

ಗುವಾಹಟಿ: ಅಸ್ಸಾಂನಲ್ಲಿ ಸರ್ಕಾರಿ ವೆಚ್ಚದಲ್ಲಿ ನಡೆಯುತ್ತಿರುವ ಎಲ್ಲ ಮದರಸಾಗಳನ್ನು ಒಂದೋ ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಇಲ್ಲವೇ ಮುಚ್ಚಲಾಗುವುದು. ಒಂದೊಮ್ಮೆ ಮುಚ್ಚಿದರೆ ಅಂತಹ ಮದರಸಾಗಳ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುವುದು. ಈ ಕುರಿತ ಅಧಿಸೂಚನೆಯನ್ನು ಸರ್ಕಾರ ಮುಂದಿನ ತಿಂಗಳು ಹೊರಡಿಸಲಿದೆ ಎಂದು ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಎಎನ್ಐ ವರದಿ ಪ್ರಕಾರ ಶರ್ಮಾ ಅವರು ಹೇಳಿರುವುದಿಷ್ಟು - ನನ್ನ ಅಭಿಪ್ರಾಯದಂತೆ, ಸರ್ಕಾರಿ ವೆಚ್ಚದಲ್ಲಿ ಖುರಾನ್ ಕಲಿಸುವುದಕ್ಕಾಗದು. ಒಂದೊಮ್ಮೆ ನಾವು ಆ ರೀತಿ ಮಾಡ್ತೇವೆ ಎಂದಾದರೆ ಬೈಬಲ್ ಮತ್ತು ಭಗವದ್ಗೀತೆಯನ್ನೂ ನಾವು ಕಲಿಸಬೇಕು. ಆದ್ದರಿಂದ, ನಾವು ಈ ಅಭ್ಯಾಸವನ್ನು ನಿಲ್ಲಿಸಿ ಸಮಾನತೆ ತರಲು ಹೊರಟಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ವರದಿ ಪ್ರಕಾರ, ಮದರಸಾಗಳ ಜತೆಗೆ ಸ್ವಾತಂತ್ರ್ಯಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಸಂಸ್ಕೃತ ಪಾಠಶಾಲೆಗಳನ್ನೂ ಅಸ್ಸಾಂ ಸರ್ಕಾರ ಮುಚ್ಚಲು ತೀರ್ಮಾನಿಸಿದೆ. ಅಳಿವಿನಂಚಿನಲ್ಲಿರುವ ಸಂಸ್ಕೃತವನ್ನು ಕಲಿಸುವುದಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಕೃತ ಪಾಠಶಾಲೆಗಳ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಇಂತಹ ಅಂದಾಜು 100 ಸಂಸ್ಕೃತ ಪಾಠಶಾಲೆಗಳನ್ನು ಸರ್ಕಾರ ಮುಚ್ಚಲಿದೆ ಎಂದು ಸಚಿವ ಶರ್ಮಾ ಹೇಳಿದ್ದಾರೆ.
ರಾಜ್ಯ ಮದರಸಾ ಶಿಕ್ಷಣ ಮಂಡಳಿಯ ಡೇಟಾ ಪ್ರಕಾರ, ಅಸ್ಸಾಂನಲ್ಲಿ 614 ನೋಂದಾಯಿತ ಮದರಸಾಗಳಿವೆ. ಈ ಪೈಕಿ 400 ಹೈ ಮದರಸಾಗಳಾದರೆ, 112 ಜ್ಯೂನಿಯರ್ ಮದರಸಾಗಳು. ಇನ್ನುಳಿದ 102 ಮದರಸಾಗಳು ಸೀನಿಯರ್ ಗ್ರೇಡ್ನವು. ಒಟ್ಟು ನೋಂದಾಯಿತ ಮದರಸಾಗಳ ಪೈಕಿ 57 ಹುಡುಗಿಯರದ್ದಾದರೆ, 3 ಹುಡುಗರದ್ದು. ಇನ್ನುಳಿದ 554 ಸಹಶಿಕ್ಷಣದ್ದು. 17 ಮದರಸಾಗಳು ಉರ್ದು ಮಾಧ್ಯಮದವು.