

ಹೈದರಾಬಾದ್: ಸಮಾಜದಲ್ಲಿ ಐಷಾರಾಮಿ ಜೀವನ ನಡೆಸಲು ಹಣ ಬೇಕು. ಹೀಗಾಗಿ ಕೆಲವರು ಮೋಸ ಮಾಡಿಯಾದರೂ ದುಡ್ಡು ಮಾಡಬೇಕು ಅಂತ ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ಕಾಲಕಾಲಕ್ಕೆ ಇಂತಹ ವಂಚನೆ ಪ್ರಕರಣಗಳು ಹೊರ ಬರುತ್ತಿದ್ದರೂ ಅದೆಷ್ಟೋ ಮಂದಿ ಗೊತ್ತಿದ್ದೂ ಮೋಸಗಾರರ ಕೈಗೆ ಬಲಿಯಾಗುತ್ತಿದ್ದಾರೆ. ಇದೀಗ ಅಂಥದ್ದೇ ಘಟನೆಯೊಂದು ನಡೆದಿದ್ದು, ವಂಚನೆಗೊಳಗಾದ ದಂಪತಿ ( Married Couple ) ಬದುಕನ್ನೇ ಕೊನೆಗೊಳಿಸಿದ್ದಾರೆ.
ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯಲ್ಲಿ ಈ ಘೋರ ದುರಂತ ನಡೆದಿದೆ. ಸಾಯಿರಾಂ ತಾಂಡಾದಲ್ಲಿ ವಾಸವಿದ್ದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ. ವಿಷ ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ದಂಪತಿಯನ್ನು ಚಿಕಿತ್ಸೆಗಾಗಿ ಕುಟುಂಬಸ್ಥರು ಹೈದರಾಬಾದ್‌ಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಇಬ್ಬರೂ ಮೃತಪಟ್ಟಿದ್ದಾರೆ. ದಂಪತಿಯ ಸಾವು ಸಾಯಿರಾಂ ತಾಂಡದಲ್ಲಿ ತಲ್ಲಣ ಮೂಡಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೂರ್ಗುಪಾಡು ಮಂಡಲದ ಸಾಯಿರಾಂ ತಾಂಡಾದ ರತ್ನಕುಮಾರ್ ಮತ್ತು ಆತನ ಪತ್ನಿ ಪಾರ್ವತಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಸಿಎಂಆರ್ ಶಾಪಿಂಗ್ ಮಾಲ್ನಲ್ಲಿ ರತ್ನಾಕರ್ಗೆ ಕೆಲಸ ಸಿಕ್ಕಿತ್ತು. ಇದರ ನಡುವೆ ಹೈದರಾಬಾದ್ನ ದಲ್ಲಾಳಿಯೊಬ್ಬ ಸಿಂಗರೇಣಿಯಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಸಿಂಗರೇಣಿಯಲ್ಲಿ ಕೆಲಸ ಸಿಗುತ್ತದೆ ಎಂದು ರತ್ನಾಕರ್ ಮತ್ತು ಪಾರ್ವತಿ ತುಂಬಾ ಖುಷಿಪಟ್ಟಿದ್ದರು. ಅಲ್ಲದೆ, ತಮ್ಮ ಕಷ್ಟಗಳು ಮುಗಿಯುತ್ತವೆ ಎಂದು ಸಂಭ್ರಮಿಸಿದ್ದರು.
ಇದರ ನಡುವೆ ದಂಪತಿಗೆ ಕರೆ ಮಾಡಿದ ದಲ್ಲಾಳಿ, ಕೆಲಸಕ್ಕೆ ತುಂಬಾ ಪೈಪೋಟಿ ಇದೆ. ತಕ್ಷಣ ಹಣ ಕೊಟ್ಟರೆ ಕೆಲಸ ನಿಮ್ಮ ಕೈ ಸೇರುತ್ತದೆ ಇಲ್ಲದಿದ್ದರೆ, ಬೇರೆಯವರ ಪಾಲಾಗುತ್ತದೆ ಎಂದಿದ್ದ. ದಲ್ಲಾಳಿಯ ಮಾತನ್ನು ಸಂಪೂರ್ಣವಾಗಿ ನಂಬಿದ ರತ್ನಕುಮಾರ್ ಮತ್ತು ಪಾರ್ವತಿ 16 ಲಕ್ಷ ರೂ. ಸಾಲ ಮಾಡಿ ದಲ್ಲಾಳಿಗೆ ಕೊಟ್ಟಿದ್ದರು. ಹಣ ಸಿಗುತ್ತಿದ್ದಂತೆ ದಲ್ಲಾಳಿ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.
ಒಂದೆಡೆ ಕೆಲಸ ಸಿಗದೆ, ಸಾಲದ ಬಡ್ಡಿಯನ್ನೂ ಕಟ್ಟಲಾಗದೆ, ಸಾಲಗಾರ ಒತ್ತಡಕ್ಕೆ ಸಿಲುಕಿ ಗಂಡ-ಹೆಂಡತಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಕೊನೆಗೆ ವಿಷ ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ. (ಏಜೆನ್ಸೀಸ್)