

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಈಶ ಫೌಂಡೇಷನ್ ವತಿಯಿಂದ 16ನೇ ಈಶ ಗ್ರಾಮೋತ್ಸವದ ಅಂಗವಾಗಿ ವಿಭಾಗೀಯ ಮಟ್ಟದ ವಾಲಿಬಾಲ್ ಪಂದ್ಯಾಟಗಳು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಿತು.
ಕೆನರಾ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಪ್ರಾಂಶುಪಾಲ ಡಾ.ನಾಗೇಶ್ ಎಚ್.ಆರ್. ಮಾತನಾಡಿ ಈಶ ಫೌಂಡೇಶನ್ ಈ ಕಾರ್ಯಕ್ರಮ ಜನರನ್ನು ದೈಹಿಕ, ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಸಹಕಾರಿಯಾಗಿದೆ ಎಂದರು.
ಪಂದ್ಯಾವಳಿಯಲ್ಲಿ 16 ತಂಡ 130ಕ್ಕೂ ಅಧಿಕ ಆಟಗಾರರು ಭಾಗವಹಿಸಿದ್ದರು. ಚಿಕ್ಕಮಗಳೂರಿನ ಅಲೀಫ್ ಸ್ಟಾರ್ ತಂಡ ಉಡುಪಿಯ ಪಲ್ಲಿ ಗೆಳೆಯರ ತಂಡವನ್ನು ಸೋಲಿಸಿ ಡಿ.28ರಂದು ಕೊಯಂಬತ್ತೂರಿನ ಈಶಯೋಗ ಕೇಂದ್ರದಲ್ಲಿ ನಡೆಯುವ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಪಡೆಯಿತು.
ಈ ಕ್ರೀಡಾ ಮಹೋತ್ಸವ ಎರಡು ತಿಂಗಳುಗಳ ಕಾಲ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿಯ ನಾನಾ ಪ್ರದೇಶಗಳಲ್ಲಿ ನಡೆಯುತ್ತದೆ. 10 ಸಾವಿರಕ್ಕೂ ಅಧಿಕ ಗ್ರಾಮೀಣ ಮಹಿಳೆಯರು ಸೇರಿದಂತೆ 43ಸಾವಿರಕ್ಕೂ ಹೆಚ್ಚು ಆಟಗಾರರು ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಗಳಲ್ಲಿ ಸ್ಪರ್ಧಿಸುತ್ತಾರೆ. ಕ್ಲಸ್ಟರ್, ವಿಭಾಗೀಯ ಮತ್ತು ಅಂತಿಮ ಪಂದ್ಯಗಳ ಎಲ್ಲ ಹಂತಗಳಲ್ಲಿ ಒಟ್ಟು 52 ಲಕ್ಷ ರೂ.ಬಹುಮಾನ ಇರುತ್ತದೆ.
ಎಂಐಟಿ ಮಾಹೆಯ ಕ್ವಾಲಿಟಿ ಅಶ್ಶುರೆನ್ಸ್ ವಿಭಾಗದ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಎಸ್.ಆರ್.ಕೃಷ್ಣ ಬಂಡಾರು, ಎನ್‌ಐಟಿಕೆ ಸುರತ್ಕಲ್‌ನ ಯೋಜನಾ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ.ಗಂಗಾಧರನ್ ಕೆ.ವಿ., ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಮಂಜುನಾಥ ಭಂಡಾರಿ, ಕಾಮನ್‌ವೆಲ್ತ್ ಗೇಮ್ಸ್ 2022ರ ವೆಯ್ಟ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿ ಉಪಸ್ಥಿತರಿದ್ದರು.