿಸುತ್ತಿದ್ದಾರೆ. ಮಂಡೂಪ್ ಕೌರ್ ಅವರ ಶೌರ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಕೆಯ ಅಸಾಧಾರಣ ಶೌರ್ಯಕ್ಕಾಗಿ ನೆಟ್ಟಿಗರು ಪ್ರಶಂಸೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಬಹುತೇಕ ನೆಟ್ಟಿಗರು ಆಕೆಯನ್ನು ಸೂಪರ್ ವುಮನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)