More

    ಅಂದು ಕೆಳಗಿಳಿಸಿದವರೇ ಇಂದು ಮಂಡಿಯೂರಿದರು! ನಾಯಕತ್ವ ಪ್ರಖರತೆ ಕುಂದಿಸಿದ್ದವರಿಂದಲೇ ಮತ್ತೆ ಗುಣಗಾನ

    ಶಿವಾನಂದ ತಗಡೂರು
    ಬೆಂಗಳೂರು:ರಾಜ್ಯ ಬಿಜೆಪಿಗೆ ಗಟ್ಟಿ ನಾಯಕತ್ವ ನೀಡಿ ಎರಡು ಬಾರಿ ಅಧಿಕಾರದ ಹೊಸ್ತಿಲಿಗೆ ತಂದಿರಿಸಿದ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದ ಪ್ರಖರತೆ ಎಷ್ಟಿತ್ತು ಎನ್ನುವುದು ಕೇಂದ್ರ ನಾಯಕತ್ವಕ್ಕೆ ಅರಿವಾಗಿದೆ. ಆದರೆ, ರಾಜ್ಯ ಬಿಜೆಪಿ ಸರಿಪಡಿಸಲು ಯಾವ ಕಡೆಯಿಂದ ಶಾಣಿ ಹಿಡಿಯಬೇಕು ಎನ್ನುವುದು ಕೇಂದ್ರ ಹೈಕಮಾಂಡ್‌ಗೂ ಯಕ್ಷ ಪ್ರಶ್ನೆಯಾಗಿದೆ.
    ಚುನಾವಣೆ ಬಳಿಕ ಅದ್ವಾನಗಳ ಗೂಡಿನಿಂತಾಗಿರುವ ರಾಜ್ಯ ಬಿಜೆಪಿಗೆ ಎಲ್ಲವನ್ನೂ ಸರಿಪಡಿಸುವ, ಸವಾಲುಗಳನ್ನು ಗಟ್ಟಿಯಾಗಿ ಮೆಟ್ಟಿ ನಿಲ್ಲುವ ನಿಜ ನಾಯಕ ಬೇಕಾಗಿದೆ. ಅದು ಯಾರು ಎನ್ನುವುದಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ರಾಜ್ಯ ನಾಯಕತ್ವ ಮಕಾಡೆ ಮಲಗಿ ಸೋಲೊಪ್ಪಿಕೊಂಡಿದೆ.
    ಇನ್ನು ಅತ್ತ ಕೇಂದ್ರದಲ್ಲಿ ಬಿಜೆಪಿ ಹೈಕಮಾಂಡ್ ಕೂಡ, ಆ ನಾಯಕನ ತಲಾಷ್ ಮಾಡಲು ಕಳೆದ ಎರಡು ತಿಂಗಳಿಂದ ನಿರಂತರವಾಗಿ ಕಸರತ್ತು ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಗಟ್ಟಿ ನಾಯಕ ಯಾರು ಎಂದು ಹುಡುಕುವಾಗ ಭರವಸೆಯ ಬದಲಿಗೆ, ಬರಿ ನಿರಾಶೆಯ ಕಾರ್ಮೋಡಗಳೇ ಹೈಕಮಾಂಡ್ ಮುಂದೆ ಕಾಣಿಸುತ್ತಿರುವುದು ಸುಳ್ಳೇನೂ ಅಲ್ಲ.
    ಭಾರಿ ಅತ್ಯುತ್ಸಾಹದಲ್ಲಿದ್ದ ಬಿಜೆಪಿಗೆ, ರಾಜ್ಯದಲ್ಲಿ ಈ ಬಾರಿಯೂ ಹೇಗಾದರೂ ಮಾಡಿ ಅಧಿಕಾರ ಹಿಡಿಯಬಹುದು ಎನ್ನುವ ನಾನಾ ಲೆಕ್ಕಾಚಾರಗಳಲ್ಲಿತ್ತು. ಆದರೆ ರಾಜ್ಯದ ಮತದಾರ ಅವರ ಲೆಕ್ಕಚಾರಗಳೆಲ್ಲವನ್ನೂ ತಲೆಕೆಳಗು ಮಾಡಿದ ಮೇಲೆಯೇ ದೆಹಲಿ ಬಿಜೆಪಿ ನಾಯಕರಿಗೆ ನಿಜ ವಾಸ್ತವ ಅರ್ಥವಾಗಿದ್ದಂತೂ ದಿಟ.

    ಇಳಿಸಿದವರೇ ಎಡತಾಕುತ್ತಿದ್ದಾರೆ!

    ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಲು ಕಸರತ್ತು ನಡೆಸಿ, ದೆಹಲಿ ನಾಯಕರಿಗೆ ನಿತ್ಯ ನಕರಾತ್ಮಕ ಸುದ್ದಿಗಳನ್ನೇ ರವಾನಿಸುತ್ತಿದ್ದ ಪಡೆಯಲ್ಲಿ ಈಗ ಸಂತೋಷ ಕರಗಿ ಹೋಗಿದೆ. ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿದ ಮೇಲೆ ನಮ್ಮದೇ ಕಾರುಬಾರು ಎಂದು ಬೀಗಿದ ರಾಜ್ಯ ಬಿಜೆಪಿ ಕೆಲ ನಾಯಕರನ್ನು ಚುನಾವಣೆಯಲ್ಲಿ ಮತದಾರರು ಮಕಾಡೆ ಮಲಗಿಸಿದ್ದು
    ಎಲ್ಲರನ್ನೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಅಂದು ಯಡಿಯೂರಪ್ಪ ಅವರಿಗೆ ಕಾಟ ಕೊಟ್ಟವರು, ಕಾಲೆಳೆದವರು, ಅಧಿಕಾರದಿಂದ ಕೆಳಗಿಳಿಸಿದ ಪಡೆಯೇ ಇಂದು ಮತ್ತೆ ದಿಕ್ಕು ತೋಚದೆ ಯಡಿಯೂರಪ್ಪ ಮುಂದೆ ಮಂಡಿಯೂರಿದೆ.

    ಆಗಿದ್ದಾದರೂ ಏನು?

    ಸುಧೀರ್ಘ ಅವಧಿಗೆ ವಿರೋಧ ಪಕ್ಷದ ನಾಯಕನಾಗಿ, ಸಿಎಂ ಗದ್ದೆಗೆಗೇರಿದ ಯಡಿಯೂರಪ್ಪ ಅವರ ಜನಪ್ರಿಯತೆಯ ವೇಗವನ್ನು ಸ್ವತಃ ಬಿಜೆಪಿಯ ಕೆಲ ನಾಯಕರಿಗೆ ಅರಗಿಸಿಕೊಳ್ಳಲು ಆಗಲೇ ಇಲ್ಲ. 2008ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ಕಸರತ್ತು ಮಾಡಿದ ಸ್ವಪಕ್ಷೀಯರಿಗೆ ವಾಸ್ತವ ಅರಿವಾಗಿ ಮುಂದಿನ ಚುನಾವಣೆ ಹೊತ್ತಿಗೆ ತಪ್ಪು ಸರಿಪಡಿಸಿಕೊಳ್ಳುವ ಮೂಲಕ ಮತ್ತೆ ಯಡಿಯೂರಪ್ಪ ಅವರನ್ನು ಮುಂಚೂಣಿಗೆ ತಂದು ನಿಲ್ಲಿಸಿಕೊಂಡಿದ್ದರಿಂದ ಮತ್ತೆ ಬಹುಮತದ ಹತ್ತಿರಕ್ಕೆ ಬರಲು ಸಾಧ್ಯವಾಗಿತ್ತು.

    ಮತ್ತದೇ ತಪ್ಪು

    ರಾಜ್ಯದಲ್ಲಿ 2ನೇ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆಗೇರಿದಾಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳ ಗದ್ದುಗೆಯಿಂದ ತೆರೆ ಮರೆಗೆ ಸರಿಸಿ ಅಲ್ಲಿ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಿದ ತಂಡಕ್ಕೆ ಕೊನೆಗೂ ಸಂತೋಷ ಸಿಗಲೇ ಇಲ್ಲ. ರಾಜ್ಯದಲ್ಲಿ ಇನ್ನು ಎಲ್ಲವೂ ನಾನೇ ಎಂದು ಬಿಜೆಪಿಯನ್ನು ತನ್ನ ತೆಕ್ಕೆಗೆ ಹಿಡಿಯಾಗಿ ತೆಗೆದುಕೊಳ್ಳಲು ಅವಣಿಸಿದವರಿಗೆ ಮತ್ತೆ ಅಸಂತೋಷವೇ ಕಾಡಿದ್ದು ಕಾಕತಾಳೀಯ. ಹಿಂದೆ ಮಾಡಿದ್ದ ತಪ್ಪನ್ನು ಮತ್ತೆ ಪುನಾರಾವರ್ತನೆ ಮಾಡಿದ ಬಿಜೆಪಿಗೆ ಮುಂದೇನಾಗುತ್ತದೆ ಎನ್ನುವ ಅರಿವಿನ ಪರಿವೇ ಇರಲಿಲ್ಲ.

    ಕತ್ತಲಲ್ಲಿಟ್ಟ ಮಾಹಿತಿ

    ಎಲ್ಲವನ್ನೂ ಪರಾಮರ್ಶೆ ಮಾಡಿ ನೋಡಿ ನಿರ್ಣಯಿಸಬೇಕಾಗಿದ್ದ ಹೈಕಮಾಂಡ್ ಕೂಡ ಕೊನೆ ತನಕವೂ ಸಂತೋಷ ಪಡೆಗೆ ಜೈ ಅಂದಿದ್ದಕ್ಕೆ ಇಷ್ಟೊಂದು ದುಬಾರಿ ಬೆಲೆ ತೆರಬೇಕಾಗಿ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ರಾಜ್ಯ ರಾಜಕಾರಣದ ವಾಸ್ತವ ಮತ್ತು ಸತ್ಯ ಸಂಗತಿಗಳನ್ನು ಕತ್ತಲಿನಲ್ಲಿಡುವ ಮೂಲಕ ಕೇಂದ್ರದ ನಾಯಕರ ಕಣ್ಣಿಗೂ ಬಟ್ಟೆ ಕಟ್ಟುವಲ್ಲಿ ಯಶಸ್ವಿಯಾಗಿದ್ದ ನಾಯಕರುಗಳಿಗೆ ಈಗ ನಿತ್ಯವೂ ಮುಂದೇನು ಎನ್ನುವ ಪ್ರಶ್ನೆಯೇ ಗಾಢವಾಗಿ ಕಾಡುತ್ತಿದೆ. ಆದರೆ ಕಾಲ ಯಾರ ಕೈಯಲ್ಲೂ ಇಲ್ಲ. ಕಾಲಚಕ್ರ ಉರುಳುತ್ತಲೇ ಇದೆ. ಹೊಸ ನಾಯಕತ್ವಕ್ಕಾಗಿ ಪರಿತಪಿಸುತ್ತಿರುವ ಹೈಕಮಾಂಡ್‌ಗೆ ಭರವಸೆಯ ನಾಯಕದ್ದೆ ನಿತ್ಯ ಚಿಂತೆಯಾಗಿದೆ.

    ಅಷ್ಟು ಸುಲುಭವಿಲ್ಲ

    ಉತ್ತರ ಭಾರತ ಭಾಗದಲ್ಲಿ ರಾಜಕಾರಣವನ್ನು ನಿಭಾಯಿಸಿದ ಬಗೆಯಲ್ಲಿ ಕರ್ನಾಟಕ ರಾಜಕಾರಣ ಇಲ್ಲ ಎನ್ನುವ ಸತ್ಯದ ಅರಿವು ಗೊತ್ತಾದ ಮೇಲೂ ರಾಜ್ಯ ಬಿಜೆಪಿಯನ್ನು ಎಲ್ಲಿಂದ ಸರಿಪಡಿಸಬೇಕು ಎನ್ನುವುದು ಮಾತ್ರ ದೊಡ್ಡ ಸವಾಲಾಗಿದೆ. ಎಲ್ಲವೂ ಕೇಂದ್ರದ ಹಣತೆಯಂತೆ ನಡೆಯಬೇಕು ಎನ್ನುವ ಗೋಜಿಗೆ ಬಿದ್ದಿದ್ದ ಹೈಕಮಾಂಡ್ ಈಗ ಒಂದಿಷ್ಟು ಭಿನ್ನವಾಗಿ ಚಿಂತಿಸಿ ನಿರ್ಣಯಿಸುವ ಸಂಕ್ರಮಣ ಕಾಲಕ್ಕೆ ಮುಖಾಮುಖಿಯಾಗಿದೆ. ಮತ್ತೆ ಎಡವಿ ಬಿದ್ದು ಅವಲಕ್ಷಣ ಮಾಡಿಕೊಳ್ಳಲು ಸಿದ್ಧವಿಲ್ಲದ ಬಿಜೆಪಿ ಈಗ ಒಂದೊಂದೆ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts