

ಮುಂಬೈ: 'ದ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದ ವ್ಯಾಕ್ಸಿನ್ ವಾರ್' ಬಗ್ಗೆ ತೀವ್ರ ಕುತೂಹಲ ಕೆರಳಿದ್ದು, ಈ ಮಧ್ಯೆ ಇದೀಗ ಹೊಸ ಗೊಂದಲವೊಂದು ಸೃಷ್ಟಿಯಾಗಿದೆ.
ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಸಲಾರ್' ಚಿತ್ರದ ಬಿಡುಗಡೆ ದಿನದಂದೇ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ 'ದ ವ್ಯಾಕ್ಸಿನ್ ವಾರ್' ರಿಲೀಸ್ ಆಗಲಿದೆ ಎಂಬ ವದಂತಿ ಚಿತ್ರರಂಗದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ಹಿಂದೆ ಕಾಶ್ಮೀರ್ ಫೈಲ್ಸ್ ಪ್ರಭಾಸ್ ನಟನೆಯ ರಾಧೆಶ್ಯಾಮ್ ಚಿತ್ರದೊಂದಿಗೆ ಪೈಪೋಟಿ ನೀಡಿತ್ತು. ಇದೀಗ ಸಲಾರ್ ಜತೆಗೆ ರಿಲೀಸ್ ಮಾಡುವ ಮುಖೇನ ಪ್ರಭಾಸ್ಗೆ ಮತ್ತೊಮ್ಮೆ ಸವಾಲು ಹಾಕಲು ಸಿದ್ಧರಿದ್ದಾರೆ ಎಂಬ ಸುದ್ದಿಗೆ ಇದೀಗ ಸ್ವತಃ ನಿರ್ದೇಶಕ ವಿವೇಕ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ವಿವೇಕ್ ಅಗ್ನಿಹೋತ್ರಿ, "ನಾನು ಪ್ಯಾನ್ ಇಂಡಿಯಾ ಸ್ಟಾರ್ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಿಲ್ಲ. ನಕಲಿ ಉಲ್ಲೇಖಗಳನ್ನು ಆರೋಪಿಸುವ ಇಂತಹ ಸುಳ್ಳು ಸುದ್ದಿಯನ್ನು ಯಾರು ಹರಡುತ್ತಿದ್ದಾರೆ? ಪ್ರಭಾಸ್ ಅವರನ್ನು ನಾನು ಗೌರವಿಸುತ್ತೇನೆ. ನಮ್ಮದು ದೊಡ್ಡ ಬಜೆಟ್ ಚಿತ್ರಗಳಲ್ಲ. ಸಣ್ಣ-ಬಜೆಟ್ ಸಿನಿಮಾಗಳು. ನಮ್ಮ ನಡುವೆ ಯಾವುದೇ ಹೋಲಿಕೆ ಇಲ್ಲ. ದಯವಿಟ್ಟು ಇದನ್ನು ಬಿಟ್ಟು ಬಿಡಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).