ವಿಜೆ ಚಿತ್ರಾರ ದಿಢೀರ್​ ಸಾವಿನ ಬೆನ್ನಲ್ಲೇ ಪಾಲಕರ ಆರೋಪ: ಪೊಲೀಸರ ಮುಂದೆ ಭಾವಿ ಪತಿಯ ಶಾಕಿಂಗ್​ ಹೇಳಿಕೆ!

VJ Chaitra
Published on

ಚೆನ್ನೈ: ಪ್ರಖ್ಯಾತ ಕಿರುತೆರೆ ಕಲಾವಿದೆ ಹಾಗೂ ವಿಡಿಯೋ ಜಾಕಿ ಚಿತ್ರಾರ ಹಠಾತ್​ ನಿಧನದಿಂದ ಪಾಲಕರು, ಸ್ನೇಹಿತರು, ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳು ಶಾಕ್​ಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಚಿತ್ರಾ ಸಾವಿನಲ್ಲಿ ಏನೋ ಮೋಸದಾಟ ನಡೆದಿದೆ ಎಂದು ಅವರ ಸ್ನೇಹಿತರು ಮತ್ತು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ಬುಧವಾರ ಬೆಳಗ್ಗೆ ಚೆನ್ನೈನ ನಜರತ್‌ಪೇಟೆಯ ಹೋಟೆಲ್​ನಲ್ಲಿ ಚಿತ್ರಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸದ್ಯಕ್ಕೆ ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಹಿರಿಯ ಅಧಿಕಾರಿಯೊಬ್ಬರು ತನಿಖೆಯ ನೇತೃತ್ವ ವಹಿಸಿದ್ದಾರೆ.

ಚಿತ್ರಾ ಅವರ ಭಾವಿ ಪತಿ ಹೇಮಂತ್​ ಸಹ ಚಿತ್ರಾ ಜತೆ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಅವರು ಸಾಯುವ ಮುನ್ನ ನಾನು ರೂಮ್​ ಹೊರಗೆ ಕಾಯುತ್ತಿದ್ದೆ. ಸ್ನಾನ ಮಾಡಬೇಕಾಗಿರುವುದಿಂದ ಹೊರಗಿರುವಂತೆ ಹೇಳಿದ್ದಳು. ಆದರೆ, ತುಂಬಾ ಹೊತ್ತದಾರೂ ಬಾಗಿಲು ತೆರೆಯದಿದ್ದಾಗ ಹೋಟೆಲ್​ ಸಿಬ್ಬಂದಿಗೆ ಎಚ್ಚರಿಸಿದೆ. ಬಳಿಕ ಸಿಬ್ಬಂದಿ ನಕಲಿ ಕೀ ಸಹಾಯದಿಂದ ಬಾಗಿಲು ತೆಗೆದು ನೋಡಿದಾಗ ಚಿತ್ರಾ ಮೃತಪಟ್ಟಿದ್ದಳು. ಬಳಿಕ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿದೆವು ಎಂದಿದ್ದಾರೆ.

ಇನ್ನು ಚಿತ್ರಾ ಅವರ ತಂದೆ ನಿವೃತ್ತ ಪೊಲೀಸ್​ ಆಗಿದ್ದು, ನಜರತ್​ಪೇಟೆಯಲ್ಲಿ ದೂರು ದಾಖಲಿಸಿದ್ದಾರೆ. ಚಿತ್ರಾ ಸಾವಿನ ಬಗ್ಗೆ ನಮಗೆ ಸಂಶಯವಿದೆ ಎಂದು ಆಕೆಯ ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದು ತನಿಖೆ ನಡೆಸಲು ಮನವಿ ಮಾಡಿದ್ದಾರೆ. ತನಿಖೆಯ ಭಾಗವಾಗಿ ಪಸ್ತುತ ಪೊಲೀಸರು ಹೇಮಂತ್​ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಹೇಮಂತ್​ ಮತ್ತು ಚಿತ್ರಾ ಕಳೆದ ಆಗಸ್ಟ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜನವರಿಯಲ್ಲಿ ಇಬ್ಬರ ಮದುವೆಗೆ ದಿನಾಂಕ ನಿಗದಿಯಾಗಿತ್ತು. ಎರಡು ತಿಂಗಳ ಹಿಂದೆ ಅಂದರೆ ಅಕ್ಟೋಬರ್​ 19ರಂದು ಇಬ್ಬರು ಸರಳವಾಗಿ ರಿಜಿಸ್ಟರ್​ ಮದುವೆಯಾಗಿದ್ದರಂತೆ. ಇದೀಗ ಚಿತ್ರಾ ಸಾವಿನ ಸುತ್ತಾ ಸಾಕಷ್ಟು ಅನುಮಾನಗಳು ಎದ್ದಿದ್ದು, ಪೊಲೀಸರು ಆಕೆಯ ಫೋನ್​ ರೆಕಾರ್ಡ್​ಗಳ ಮೊರೆ ಹೋಗಿದ್ದಾರೆ.

ಇದಲ್ಲದೆ, ಕೆಲವು ಖಚಿತವಲ್ಲದ ಮೂಲಗಳು ಹೇಳುವ ಪ್ರಕಾರ ಚಿತ್ರಾ ಅವರ ಮುಖದ ಮೇಲೆ ಗಾಯದ ಕಲೆಗಳಾಗಿದ್ದವಂತೆ. ಇತ್ತ ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಅವಳು ತುಂಬಾ ಬೋಲ್ಡ್​ ಆಗಿದ್ದಳು. ಏನೋ ಮೋಸದಾಟ ನಡೆದಿದೆ ಎಂದು ಚಿತ್ರಾ ತಾಯಿ ಕಣ್ಣೀರಿಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net