
ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ನೀಡಿದರೆ ದೇಶದ ಅಭದ್ರತೆ, ದಿವಾಳಿತನ, ಭ್ರಷ್ಟಾಚಾರ, ಆಂತರಿಕ ಸುರಕ್ಷತೆಯ ಅಪಾಯಕ್ಕೆ ನಾಂದಿಯಾಗಲು ಮತ ನೀಡಿದಂತೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವ್ಯಾಖ್ಯಾನ ಮಾಡಿದರು.
ಕಡೂರು ತಾಲೂಕು ಸಕರಾಯಪಟ್ಟಣದಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಜನರಿಗೆ ದುಡಿಯಲು ಕೆಲಸವಿಲ್ಲದಂತಾಗಿದೆ. ಆದರೆ ದಿವಾಳಿಯಾಗಿರುವ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನ ಪೊಳ್ಳು ಭರವಸೆಗಳ ಬಗ್ಗೆ ಜನ ಜಾಗೃತರಾಗಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ 28 ಕ್ಷೇತ್ರಗಳಲ್ಲಿ ಗೆದ್ದು ಮೋದಿಗೆ ಕೊಡುಗೆ ನೀಡಲಿದ್ದೇವೆ ಎಂದು ಹೇಳಿದರು.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಬೇಕು. ಕಾಂಗ್ರೆಸ್ಸಿಗೆ ಮತವನ್ನು ನೀಡಿದರೆ ದೇಶದ ಅದ ಪತನಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ನಾನು ಸಿಎಂ ಆಗಿದ್ದಾಗ ಜಾರಿಗೊಳಿಸಿದ ಭಾಗ್ಯಲಕ್ಷ್ಮಿ ಯೋಜನೆ ಎಲ್ಲಿ ಹೋಯಿತು? ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಎಲ್ಲಿ? ಕಿಸಾನ್ ಸಮ್ಮಾನ್ ಯೋಜನೆ ಎಲ್ಲಿದೆ? ಒಟ್ಟಾರೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ ದೇಶಪ್ರೇಮಿಗಳು ಹಾಗೂ ದೇಶದ್ರೋಹಿಗಳ ನಡುವೆ ನಡೆಯುತ್ತಿದೆ. ಹೀಗಾಗಿ ಇದು ದೇಶದ ಭವಿಷ್ಯ ಬರೆಯುವ ಚುನಾವಣೆ ಭಾರತ ಶಕ್ತಿಶಾಲಿ ದೇಶವಾಗಲು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಹೀಗಾಗಿ ಪ್ರತಿಯೊಬ್ಬರು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಅನ್ನ ಮಾಡುವ ಕುಕ್ಕರ್ ನಲ್ಲಿ ಬಾಂಬ್ ಇಟ್ಟವರು ನಮ್ಮ ಬ್ರದರ್ ಗಳು ಎನ್ನುತ್ತಾರೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಿದ್ಧವಿಲ್ಲ. 2013ರ ಹಿಂದೆ ಭಾರತ ಭ್ರಷ್ಟಾಚಾರದ ಸರಮಾಲೆಯಿಂದ ಹಿಂಡಿಡಿಪೆಯಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತ ದೇಶ ಆರ್ಥಿಕ ಬಲಾಡ್ಯ ದೇಶಗಳ ಪಟ್ಟಿಯಲ್ಲಿ ಕೊನೆಯಿಂದ ಐದನೇ ಸ್ಥಾನದಲ್ಲಿತ್ತು. ಆದರೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಬಲಾಡ್ಯ ದೇಶಗಳ ಪಟ್ಟಿಯಲ್ಲಿ ಮೇಲಿನಿಂದ ಐದನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಮಾಜಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಅವಧಿಯಲ್ಲಿ ಉಚಿತವಾಗಿ ಲಸಿಕೆ ನೀಡದೆ ಇದ್ದಿದ್ದರೆ ಇಂದು ನಾವು ಯಾರು ಜೀವಂತವಾಗಿರಲು ಸಾಧ್ಯವಿರಲಿಲ್ಲ. ಹೀಗಾಗಿ ಇಂದು ನಾವು ಬಿಜೆಪಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿ ಅವರ ಋಣ ತೀರಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಮೂದಲಿಸಿದ್ದಾರೆ. ಈ ಮೂಲಕ ಕನ್ನಡಿಗರನ್ನು ಅಪಮಾನಿಸುವ ಕೆಲಸವನ್ನು ಜಯಪ್ರಕಾಶ್ ಹೆಗ್ಡೆ ಮಾಡಿದ್ದಾರೆ ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕನ್ನಡ ವಿರೋಧಿ ಕಾಂಗ್ರೆಸ್ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಸಭೆಯಲ್ಲಿ ಮಾಜಿ ಸಚಿವರಾದ ಸಿ.ಟಿ.ರವಿ, ಡಿ.ಎನ್. ಜೀವರಾಜ್, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್, ಡಿ.ಎಸ್.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಬಿಜೆಪಿ ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಮತ್ತಿತರಿದ್ದರು.
ಅಂತರಾಳ ಬಿಚ್ಚಿಟ್ಟ ಸಿ.ಟಿ.ರವಿ
ವಿಧಾನಸಭಾ ಚುನಾವಣಾ ವೇಳೆ ನಮ್ಮ ಅದೃಷ್ಟ ಸರಿ ಇರಲಿಲ್ಲ. ಜೆಡಿಎಸ್ ಪಕ್ಷದ ಅಭ್ಯರ್ಥಿ ಇದ್ದರು ಅವರು ಕಾಂಗ್ರೆಸ್ ಗೆ ಬೆಂಬಲ ನೀಡಿದರು. ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಯಿತು ಇದರಲ್ಲಿ ನಮ್ಮ ಪಕ್ಷದ ಮುಖಂಡರೂ ಇದ್ದರು ಎಂದು ಮಾಜಿ ಸಚಿವ ಸಿ.ಟಿ.ರವಿ ತಮ್ಮ ಅಂತರಾಳ ಬಿಚ್ಚಿಟ್ಟರು.
ಸಖರಾಯಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಬಾವುಕರಾಗಿ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ಅಭಿವೃದ್ಧಿ ವಿಷಯ ಚರ್ಚೆಗೆ ಬರಲೇ ಇಲ್ಲ. ಮನೆಹಾಳು ರಾಜಕಾರಣ ಮಾಡದೆ ಪ್ರೀತಿಯ ರಾಜಕಾರಣ ಮಾಡಿದ್ದು ತಪ್ಪೇ? ನೀರು ಕೇಳಿದಾಗ ನೀರಾವರಿ ಯೋಜನೆಯನ್ನೇ ತಂದಿದ್ದು ತಪ್ಪೇ? ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಮುಖಂಡ ಎಸ್.ಎಲ್. ಬೋಜೇಗೌಡ, ಬಿಜೆಪಿಯ ಮಾಜಿ ಸಚಿವರು ಹಾಗೂ ಮಾಜಿ ಶಾಸಕರುಗಳಿದ್ದ ಸಭೆಯಲ್ಲೇ ಸಿ.ಟಿ.ರವಿ ಹೀಗೆ ಬಾವುಕರಾಗಿ ಮಾತನಾಡಿದ್ದು ಕಾರ್ಯಕರ್ತರಲ್ಲಿ ದಿಗ್ಭ್ರಮೆ ಮೂಡಿಸಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ವಿಧಾನಸೌಧದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ. ಇನ್ನು ಸಂಸತ್ತಿನಲ್ಲಿ ಅವರನ್ನು ಅಧಿಕಾರಕ್ಕೆ ತಂದರೆ, ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ಪಾಕಿಸ್ತಾನ ಪರ ಘೋಷಣೆ ಕೇಳುತ್ತವೆ. ಇದನ್ನು ಕೇಳಲು ನಾವು ಬದುಕಿರಬೇಕಾ ಎಂದು ಪ್ರಶ್ನಿಸಿದರು.