ವಿರಾಟ್​ ಕೊಹ್ಲಿಯ ಒಟ್ಟು ಆಸ್ತಿ ಎಷ್ಟು? ಕ್ರಿಕೆಟ್​ ಹೊರತಾಗಿ ಬೇರೆ ಆದಾಯ ಮೂಲ ಯಾವುವು? ಇಲ್ಲಿದೆ ಕಂಪ್ಲೀಟ್​ ಮಾಹಿತಿ...Virat Kohli

Virat Kohli
Published on

Virat Kohli: ಟೀಮ್​ ಇಂಡಿಯಾದ ಚೇಸ್​ ಮಾಸ್ಟರ್​, ದಾಖಲೆಗಳ ಸರದಾರ ಹಾಗೂ ರನ್​ ಮೆಷಿನ್ ಎಂದೇ ಖ್ಯಾತಿ ಪಡೆದಿರುವ​ ವಿರಾಟ್​ ಕೊಹ್ಲಿ ದಿಢೀರನೇ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ಆದರೂ, ಕೊಹ್ಲಿ ನಿರ್ಧಾರವನ್ನು ಸ್ವಾಗತಿಸಿದ್ದು, ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತಿದ್ದಾರೆ. ಮಾಜಿ ಕ್ರಿಕೆಟಿಗರು ಕೂಡ ಕೊಹ್ಲಿ ಶುಭ ಕೋರಿದ್ದಾರೆ. ಸದ್ಯ ಏಕದಿನ ಸ್ವರೂಪದಲ್ಲಿ ಮಾತ್ರ ಉಳಿದುಕೊಂಡಿದ್ದಾರೆ. ಕೆಲವೇ ವರ್ಷಗಳಲ್ಲಿ ಆ ಸ್ವರೂಪಕ್ಕೂ ವಿದಾಯ ಹೇಳಲಿದ್ದಾರೆ. ಈ ಸಮಯದಲ್ಲಿ ವೃತ್ತಿ ಜೀವನದಿಂದಾಚೆಗೆ ಕೊಹ್ಲಿ ಬದುಕು ಹೇಗಿದೆ? ಅವರ ಆಸ್ತಿ ಮೌಲ್ಯ ಎಷ್ಟು? ಕ್ರಿಕೆಟ್​ ಹೊರತುಪಡಿಸಿ ಬೇರೆ ಯಾವ ಆದಾಯದ ಮೂಲಗಳನ್ನು ಹೊಂದಿದ್ದಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

14 ವರ್ಷಗಳ ವೃತ್ತಿ ಜೀವನದಲ್ಲಿ ಕೊಹ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 254 ರನ್​. ಕೊಹ್ಲಿ, ಕೊನೆಯ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಭಾರತ ಪರ ಟೆಸ್ಟ್ ಪಂದ್ಯ ಆಡಿದರು.

ವಿರಾಟ್ ಕೊಹ್ಲಿ ಓರ್ವ ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ಟೀಮ್ ಇಂಡಿಯಾಕ್ಕೆ ಅನೇಕ ಉತ್ತಮ ಗೆಲುವುಗಳನ್ನು ನೀಡಿದ್ದಾರೆ. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಟೆಸ್ಟ್‌ ಆಡುವ ರೀತಿ ಬದಲಾಯಿತು. ಕೊಹ್ಲಿ ಅವರು ದೀರ್ಘ ಸ್ವರೂಪದ ಕ್ರಿಕೆಟ್​ಗೆ​ ತೀವ್ರತೆಯನ್ನು ತಂದರು. ಫಿಟ್‌ನೆಸ್ ಮುಖ್ಯ ಎಂದು ಹೇಳಿಕೊಟ್ಟರು. ಹಿಂದೆಂದೂ ಕಾಣದ ರೀತಿಯಲ್ಲಿ ವೇಗದ ಬೌಲಿಂಗ್ ಅನ್ನು ಉತ್ತೇಜಿಸಿದರು. ಟೀಮ್ ಇಂಡಿಯಾ ಜಗತ್ತಿನ ಎಲ್ಲಿಯಾದರೂ ಸ್ಪರ್ಧಿಸಬಹುದು ಮತ್ತು ಗೆಲ್ಲಬಹುದು ಎಂಬ ನಂಬಿಕೆಯನ್ನು ಕೊಹ್ಲಿ ಹುಟ್ಟುಹಾಕಿದರು.

ಭಾರತಕ್ಕೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಗೆಲುವುಗಳನ್ನು ನೀಡಿದ ನಾಯಕರಲ್ಲಿ ವಿರಾಟ್​ ಕೊಹ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ನೇತೃತ್ವದಲ್ಲಿ ಭಾರತ 68 ಪಂದ್ಯಗಳಲ್ಲಿ 40 ಗೆಲುವುಗಳು ಕಂಡಿದ್ದರೆ, ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ 60 ಪಂದ್ಯಗಳಲ್ಲಿ 27 ಗೆಲುವುಗಳನ್ನು ಕಂಡಿದೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ 49 ಪಂದ್ಯಗಳಲ್ಲಿ ಭಾರತ 21 ಗೆಲುವುಗಳನ್ನು ಸಾಧಿಸಿದೆ.

ವಿರಾಟ್ ಕೊಹ್ಲಿ ಅವರ ನಿವ್ವಳ ಆದಾಯ

ಟೈಮ್ಸ್ ನೌ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯ 1,050 ಕೋಟಿ ರೂಪಾಯಿ. ಈ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ನಿವ್ವಳ ಮೌಲ್ಯ 255 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ, ದಂಪತಿ ಆಸ್ತಿ 1,250 ಕೋಟಿ ರೂ.ಗಳನ್ನು ಮೀರಿದೆ.

ಕ್ರೀಡೆಯಿಂದ ಕೊಹ್ಲಿಯ ಆದಾಯ

ಕೊಹ್ಲಿ ಅವರ ಹೆಸರು ಬಿಸಿಸಿಐ ಎ+ ಕೇಂದ್ರ ಒಪ್ಪಂದದಲ್ಲಿ ಸೇರಿದ್ದು, ಇದು ವಾರ್ಷಿಕ 7 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಅವರ ಪಂದ್ಯ ಶುಲ್ಕ ಪ್ರತಿ ಟೆಸ್ಟ್‌ಗೆ 15 ಲಕ್ಷ ರೂಪಾಯಿ. ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ಮತ್ತು ಪ್ರತಿ ಟಿ20 ಪಂದ್ಯಕ್ಕೆ 3 ಲಕ್ಷ ರೂ.ಗಳನ್ನು ಪಡೆಯುತ್ತಾರೆ. 2008 ರಿಂದ 2025 ರವರೆಗೆ, ಕೊಹ್ಲಿಯ ಐಪಿಎಲ್ ಗಳಿಕೆಯು ಕೂಡ ಗಣನೀಯವಾಗಿ ಬೆಳೆದಿದೆ. 12 ಕೋಟಿಯಿಂದ 21 ಕೋಟಿ ರೂಪಾಯಿವರೆಗೆ ಬಂದು ನಿಂತಿದೆ. ಅವರ ಒಟ್ಟು ಐಪಿಎಲ್ ಗಳಿಕೆಯನ್ನು ನೋಡಿದರೆ, 212.44 ಕೋಟಿ ರೂಪಾಯಿ ಇದೆ ಎಂದು ಒನ್‌ಕ್ರಿಕೆಟ್ ವರದಿ ಮಾಡಿದೆ.

ಬ್ರ್ಯಾಂಡ್​ಗಳಿಂದ ಕೊಹ್ಲಿ ಗಳಿಕೆ

ಕೊಹ್ಲಿ 30ಕ್ಕೂ ಹೆಚ್ಚು ಬ್ರಾಂಡ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ. MRF ಗಾಗಿ 8 ವರ್ಷಗಳ ಬ್ಯಾಟ್ ಪ್ರಾಯೋಜಕತ್ವಕ್ಕಾಗಿ 100 ಕೋಟಿ ರೂಪಾಯಿಯನ್ನು ಗಳಿಸುತ್ತಾರೆ. ಪೂಮಾ ಜೊತೆಗಿನ 8 ವರ್ಷಗಳ ಒಪ್ಪಂದಕ್ಕಾಗಿ 110 ಕೋಟಿ ಹಾಗೂ ಆಡಿಯಿಂದ 5 ಕೋಟಿ ರೂ. ಪಡೆಯುತ್ತಿದ್ದಾರೆ. ಕೊಹ್ಲಿ ಬ್ರಾಂಡ್ ರಾಯಭಾರಿಯಾಗಿರುವ ಇತರ ಬ್ರಾಂಡ್‌ಗಳಲ್ಲಿ ನೆಸ್ಲೆ, ರೀಬಾಕ್, ಮಿಂತ್ರಾ, ಟಿಸ್ಸಾಟ್, ಬೂಸ್ಟ್, ಹೆಡ್ & ಶೋಲ್ಡರ್ಸ್, ಪೆಪ್ಸಿ ಮತ್ತು ಇನ್ನೂ ಹೆಚ್ಚಿನವು ಸೇರಿವೆ.

ಉದ್ಯಮಿಯಾಗಿ ಕೊಹ್ಲಿ

ಕೊಹ್ಲಿ ಕೇವಲ ಕ್ರಿಕೆಟಿಗ ಮಾತ್ರವಲ್ಲ ಉದ್ಯಮಿಯು ಕೂಡ ಹೌದು. ಪೂಮಾ ಸಹಯೋಗದೊಂದಿಗೆ, ಜೀವನಶೈಲಿ ಉಡುಪುಗಳು, ಸುಗಂಧ ದ್ರವ್ಯಗಳು ಮತ್ತು ಒನ್8 ಕಮ್ಯೂನ್ ಕೆಫೆ ಸರಪಳಿಯನ್ನು ಒಳಗೊಂಡಿರುವ ಒನ್8 ನಲ್ಲಿ ಹೂಡಿಕೆ ಮಾಡಿದ್ದಾರೆ. ಇದಲ್ಲದೆ, ಕೊಹ್ಲಿ ಯುವ ಕೇಂದ್ರಿತ ಫ್ಯಾಷನ್ ಲೇಬಲ್ - WROGN ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ಅವರು ನವದೆಹಲಿಯ ಚಿಸೆಲ್ ಫಿಟ್‌ನೆಸ್ ಎಂಬ ಜಿಮ್ ಸರಪಳಿ ಮತ್ತು ನುವಾ ಎಂಬ ಉತ್ತಮ ಊಟದ ರೆಸ್ಟೋರೆಂಟ್‌ನಲ್ಲಿ 90 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಕೊಹ್ಲಿ ಬ್ಲೂ ಟ್ರೈಬ್, ರೇಜ್ ಕಾಫಿ, ಡಿಜಿಟ್ ಇನ್ಶುರೆನ್ಸ್ ಮತ್ತು ಸ್ಪೋರ್ಟ್ ಕಾನ್ವೋ ಸೇರಿದಂತೆ ಸ್ಟಾರ್ಟ್ಅಪ್ ವ್ಯವಸ್ಥೆಯಲ್ಲಿಯೂ ಹೂಡಿಕೆ ಮಾಡಿದ್ದಾರೆ.

ಕೊಹ್ಲಿಯ ಕ್ರೀಡಾ ಮಾಲೀಕತ್ವ

ಕೊಹ್ಲಿ ಇಂಡಿಯನ್ ಸೂಪರ್ ಲೀಗ್‌ನ ಫ್ರಾಂಚೈಸಿ ಎಫ್‌ಸಿ ಗೋವಾ, ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ ಫ್ರಾಂಚೈಸಿ ಯುಎಇ ರಾಯಲ್ಸ್ ಮತ್ತು ಪ್ರೊ ಕುಸ್ತಿ ಲೀಗ್ ಫ್ರಾಂಚೈಸಿ ಬೆಂಗಳೂರು ಯೋಧಾಸ್‌ನಲ್ಲಿ ಪಾಲನ್ನು ಹೊಂದಿದ್ದಾರೆ.

ಕೊಹ್ಲಿಯ ಐಷಾರಾಮಿ ನಿವಾಸಗಳು ಮತ್ತು ಕಾರುಗಳು

ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಗುರುಗಾಂವ್‌ನಲ್ಲಿ 10,000 ಚದರ ಅಡಿ ವಿಸ್ತೀರ್ಣದ ಮಹಲು ಹೊಂದಿದ್ದು, ಇದರ ಮೌಲ್ಯ 80 ಕೋಟಿ ರೂಪಾಯಿ. ಇದು ಖಾಸಗಿ ಆರ್ಟ್ ಗ್ಯಾಲರಿ, ಪೂಲ್ ಮತ್ತು ಬಾರ್ ಅನ್ನು ಒಳಗೊಂಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಈ ದಂಪತಿಯ ಎರಡನೇ ಐಷಾರಾಮಿ ನಿವಾಸ ಮುಂಬೈನಲ್ಲಿದೆ. 7,000 ಚದರ ಅಡಿ ವಿಸ್ತೀರ್ಣದ ಸಮುದ್ರಕ್ಕೆ ಎದುರಾಗಿರುವ ಈ ಅಪಾರ್ಟ್‌ಮೆಂಟ್ 34 ಕೋಟಿ ಮೌಲ್ಯದ್ದಾಗಿದ್ದು, ಭವ್ಯವಾದ ಒಳಾಂಗಣಗಳು ಮತ್ತು ಐಷಾರಾಮಿ ಈಜುಕೊಳವನ್ನು ಹೊಂದಿದೆ. ಇತರ ವಿಷಯಗಳ ಜೊತೆಗೆ, ಸ್ಟಾರ್​ ದಂಪತಿ ಆಡಿ, ಬೆಂಟ್ಲಿ ಮತ್ತು ಮರ್ಸಿಡಿಸ್ ಸೇರಿದಂತೆ ಉನ್ನತ ದರ್ಜೆಯ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ.

ಕೊಹ್ಲಿ ಭಾವುಕ ವಿದಾಯ

ಇಂದು ನಿವೃತ್ತಿ ಘೋಷಣೆ ಮಾಡಿದ ಕೊಹ್ಲಿ, ಇನ್​ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಕರೆದೊಯ್ಯುವ ಪ್ರಯಾಣವನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನಾನು ಜೀವನಪರ್ಯಂತ ನನ್ನೊಂದಿಗೆ ತೆಗೆದುಕೊಂಡು ಹೋಗಬಹುದಾದ ಪಾಠಗಳನ್ನು ಕಲಿಸಿತು.

ಬಿಳಿ ಉಡುಪಿನಲ್ಲಿ ಆಡುವುದೆಂದರೆ ಅದೊಂದು ರೀತಿಯಲ್ಲಿ ಆಳವಾದ ವೈಯಕ್ತಿಕ ಬಂಧವಿದೆ. ಶಾಂತವಾದ ಜಂಜಾಟ, ದೀರ್ಘಾವಧಿ ಹಾಗೂ ಯಾರೂ ನೋಡದ ಆದರೆ ಶಾಶ್ವತವಾಗಿ ನಿಮ್ಮೊಂದಿಗೆ ಉಳಿಯುವ ಸಣ್ಣ ಕ್ಷಣಗಳು ಈ ಸ್ವರೂಪದಲ್ಲಿವೆ. ನಾನು ಈ ಸ್ವರೂಪದಿಂದ ದೂರ ಸರಿಯುವುದು ಸುಲಭವಲ್ಲ ಅನಿಸುತ್ತಿತ್ತು. ಆದರೆ, ಇದು ಸರಿಯಾದ ನಿರ್ಧಾರ ಅನಿಸುತ್ತದೆ. ನಾನು ನನ್ನಲ್ಲಿದ್ದ ಎಲ್ಲವನ್ನೂ ಈ ಸ್ವರೂಪಕ್ಕೆ ನೀಡಿದ್ದೇನೆ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಟೆಸ್ಟ್​ ಕ್ರಿಕೆಟ್ ನನಗೆ ಹಿಂತಿರುಗಿಸಿದೆ. ಈ ಟೆಸ್ಟ್​ ಸ್ವರೂಪಕ್ಕಾಗಿ ಹಾಗೂ ನನ್ನೊಂದಿಗೆ ಮೈದಾನ ಹಂಚಿಕೊಂಡ ಜನರಿಗೂ ಮತ್ತು ಈ ಪ್ರಯಾಣದಲ್ಲಿ ನನ್ನೊಂದಿಗೆ ಸಾಗಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಕೃತಜ್ಞತೆ ಸಲ್ಲಿಸುತ್ತಾ ತುಂಬಿದ ಹೃದಯದಿಂದ ಹೊರಡುತ್ತಿದ್ದೇನೆ. ನನ್ನ ಟೆಸ್ಟ್ ವೃತ್ತಿಜೀವನವನ್ನು ನಾನು ಯಾವಾಗಲೂ ನಗುವಿನೊಂದಿಗೆ ನೆನಪಿಸಿಕೊಳ್ಳುತ್ತೇನೆ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ವಿರಾಟ್​ ಕೊಹ್ಲಿ ಭಾವುಕ ವಿದಾಯ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net