

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕೃಷಿ, ಶಿಕ್ಷಣ ಮತ್ತು ಉದ್ಯೋಗ ಮೂರು ಧ್ಯೇಯದೊಂದಿಗೆ ಕೈರಂಗಳ ಪುಟ್ಯಕೋಟಿ ನಗರ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ನಡೆದ ಮೂರು ದಿನಗಳ ಮೇಳ ಭಾನುವಾರ ಸಂಪನ್ನಗೊಂಡಿತು.
ಶಾರದಾ ಗಣಪತಿ ವಿದ್ಯಾಕೇಂದ್ರದ ಮೈದಾನದಲ್ಲಿ ಶಾಲಾ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ನೇತೃತ್ವದಲ್ಲಿ ಕಳೆದ ಮೂರು ವರ್ಷ ಕೃಷಿ ಮೇಳ ನಡೆಸಿದ್ದರೆ, ಈ ವರ್ಷ ಪ್ರಥಮ ಬಾರಿಗೆ ಕೃಷಿಯೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು.
ಮೂರು ದಿನಗಳಲ್ಲಿ ನಡೆದ ಮೇಳದಲ್ಲಿ ಎಂಟು ಕಂಪನಿಗಳು ಭಾಗವಹಿಸಿ 96 ಮಂದಿಗೆ ಉದ್ಯೋಗ ಕೊಡುಗೆ ಸಿಕ್ಕಿದ್ದು ಮೇಳ ಆಯೋಜಕರ ಪಾಲಿಗೆ ಸಾರ್ಥಕ ಭಾವನೆ ಮೂಡಿಸಿದೆ. ಗಡಿಭಾಗದಲ್ಲಿ ನಡೆದ ಮೇಳ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶನಿವಾರ ಮತ್ತು ಭಾನುವಾರ ನಿರೀಕ್ಷೆಗೂ ಮೀರಿದ ಜನ ಭಾಗವಹಿಸಿದ್ದರು. ಮೂರು ದಿನಗಳು ಕೇರಳ, ಕರ್ನಾಟದಾದ್ಯಂತ 65ರಿಂದ 75 ಸಾವಿರ ಮಂದಿ ಭಾಗವಹಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
120ಕ್ಕೂ ಹೆಚ್ಚು ಮಳಿಗೆಗಳಿದ್ದು, ಎಸ್‌ಸಿಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಖಾಸಗಿ ಬ್ಯಾಂಕ್‌ಗಳು, ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿಯಮಿತ(ಸ್ಕಾೃಡ್) ಸೇರಿದಂತೆ ಖಾಸಗಿ ಸಂಸ್ಥೆಗಳಿಂದ ಕೃಷಿ ಯಂತ್ರೋಪಕರಣಗಳು, ಸಲಕರಣೆಗಳ ಪ್ರದರ್ಶನ, ಮಾರಾಟ ನಡೆಯಿತು.
ಜನರಿಗೆ ಮನೋರಂಜನೆ
ನರ್ಸರಿಯಲ್ಲಿ ಹೂವಿನ ಗಿಡಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಜನ ಸಾವಯವ ರಸಗೊಬ್ಬರ, ಕೃಷಿ ಪರಿಕರಗಳ ಖರೀದಿಯಲ್ಲಿ ತೊಡಗಿಸಿಕೊಂಡರು. ತಿಂಡಿ, ತಿನಿಸುಗಳ ಮಳಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಸೋಲಾರ್‌ಗೆ ಕೇಂದ್ರದಿಂದ ನೀಡಲ್ಪಡುವ ಸಬ್ಸಿಡಿ ಬಗ್ಗೆ ಮಾಹಿತಿ ಪಡೆದರು. ಮಕ್ಕಳಿಗೆ ಮನೋರಂಜನೆ ಆಟದ ವ್ಯವಸ್ಥೆ ಆಕರ್ಷಣೆ ಪಡೆಯಿತು. ಕೃಷಿ ಮೇಳದ ಮಳಿಗೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಬಯಲಾಟ, ಗಾನ ವೈವಿಧ್ಯ, ಹರಿಕಥೆ ಜನರಿಗೆ ಮನೋರಂಜನೆ ನೀಡಿತು.
ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಷ್ಠ ಭಾರತ್ ಪರಿಕಲ್ಪನೆಯಡಿ ಕೃಷಿ, ಶಿಕ್ಷಣ, ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ತಜ್ಞರು ಮಾಹಿತಿ ನೀಡಿದ್ದಾರೆ. ಸರ್ಕಾರಿ, ಖಾಸಗಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು, ವಿವಿಧ ಖಾಸಗಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು, ಕ್ಯಾಂಪಸ್ ಆಯ್ಕೆ ಮೂಲಕ 96 ಮಂದಿಗೆ ಉದ್ಯೋಗ ದೊರಕಿದೆ. ಮುಂದಿನ ವರ್ಷ ಇದೇ ಮಾದರಿಯಲ್ಲಿ ಮೇಳ ಆಯೋಜಿಸುವ ಯೋಜನೆ ಹೊಂದಲಾಗಿದೆ. - ಟಿ.ಜಿ.ರಾಜಾರಾಮ ಭಟ್, ಶಾರದಾಗಣಪತಿ ವಿದ್ಯಾಕೇಂದ್ರ ಸಂಚಾಲಕ.