ಭಾರಿ ಚರ್ಚೆಗೆ ಕಾರಣವಾಗಿದೆ ವಿರಾಟ್ ಕೊಹ್ಲಿ ಹೊಸ ಲುಕ್!

kohli web
Published on

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಇಳಿದರೆ ಭರ್ಜರಿ ರನ್‌ದಾಹದೊಂದಿಗೆ ಬ್ಯಾಟ್ ಬೀಸುವರು. ಆದರೆ ಐಪಿಎಲ್ 14ನೇ ಆವೃತ್ತಿ ಅರ್ಧಕ್ಕೆ ಸ್ಥಗಿತಗೊಂಡ ಬಳಿಕ ಸರಿಸುಮಾರು ಒಂದು ತಿಂಗಳಿನಿಂದ ವಿರಾಟ್ ಕೊಹ್ಲಿ ಕೂಡ ಮನೆಯಲ್ಲೇ ಲಾಕ್ ಆಗಿದ್ದಾರೆ. ಈ ಕ್ವಾರಂಟೈನ್ ಅವಧಿಯಲ್ಲಿ ವಿರಾಟ್ ಕೊಹ್ಲಿ ಅವರ ಲುಕ್ ಕೂಡ ಸಾಕಷ್ಟು ಬದಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

32 ವರ್ಷದ ವಿರಾಟ್ ಕೊಹ್ಲಿ ಮೊದಲೇ ಗಡ್ಡಧಾರಿ ಲುಕ್‌ನಲ್ಲಿದ್ದರು. ಇದೀಗ ಕ್ವಾರಂಟೈನ್ ಅವಧಿಯಲ್ಲಿ ಅವರ ಕೂದಲು ಮತ್ತು ಗಡ್ಡ ಸಾಕಷ್ಟು ಉದ್ದವಾಗಿ ಬೆಳೆದಿದ್ದು, ಜತೆಗೆ ಅವರ ದೊಡ್ಡದಾದ ಕನ್ನಡಕ ಅವರ ಲುಕ್‌ಅನ್ನು ಸಂಪೂರ್ಣ ಭಿನ್ನಗೊಳಿಸಿದೆ. ನೆಟ್ಟಿಗರು ಅವರ ಹೊಸ ಲುಕ್‌ಅನ್ನು ವಿವಿಧ ವ್ಯಕ್ತಿಗಳಿಗೆ, ಸಿನಿಮಾ-ವೆಬ್ ಸಿರೀಸ್ ಪಾತ್ರಧಾರಿಗಳಿಗೆ ಹೋಲಿಸುವ ಮೂಲಕ ಭಾರಿ ಚರ್ಚೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಕೊಹ್ಲಿಯ ಹೊಸ ಲುಕ್‌ಅನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಜನಪ್ರಿಯ ಇಂಗ್ಲಿಷ್ ವೆಬ್ ಸಿರೀಸ್ ‘ಮನಿ ಹೀಸ್ಟ್’ನ ಪ್ರೊಫೆಸರ್ ಪಾತ್ರಧಾರಿಯೊಂದಿಗೆ ವಿರಾಟ್ ಕೊಹ್ಲಿಯ ಹೊಸ ಲುಕ್ ಸಾಕಷ್ಟು ಹೋಲುತ್ತಿದೆ ಎಂದು ಹೆಚ್ಚಿನ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ಸರಣಿಯ ಭಾರತೀಯ ಆವೃತ್ತಿಗೆ ಕೊಹ್ಲಿ ಹೊಂದಿಕೆಯಾಗಬಹುದು ಎಂದೂ ಕೆಲವರು ಕಾಲೆಳೆದಿದ್ದಾರೆ.

ವಿರಾಟ್ ಕೊಹ್ಲಿ ಈಗ ಬಾಬಿ ಡಿಯೋಲ್‌ರಂತೆ ಕಾಣುತ್ತಿದ್ದಾರೆ ಎಂದು ಇನ್ನು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ‘ಕಬೀರ್ ಸಿಂಗ್’ ಸಿನಿಮಾದ ಶಹೀದ್ ಕಪೂರ್ ಪಾತ್ರದ ಲುಕ್ ಜತೆಗೆ ಹೋಲಿಕೆ ಮಾಡಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧರಾಗುತ್ತಿರುವ ವಿರಾಟ್ ಕೊಹ್ಲಿ, ಸೋಮವಾರವಷ್ಟೇ ಟೀಮ್ ಇಂಡಿಯಾದ ಕ್ವಾರಂಟೈನ್‌ಗೆ ಪ್ರವೇಶ ಪಡೆದಿದ್ದು, ಜೂನ್ 2ರಂದು ಲಂಡನ್ ವಿಮಾನ ಏರಲಿದ್ದಾರೆ. ಇಂಗ್ಲೆಂಡ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರಶಸ್ತಿ ಸುತ್ತಿನ ಹೋರಾಟ ಮತ್ತು ಆತಿಥೇಯರೆದುರು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net