India : ಕಳೆದ ತಿಂಗಳ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದಲ್ಲಿ ಗಡಿ ನಿಯಂತ್ರಣ ರೇಖೆಯಿಂದಾಚೆಗಿನ ಉಲ್ಬಣದ ನಂತರ ಭಾರತವು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮತ್ತು ಮಿಲಿಟರಿಯಾಗಿ ಸರಿಯಾಗಿ ಬುದ್ಧಿ ಕಲಿಸಿತು ಎಂದು ಪೆಂಟಗನ್‌ನ ಮಾಜಿ ಅಧಿಕಾರಿ ಮತ್ತು ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಹೋದ್ಯೋಗಿ ಮೈಕೆಲ್ ರೂಬಿನ್ ಹೇಳಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೂಬಿನ್, ಆಪರೇಷನ್ ಸಿಂಧೂರ ಎಂದು ಕರೆಯಲ್ಪಡುವ ಭಾರತದ ತ್ವರಿತ ಮತ್ತು ನಿಖರವಾದ ಮಿಲಿಟರಿ ಪ್ರತೀಕಾರದ ಮೂಲಕ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡದ ಬಗ್ಗೆ ಜಾಗತಿಕ ಗಮನವನ್ನು ಸೆಳೆದಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಪಹಲ್ಗಾಮ್ ದಾಳಿಯ ಪ್ರತೀಕಾರ ವಿಚಾರದಲ್ಲಿ ಭಾರತವು ರಾಜತಾಂತ್ರಿಕವಾಗಿ ಮತ್ತು ಮಿಲಿಟರಿಯಾಗಿ ಗೆದ್ದಿತು ಎಂದು ರೂಬಿನ್ ಹೇಳಿದರು. ಭಾರತವು ರಾಜತಾಂತ್ರಿಕವಾಗಿ ಗೆದ್ದ ಕಾರಣ, ಈಗ ಎಲ್ಲರ ಗಮನವು ಪಾಕಿಸ್ತಾನದ ಭಯೋತ್ಪಾದಕ ಪ್ರಾಯೋಜಕತ್ವದ ಮೇಲೆ ಇದೆ ಎಂದು ತಿಳಿಸಿದರು.
ಅಂದಹಾಗೆ, ಮೇ 7 ರಂದು, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ದಾದ್ಯಂತ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿಗಳನ್ನು ನಡೆಸಿತು. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟರು. ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಈ ದಾಳಿಗಳನ್ನು ನಡೆಸಿತು.
ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನವು ಕೂಡ ಭಾರತದ ಮೇಲೆ ದಾಳಿ ಮಾಡಿತು. ಆದರೆ, ಅಷ್ಟೇನೂ ಪರಿಣಾಮ ಬೀರಲಿಲ್ಲ. ಆದರೆ, ಭಾರತವು ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿತು.
ಈ ಒಂದು ಕಾರ್ಯಾಚರಣೆಯು ಪಾಕಿಸ್ತಾನದ ಮಿಲಿಟರಿ ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಿನ ಸಂಪರ್ಕವನ್ನು ಹೇಗೆ ಗುರುತಿಸಿತು ಎಂಬುದನ್ನು ರೂಬಿನ್ ಒತ್ತಿ ಹೇಳಿದ್ದಾರೆ. ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಸಮವಸ್ತ್ರದಲ್ಲಿ ಭಾಗವಹಿಸಿದ್ದೇ ಭಯೋತ್ಪಾದಕ ಮತ್ತು ಐಎಸ್‌ಐ ಹಾಗೂ ಪಾಕಿಸ್ತಾನಿ ಸಶಸ್ತ್ರ ಪಡೆಗಳ ಸದಸ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು. ಪಾಕಿಸ್ತಾನವು ತನ್ನದೇ ಆದ ವ್ಯವಸ್ಥೆಯಿಂದ ಕೊಳೆಯನ್ನು ಹೊರತೆಗೆಯಬೇಕೆಂದು ಜಗತ್ತು ಇನ್ಮುಂದೆ ಒತ್ತಾಯಿಸಲಿದೆ ಎಂದರು.
ಇದನ್ನೂ ಓದಿ: ಇವರೇ ನೋಡಿ ಬಾಕಿ ಪಂದ್ಯಗಳಿಗೆ ಮಿಸ್ ಆಗುವ ವಿದೇಶಿ ಆಟಗಾರರು…ಆರ್ಸಿಬಿಗೂ ಬಿಗ್ ಶಾಕ್! IPL 2025
ಸದ್ಯ ಮಿಲಿಟರಿ ದೃಷ್ಟಿಯಿಂದ, ಪಾಕಿಸ್ತಾನ ತೀವ್ರ ಆಘಾತಕ್ಕೆ ಒಳಗಾಗಿದೆ. ಭಾರತದೊಂದಿಗೆ ಪಾಕಿಸ್ತಾನ ಪ್ರತಿಯೊಂದು ಯುದ್ಧವನ್ನು ಪ್ರಾರಂಭಿಸಿದೆ. ಆದರೆ, ಆ ಯುದ್ಧದಲ್ಲಿ ನಾವು ಹೇಗೋ ಗೆಲುವು ಸಾಧಿಸಿದ್ದೀವಿ ಅಂತ ಇನ್ನೂ ಮನವರಿಕೆ ಮಾಡಿಕೊಳ್ಳುತ್ತಲೇ ಇದೆ. ಇದೀಗ ಈ 4 ದಿನಗಳ ಯುದ್ಧವನ್ನು ಗೆದ್ದಿದ್ದೇನೆ ಎಂದು ಸ್ವತಃ ಮನವರಿಕೆ ಮಾಡಿಕೊಳ್ಳುವುದು ಪಾಕಿಸ್ತಾನಕ್ಕೆ ತುಂಬಾ ಕಷ್ಟಕರವಾಗಿರುತ್ತದೆ ಎನ್ನುವ ಮೂಲಕ ರೂಬಿನ್ ಪಾಕ್ ಕಾಲೆಳೆದರು.
ಪಾಕಿಸ್ತಾನದ ಮಿಲಿಟರಿ ಪ್ರತಿಕ್ರಿಯೆಯನ್ನು ಅಸ್ತವ್ಯಸ್ತ ಮತ್ತು ನಿಷ್ಪರಿಣಾಮಕಾರಿ ಎಂದು ರೂಬಿನ್ ಜರಿದರು. ಪಾಕ್ ಸರ್ಕಾರ ಕದನ ವಿರಾಮಕ್ಕಾಗಿ, ಹೆದರಿದ ನಾಯಿ ತನ್ನ ಕಾಲುಗಳ ನಡುವೆ ಬಾಲವನ್ನು ಮುದುರಿದಂತೆ ಓಡಿತು ಎಂದರು. ಭಾರತದ ಮೇಲೆ ಪಾಕಿಸ್ತಾನಿ ಮಿಲಿಟರಿ ಯಾವುದೇ ರೀತಿಯಲ್ಲಿ ಪ್ರಭಾವ ಬೀರಲು ಸಾಧ್ಯವಿಲ್ಲ. ಅವರು ಸೋತರು ಮಾತ್ರವಲ್ಲ, ತುಂಬಾ ಕೆಟ್ಟದಾಗಿ ಸೋತರು ಎಂದು ಹೇಳಿದರು.
ಭಾರತ ತೆಗೆದುಕೊಂಡ ಕ್ರಮಗಳು ಆಕ್ರಮಣಶೀಲತೆಗೆ ಸಮರ್ಥನೀಯ ಉತ್ತರವಾಗಿದೆ. ಇದೇನು ಭಾರತ ಬಯಸಿದ ಸಂಘರ್ಷವಲ್ಲ. ಇದು ಭಾರತದ ಮೇಲೆ ಹೇರಲಾದ ಸಂಘರ್ಷವಾಗಿತ್ತು. ಪ್ರತಿಯೊಂದು ದೇಶಕ್ಕೂ ತನ್ನ ನಾಗರಿಕರನ್ನು ರಕ್ಷಿಸುವ ಹಕ್ಕಿದೆ. ಅಂತಿಮವಾಗಿ, ಕೆಂಪು ರೇಖೆಯನ್ನು ಎಳೆಯುವುದು ಮತ್ತು ಇಲ್ಲ ಎಂದು ಹೇಳುವುದು ಭಾರತದ ಕೆಲಸ, ನಮ್ಮ ಗಡಿಯುದ್ದಕ್ಕೂ ಬರುವ ಭಯೋತ್ಪಾದಕ ದಾಳಿಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ರೂಬಿನ್, ಭಾರತದ ಪರ ಬ್ಯಾಟ್ ಬೀಸಿದರು. (ಏಜೆನ್ಸೀಸ್)
ನೀವು ಮಾಡುವ ಈ ಒಂದು ತಪ್ಪಿನಿಂದ ಶಾರ್ಟ್ ಸರ್ಕ್ಯೂಟ್ ಆಗಬಹುದು ಎಚ್ಚರ! ತಪ್ಪಿಸಲು ಏನು ಮಾಡಬೇಕು? Short Circuit
ಇದು ಆರ್ಸಿಬಿ ಅಭಿಮಾನಿಗಳು ಖುಷಿ ಪಡುವ ಸುದ್ದಿ… ಆತ ಮರಳಿ ಬಂದಿದ್ದಾನೆ ಮತ್ತೆ ಘರ್ಜಿಸಲು! RCB