ವೃಷಭಾವತಿ ನದಿ ಪುನಶ್ಚೇತನ ಸರ್ಕಾರದ ಹೊಣೆ|ನೀರಿ ಸಂಸ್ಥೆ ನೇಮಕಕ್ಕೆ ಹೈಕೋರ್ಟ್ ಇಂಗಿತ

High_CourtKarntaka11
Published on

ಬೆಂಗಳೂರು: ವೃಷಭಾವತಿ ನದಿ ಪುನಶ್ಚೇತನ ವಿಚಾರದಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯವೇ ರಾಷ್ಟ್ರೀಯ ಪರಿಸರ ಅಧ್ಯಯನ ಸಂಶೋಧನಾ ಸಂಸ್ಥೆಯಂಥ (ನೀರಿ) ಸಂಸ್ಥೆಯೊಂದನ್ನು ನೇಮಕ ಮಾಡಲಿದೆ ಎಂದು ಹೈಕೋರ್ಟ್ ತಿಳಿಸಿದೆ.

ನಗರದ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸರ್ಕಾರದ ಪರ ವಕೀಲರು, ವೃಷಭಾವತಿ ನದಿ ಮಾಲಿನ್ಯ ತಡೆ ಹಾಗೂ ಪುನಶ್ಚೇತನಕ್ಕೆ ಕೈಗೊಳ್ಳಲಾಗುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಕಾಲಾವಕಾಶ ಕೋರಿದರು.

ಆಗ ನ್ಯಾಯಪೀಠ, ವೃಷಭಾವತಿ ನದಿ ಪುನಶ್ಚೇತನ ಕಾರ್ಯ ಬಿಬಿಎಂಪಿ ಅಥವಾ ಜಲಮಂಡಳಿಯಿಂದ ಸಾಧ್ಯವಿಲ್ಲ. ನದಿಗಳ ನಿರ್ವಹಣೆ ಸರ್ಕಾರದ ಜವಾಬ್ದಾರಿಯಾಗಿದೆ. ಈಗಾಗಲೇ ನದಿಗೆ ಆಗಿರುವ ಹಾನಿಯನ್ನು ಗಮನಿಸಿದರೆ ನೀರಿಯಂಥ ತಜ್ಞ ಸಂಸ್ಥೆ ನೇಮಕ ಮಾಡುವುದು ಸೂಕ್ತ. ಆದ್ದರಿಂದ, ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು. ತಜ್ಞ ಸಂಸ್ಥೆ ನೇಮಕ ಮಾಡಲು ಸರ್ಕಾರ ಸಿದ್ಧವಿಲ್ಲ ಎಂದರೂ ನ್ಯಾಯಾಲಯವೇ ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಿದೆ ಎಂದು ತಿಳಿಸಿ ನ.3ಕ್ಕೆ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿ, ಲಾಕ್​ಡೌನ್ ಘೋಷಣೆಯ ಬಳಿಕ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆ ಸ್ಥಗಿತಗೊಂಡ ಹಿನ್ನೆಯೆಲ್ಲಿ ವೃಷಭಾವತಿ ನದಿ ಬಹುತೇಕ ಸ್ವಚ್ಛಗೊಂಡಿತ್ತು. ಆದರೆ ಲಾಕ್​ಡೌನ್ ತೆರವುಗೊಂಡ ಬಳಿಕ ನದಿ ಸುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆ ಆರಂಭಗೊಂಡ ಹಿನ್ನೆಲೆಯಲ್ಲಿ ನದಿ ಮತ್ತೆ ಮಲಿನಗೊಳ್ಳುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net