More

  ಆಸ್ತಿತೆರಿಗೆ ಪಾವತಿಸದ ಸ್ವತ್ತು ಜಪ್ತಿ: ಬಿಬಿಎಂಪಿ ಎಚ್ಚರಿಕೆ

  ಬೆಂಗಳೂರು: ನಗರದಲ್ಲಿ ಗಡುವಿನೊಳಗೆ ಆಸ್ತಿತೆರಿಗೆ ಪಾವತಿಸದವರ ಸ್ವತ್ತುಗಳನ್ನು ಜಪ್ತಿ ಮಾಡುವುದು ಅನಿವಾರ್ಯ. ಅದರಲ್ಲೂ ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

  ಪ್ರತೀ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಿಗೆ ರಿಯಾಯಿತಿಯೊಂದಿಗೆ ಆಸ್ತಿತೆರಿಗೆಯನ್ನು ಕಟ್ಟಿಸಿಕೊಳ್ಳಲಾಗುತ್ತಿತ್ತು. ಈ ಬಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ತೆರಿಗೆ ಪಾವತಿಸಲು ಜು.31ರ ವರೆಗೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಮತದಾನ ಮುಗಿದಿದ್ದು, ಕಂದಾಯ ವಿಭಾಗದ ಅಧಿಕಾರಿಗಳ ಮೂಲಕ ಸ್ವತ್ತುದಾರರಿಗೆ ಡಿಮಾಂಡ್ ನೋಟಿಸ್ ನೀಡಲಾಗುತ್ತಿದೆ. ಜತೆಗೆ ಎಸ್‌ಎಂಎಸ್ ಸಂದೇಶ ಕೂಡ ರವಾನಿಸಲಾಗುತ್ತಿದೆ. ಜು.31ರ ವರೆಗೆ ಬಲವಂತದ ವಸೂಲಿಗೆ ಅವಕಾಶ ಇಲ್ಲದ ಕಾರಣ ಆನಂತರವೇ ಕ್ರಮ ಕೈಗೊಳ್ಳಲಾಗುವುದು ಅವರು ಸುದ್ದಿಗಾರರಿಗೆ ಶನಿವಾರ ತಿಳಿಸಿದರು.

  ಈ ಹಿಂದೆ ಪಾಲಿಕೆಗೆ ಆಸ್ತಿತೆರಿಗೆ ಪಾವತಿಸದವರ ವಿರುದ್ಧ ದಂಡ ಹಾಕುವ ಅಧಿಕಾರ ಇತ್ತಾದರೂ, ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಇತ್ತೀಚಿಗೆ ವಿಧಾನಮಂಡಲದಲ್ಲಿ ಸ್ವತ್ತು ಜಪ್ತಿ ಮಾಡುವ ಅಂಶಗಳನ್ನು ತಿದ್ದುಪಡಿ ಕಾಯ್ದೆಗೆ ಸೇರಿಸಿ ಒಪ್ಪಿಗೆ ಪಡೆಯಲಾಗಿದೆ. ಇದನ್ನೀಗ ಕಾನೂನು ಪ್ರಕಾರ ಜಾರಿ ಮಾಡಬಹುದಾಗಿದ್ದು, ಜು.31ರ ಬಳಿಕ ಬಳಸಲಾಗುವುದು. ಅದರಲ್ಲೂ ಹೆಚ್ಚು ಮೊತ್ತವನ್ನು ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಮುಖ್ಯ ಆಯುಕ್ತರು ಸಮರ್ಥಿಸಿಕೊಂಡರು.

  ಹೆಚ್ಚು ಆದಾಯದ ನಿರೀಕ್ಷೆ:

  ಪ್ರಸಕ್ತ ಸಾಲಿನಲ್ಲಿ ಆಸ್ತಿತೆರಿಗೆ ಬಾಬ್ತಿನಿಂದ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ. ಹೆಚ್ಚು ಮೊತ್ತವನ್ನು ಬಾಕಿ ಉಳಿಸಿಕೊಂಡಿರುವವರು ಒಂದೇ ಬಾರಿ ಪಾವತಿಸಿದರೆ ದಂಡ ಕಟ್ಟುವ ಅಗತ್ಯ ಇಲ್ಲ. ಇದನ್ನು ಒಟಿಎಸ್ ಮೂಲಕ ಅವಕಾಶ ಮಾಡಿಕೊಡಲಾಗಿದೆ. ಅತೀ ಹೆಚ್ಚು ಬಾಕಿ ಉಳಿಸಿಕೊಂಡಿರುವ 50 ಮಂದಿಯಿಂದ 113.72 ಕೋಟಿ ರೂ. ಪಾವತಿಯಾಗಬೇಕಿದೆ. ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹೆಚ್ಚು ಆಸ್ತಿತೆರಿಗೆ ಸಂಗ್ರವಾಗುವ ನಿರೀಕ್ಷೆಯೂ ಇದೆ. ಜತೆಗೆ ಹಿಂಬಾಕಿ ಸೇರಿ ಒಟ್ಟು ಆಸ್ತಿತೆರಿಗೆ ಒಂದರಿಂದಲೇ ದಾಖಲೆಯ ಮೊತ್ತ ಸಂಗ್ರವಾಗುವ ಸಾಧ್ಯತೆ ಇದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

  ಟಾಪ್ 5 ಸ್ವತ್ತುಗಳ ತೆರಿಗೆ ಉಳಿಸಿಕೊಂಡಿರುವುದು:

  * ಶ್ರೀನಿವಾಸ್ ಎಜುಕೇಷನ್ ಆ್ಯಂಡ್ ಚಾರಿಟಬಲ್ ಸೊಸೈಟಿ – 11.59 ಕೋಟಿ ರೂ.
  * ಟಿ.ಎನ್.ವೆಂಕಟೇಶ್, ವಿ. ಪುಷ್ಟಕುಮಾರಿ – 11.51 ಕೋಟಿ ರೂ.
  * ಸ್ಟಾಡ್ ಹೋಟೆಲ್ಸ್ ಪ್ರೈ. ಲಿ. – 2.75 ಕೋಟಿ ರೂ.
  * ಟಿ.ಗಂಗಾಧರ್, ಟಿ.ರಾಮಚಂದ್ರ, ಮಂಜುನಾಥ್ – 1.85 ಕೋಟಿ ರೂ.
  * ಬ್ರಿಗೇಡ್ ಫೌಂಡೇಷನ್ – 1.46 ಕೋಟಿ ರೂ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts