RCB ವಿರುದ್ಧ ಹೀನಾಯವಾಗಿ ಸೋತಿದ್ದಕ್ಕೆ ಕೋಪದಲ್ಲಿ ಟಿವಿ ಒಡೆದು ಹಾಕಿದ್ದರು ಧೋನಿ! ಅಚ್ಚರಿ ವಿಡಿಯೋ ವೈರಲ್​ | MS Dhoni

MS Dhoni
Published on

ನವದೆಹಲಿ: ಕಳೆದ ಐಪಿಎಲ್-2024​ ಟೂರ್ನಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಲೀಗ್​ ಹಂತದ ಕೊನೆಯ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಜಯ ದಾಖಲಿಸಿ ಪ್ಲೇಆಫ್​​ ಹಂತಕ್ಕೇರಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ಎಂ.ಎಸ್​. ಧೋನಿ, ಕೋಪದಿಂದ ಟಿವಿಯನ್ನು ಒಡೆದು ಹಾಕಿದ್ದರು ಎಂದು ಪತ್ರಕರ್ತರೊಬ್ಬರು ಇದೀಗ ನೀಡಿರುವ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.

ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ( CSK ) 27 ರನ್‌ಗಳಿಂದ ಸೋಲುವ ಮೂಲಕ ನಾಕೌಟ್ ಸುತ್ತಿಗೆ ಹೋಗುವ ಅವಕಾಶವನ್ನು ಕಳೆದುಕೊಂಡಿತು. ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು. ಇದೇ ಬೇಸರದಲ್ಲಿ ಪಂದ್ಯದ ನಂತರ ಧೋನಿ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡಿ ಡ್ರೆಸ್ಸಿಂಗ್​ ಹೋಗಿದ್ದರು. ಈ ವಿಚಾರ ಆ ಸಂದರ್ಭದಲ್ಲಿ ಭಾರಿ ವಿವಾದವನ್ನೇ ಹುಟ್ಟಿಹಾಕಿತ್ತು. ಅಲ್ಲದೆ, ತೀವ್ರ ಚರ್ಚೆಯು ನಡೆದಿತ್ತು.

ಹಲವು ತಿಂಗಳುಗಳ ಬಳಿಕ ಇದೀಗ ವಿಡಿಯೋವೊಂದು ವೈರಲ್​ ಆಗಿದ್ದು, ಅದರಲ್ಲಿ ಪತ್ರಕರ್ತರೊಬ್ಬರು ಧೋನಿ ಕೋಪದಿಂದ ಟಿವಿ ಹೊಡೆದು ಹಾಕಿದ್ದರು ಎಂದು ಹೇಳಿಕೊಂಡಿದ್ದಾರೆ. ನಾನು ವಿಶೇಷವಾದ ವಿಚಾರವೊಂದರ ಬಗ್ಗೆ ತಿಳಿದುಕೊಂಡಿದ್ದೇನೆ. ಧೋನಿ ಏಕೆ ಆರ್​ಸಿಬಿ ಆಟಗಾರರಿಗೆ ಶೇಕ್​ ಹ್ಯಾಂಡ್​ ಮಾಡಲಿಲ್ಲ ಎಂದು ನಾನು ಭಜ್ಜಿ ( ಹರ್ಭಜನ್ ) ಅವರ ಬಳಿ ಕೇಳಿದೆ. ಹಸ್ತಲಾಘವ ಮಾಡದಿರುವುದು ಮಾತ್ರವಲ್ಲ ಅಂದು ಧೋನಿ, ಟಿವಿಯನ್ನು ಸಹ ಒಡೆದು ಹಾಕಿದ್ದರು. ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಕಳೆದುಕೊಂಡಿದ್ದಕ್ಕಾಗಿ ಧೋನಿ ತುಂಬಾ ಕೋಪಗೊಂಡಿದ್ದರು ಎಂದು ಭಜ್ಜಿ ನನಗೆ ಹೇಳಿದರು ಎಂದು ಪತ್ರಕರ್ತ ತಿಳಿಸಿದ್ದಾರೆ. ಇದೀಗ ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಪ್ಲೇ ಆಫ್ ತಲುಪಲು ಬೆಂಗಳೂರು ಆ ಪಂದ್ಯದಲ್ಲಿ ಕನಿಷ್ಠ 18 ರನ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಬೇಕಿತ್ತು. ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 218 ರನ್ ಗಳಿಸಿತ್ತು. 219 ರನ್​ಗಳ ಗುರಿ ಬೆನ್ನತ್ತಿದ್ದ ಸಿಎಸ್​ಕೆ ಬ್ಯಾಟ್ಸ್​ಮನ್​ಗಳು ಬಿರುಸಿನ ಆಟವಾಡಿ ಆರ್​ಸಿಬಿ ಬೌಲರ್​ಗಳಿಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ನತ್ತ ಮುಖ ಮಾಡಿದರು. ಅಂತಿಮ ಹಂತದಲ್ಲಿ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಜೊತೆಯಾಟವನ್ನು ನಿರ್ಮಿಸಿ ತಂಡವನ್ನು ಪ್ಲೇ ಆಫ್​ಗೇರಿಸಲು ಹತ್ತಿರಕ್ಕೆ ತಂದರು. ಕೊನೆಯ ಓವರ್‌ನಲ್ಲಿ ಚೆನ್ನೈ 17 ರನ್ ಗಳಿಸಿದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಹೊಂದಿತ್ತು.

ಯಶ್​ ದಯಾಳ್ ಎಸೆದ ಅಂತಿಮ ಓವರ್​ನ ಮೊದಲ ಎಸೆತವನ್ನು ಧೋನಿ ಲಾಂಗ್ ಲೆಗ್ ಬೌಂಡರಿಯತ್ತ ಸಿಕ್ಸರ್​ ಬಾರಿಸಿದರು. ಅದು ಬೌಂಡರಿಯಿಂದ ಹೊರಗೆ ಹೋಗಿದ್ದಲ್ಲದೆ, ಸ್ಟೇಡಿಯಂ ಛಾವಣಿಯನ್ನೂ ದಾಟಿ ಕ್ರೀಡಾಂಗಣದ ಹೊರಗೆ ತಲುಪಿತು. ಇದು 110 ಮೀಟರ್ ಉದ್ದದ ಸಿಕ್ಸರ್ ಆಗಿದ್ದು, ಈ ಋತುವಿನಲ್ಲಿ ದಾಖಲಾದ ಅತಿ ದೊಡ್ಡ ಸಿಕ್ಸರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ನಂತರ, ದಯಾಳ್ ಮುಂದಿನ ಚೆಂಡನ್ನು ನಿಧಾನವಾಗಿ ಎಸೆದರು, ಧೋನಿ ಹೊಡೆತವು ನೇರವಾಗಿ ಫೀಲ್ಡರ್ ಕೈಗೆ ಹೋಯಿತು. ಉಳಿದ 4 ಎಸೆತಗಳಲ್ಲಿ ದಯಾಳ್ ಕೇವಲ 1 ರನ್ ನೀಡುವ ಮೂಲಕ ಆರ್​ಸಿಬಿ ಪಂದ್ಯವನ್ನು ಗೆದ್ದುಕೊಂಡಿದ್ದು ಮಾತ್ರವಲ್ಲದೆ, ಪ್ಲೇ ಆಫ್‌ಗೆ ತಲುಪಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net