ಬೆಂಗಳೂರು: ರಾಜಕೀಯ ಪಕ್ಷಗಳ ನಾಯಕರ ಪ್ರತಿಷ್ಠೆಯನ್ನು ಒರೆಗೆ ಹಚ್ಚಿರುವ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಈ ಮೂರು ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರ ಸೇರಲಿದೆ.
ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ನಡೆಯಲಿರುವ ಮತದಾನವನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಸಜ್ಜಾಗಿದೆ. ಆಯಾ ವಿಧಾನಸಭೆ ಕ್ಷೇತ್ರವಾರು ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಿ ಅಗತ್ಯ ಭದ್ರತೆಗೆ ಏರ್ಪಾಟು ಮಾಡಿದೆ.
ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ (ಶಿಗ್ಗಾಂವಿ), ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ತೊರೆದು ಕಾಂಗ್ರೆಸ್ಗೆ ಜಿಗಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (ಚನ್ನಪಟ್ಟಣ), ಕಾಂಗ್ರೆಸ್ ಸಂಸದ ಈ.ತುಕಾರಾಮ್ ಪತ್ನಿ ಅನ್ನಪೂರ್ಣ, ಬಿಜೆಪಿಯ ಬಂಗಾರು ಹನುಮಂತು (ಸಂಡೂರು- ಎಸ್ಟಿ ಮೀಸಲು) ಹಾಗೂ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ನ ಯಾಸೀರ್ ಪಠಾಣ್ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ.
31 ಅಸೆಂಬ್ಲಿ, ವಯನಾಡು ಲೋಕಸಭೆ ಕ್ಷೇತ್ರಕ್ಕೂ ಉಪಚುನಾವಣೆ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಜತೆಗೆ ದೇಶದ ಹತ್ತು ರಾಜ್ಯಗಳ 31 ವಿಧಾನಸಭಾ ಕ್ಷೇತ್ರ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಬುಧವಾರ ಉಪ ಚುನಾವಣೆ ನಡೆಯಲಿದೆ. ಇವುಗಳಲ್ಲಿ ಬಹುತೇಕ ಶಾಸಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಹಿನ್ನೆಲೆಯಲ್ಲಿ ಖಾಲಿಯಾದ ಸ್ಥಾನಕ್ಕೆ ನಡೆಯುತ್ತಿರುವ ಉಪ ಚುನಾವಣೆಗಳಾಗಿವೆ. ರಾಜಸ್ಥಾನದ 7, ಪಶ್ಚಿಮಬಂಗಾಳದ 6, ಅಸ್ಸಾಮ್ 5, ಬಿಹಾರದ 4, ಕರ್ನಾಟಕದ 3, ಮಧ್ಯಪ್ರದೇಶದ 2 ಹಾಗೂ ಛತ್ತೀಸ್ಘಡ, ಗುಜರಾತ್, ಕೇರಳ, ಮೇಘಾಲಯದ ತಲಾ ಒಂದು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ವಯನಾಡು ಹಾಗೂ ರಾಯ್ಬರೇಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದ ರಾಹುಲ್ ಗಾಂಧಿ, ವಯನಾಡು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ಅಲ್ಲಿಯೂ ಬುಧವಾರವೇ ಉಪ ಚುನಾವಣೆ ನಡೆಯುತ್ತಿದ್ದು, ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಉಪ ಚುನಾವಣೆಗಳ ಫಲಿತಾಂಶವು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಗಳ ಫಲಿತಾಂಶದ ಜತೆಯಲ್ಲೇ ನ.23ರಂದು ಪ್ರಕಟವಾಗಲಿದೆ.
₹33.33 ಕೋಟಿ ಜಪ್ತಿ: ಉಪ ಚುನಾವಣೆ ಅಖಾಡದಲ್ಲಿ ಅಕ್ರಮ ತಡೆಯುವ ಹೊಣೆ ಹೊತ್ತಿದ್ದ ವಿವಿಧ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಒಟ್ಟು 33.33 ಕೋಟಿ ರೂ. ಮೌಲ್ಯದ ನಗದು, ವಸ್ತುಗಳು, ಮದ್ಯ ಜಪ್ತಿ ಮಾಡಿಕೊಂಡಿವೆ. ಪೊಲೀಸ್, ಅಬಕಾರಿ, ಐಟಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳು ಅ.16ರಿಂದ ನ.11ರವರೆಗೆ ನಡೆಸಿದ ಕಾರ್ಯಾಚರಣೆಯಿದಾಗಿದೆ. 93.30 ಲಕ್ಷ ರೂ. ನಗದು, 29.13 ಕೋಟಿ ರೂ. ಮೌಲ್ಯದ ಮದ್ಯ, 16 ಲಕ್ಷ ರೂ. ಮೌಲ್ಯದ 8.24 ಕೆಜಿ ಮಾದಕ ದ್ರವ್ಯ, 3.18 ಕೋಟಿ ರೂ. ಮೌಲ್ಯದ ಉಡುಗೊರೆಗಳು ಇತರೆ ವಸ್ತುಗಳು ಜಪ್ತಿಯಾಗಿವೆ.
ಯಾರಿಗೇನು ವಿಶ್ವಾಸ?
- ಕಾಂಗ್ರೆಸ್- ಪಂಚ ಗ್ಯಾರಂಟಿ, ಅಭಿವೃದ್ಧಿ ಕಾರ್ಯ ಕೈಹಿಡಿಯಲಿದೆ
- ಎನ್ಡಿಎ- ಮುಡಾ, ವಾಲ್ಮೀಕಿ ಹಗರಣ, ಅಭಿವೃದ್ಧಿ ಸ್ಥಗಿತ ವರವಾಗಲಿದೆ
ಯಾರಿಗೆ, ಏಕೆ ನಿರ್ಣಾಯಕ
- ಸಿದ್ದರಾಮಯ್ಯ- ಮುಡಾ ವಿವಾದ ಮೀರಿ ನಾಯಕತ್ವ ಉಳಿಸಿಕೊಳ್ಳುವುದು
- ಡಿ.ಕೆ.ಶಿವಕುಮಾರ್-ಚನ್ನಪಟ್ಟಣ ಗೆದ್ದು ಶಕ್ತಿ, ಸಾಮರ್ಥ್ಯ ನಿರೂಪಿಸುವುದು
- ವಿಜಯೇಂದ್ರ-ಉಪ ಸಮರ ಗೆದ್ದು ವಿರೋಧಿ ಬಣಕ್ಕೆ ಬಿಸಿ ಮುಟ್ಟಿಸುವುದು
- ಎಚ್.ಡಿ.ಕುಮಾರಸ್ವಾಮಿ-ಮಗನಿಗೆ ರಾಜಕೀಯ ಅಸ್ತಿತ್ವ ರೂಪಿಸುವುದು
ಚನ್ನಪಟ್ಟಣ
ನಿಖಿಲ್ ಕುಮಾರಸ್ವಾಮಿ (ಜೆಡಿಎಸ್) ವರ್ಸಸ್ ಸಿ.ಪಿ.ಯೋಗೇಶ್ವರ್ (ಕಾಂಗ್ರೆಸ್)
ಸಂಡೂರು
ಬಂಗಾರು ಹನುಮಂತು (ಬಿಜೆಪಿ) ವರ್ಸಸ್ ಅನ್ನಪೂರ್ಣ (ಕಾಂಗ್ರೆಸ್)
ಶಿಗ್ಗಾಂವಿ
ಭರತ್ ಬೊಮ್ಮಾಯಿ (ಬಿಜೆಪಿ) ವರ್ಸಸ್ ಯಾಸೀರ್ ಮೊಹ್ಮದ್ ಪಠಾಣ್ (ಕಾಂಗ್ರೆಸ್)
ವಿಜಯವಾಣಿ ಓದಿ ಕಾರು ಗೆಲ್ಲಿ . . . ನ.15ರಿಂದ ನ.30ರವರೆಗೆ ಈ ವಿಳಾಸಕ್ಕೆ ಕೂಪನ್ ತಲುಪಿಸಿ