ಮೈದಾನದಲ್ಲೇ ಮಗುವಿನಂತೆ ಕಣ್ಣೀರಾಕಿದ ಕೊಹ್ಲಿ: ಬೆಂಗಳೂರು ದತ್ತು ಪುತ್ರನ ಭಾವುಕ ವಿಡಿಯೋ ವೈರಲ್​! Virat Kohli

Virat Kohli
Published on

Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೊನೆಗೂ ಐಪಿಎಲ್ ವಿಜೇತ ತಂಡದ ಪಟ್ಟಿಗೆ ಸೇರಿದೆ. ಮೊದಲ ಆವೃತ್ತಿಯಿಂದಲೂ ಕಪ್‌ಗಾಗಿ ಕಾಯುತ್ತಿದ್ದ ಆರ್‌ಸಿಬಿ, 18 ವರ್ಷಗಳ ಬಳಿಕ ಚಾಂಪಿಯನ್ ಆಗಿದೆ. ಮಂಗಳವಾರ (ಜೂನ್​ 03) ಅಹಮದಾಬಾದ್‌ನಲ್ಲಿ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿತು.

ತಮ್ಮ ಬಹುನಿರೀಕ್ಷಿತ ಕನಸು ನನಸಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಭಾವುಕರಾದರು. ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವು ಖಚಿತವಾದ ಕ್ಷಣಗಳಲ್ಲಿ, ಕೊಹ್ಲಿ ಅಳುವನ್ನು ತಡೆಯಲಾಗಲಿಲ್ಲ. ಒಂದು ಬದಿಯಲ್ಲಿ ಫೀಲ್ಡಿಂಗ್ ಮಾಡುವಾಗ, ತಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಕೊನೆಯ ಚೆಂಡಿನ ನಂತರ, ಮೊಣಕಾಲುಗಳ ಮೇಲೆ ಕುಳಿತು ಮುಖದ ಮೇಲೆ ಕೈಗಳನ್ನು ಹಾಕಿಕೊಂಡು ಅಳುತ್ತಿದ್ದರು. ಆ ಸಮಯದಲ್ಲಿ, ಆರ್‌ಸಿಬಿ ಆಟಗಾರರು ಕೊಹ್ಲಿಯನ್ನು ಸುತ್ತುವರೆದು ಅಭಿನಂದಿಸಿದರು. ನಂತರ, ಕಿಂಗ್ ಆಟಗಾರರೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಂಡರು.

ವಿರಾಟ್ ಅವರ ಭಾವನಾತ್ಮಕ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲ ಅಭಿಮಾನಿಗಳು ಕೊಹ್ಲಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮತ್ತೊಂದೆಡೆ, ಪಂದ್ಯದ ಗೆಲುವಿನ ನಂತರ, ಅಭಿಮಾನಿಗಳ ಕಣ್ಣುಗಳಲ್ಲಿ ನೀರು ತುಂಬಿತು. ಮೈದಾನದಲ್ಲಿ ಸಾಕಷ್ಟು ಶಬ್ದ, ಶಿಳ್ಳೆ ಮತ್ತು ಕೂಗಾಟ ಕೇಳಿಬಂದಿತ್ತು. ಕೊಹ್ಲಿ ಘೋಷಣೆಗಳಿಂದ ಇಡೀ ನರೇಂದ್ರ ಮೋದಿ ಕ್ರೀಡಾಂಗಣ ನಡುಗಿತು.

ಅಭಿಮಾನಿಗಳು ಮಾತ್ರವಲ್ಲದೆ, ಕ್ರಿಕೆಟ್ ದಂತಕಥೆಗಳಾದ ಮಾಜಿ ಆರ್‌ಸಿಬಿ ಆಟಗಾರರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಕೂಡ ಸಂತೋಷಪಟ್ಟರು. ಮಾಜಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಕೂಡ ಫೈನಲ್​ ಪಂದ್ಯವನ್ನು ಆನಂದಿಸಿದರು. ಅವರು ಆರ್​ಸಿಬಿ ಬೆಂಬಲ ನೀಡಿದರು.

ಪಂದ್ಯದ ವಿಚಾರಕ್ಕೆ ಬಂದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ (ಜೂನ್​ 03) ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ಕೈಲ್ ಜೇಮಿಸನ್ (48ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (40ಕ್ಕೆ 3) ಬಿಗಿ ದಾಳಿಯ ನಡುವೆಯೂ ಅನುಭವಿ ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಸಹಿತ ಇತರ ಬ್ಯಾಟರ್​ಗಳ ಕೊಡುಗೆಯಿಂದ 9 ವಿಕೆಟ್​ಗೆ 190 ರನ್​ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶಶಾಂಕ್ ಸಿಂಗ್ (61*ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ 7 ವಿಕೆಟ್​ಗೆ 184 ರನ್​ಗಳಿಸಲಷ್ಟೇ ಶಕ್ತಗೊಂಡಿತು.

ಕೃನಾಲ್ ಸ್ಪಿನ್ ಕಡಿವಾಣ

ಸವಾಲಿನ ಮೊತ್ತದ ಚೇಸಿಂಗ್​ಗೆ ಇಳಿದ ಪಂಜಾಬ್​ಗೆ ಪ್ರಿಯಾಂಶ್ (24)-ಪ್ರಭ್​ಸಿಮ್ರನ್ ಸಿಂಗ್ (26) ಮೊದಲ ವಿಕೆಟ್​ಗೆ 30 ಎಸೆತಗಳಲ್ಲಿ 43 ರನ್​ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಜೋಶ್ ಇಂಗ್ಲಿಸ್ (39) ಚೇಸಿಂಗ್​ಗೆ ಬಲ ತುಂಬಿದರು. ಇಂಗ್ಲಿಸ್ ವಿಕೆಟ್ ಪಡೆದ ಕೃನಾಲ್ (17ಕ್ಕೆ 2) ಪಂದ್ಯದ ಗತಿ ಬದಲಾಯಿಸಿದರು. 10ನೇ ಓವರ್​ನಲ್ಲಿ ರೊಮಾರಿಯೊ ಶೆಫರ್ಡ್, ನಾಯಕ ಶ್ರೇಯಸ್ ಅಯ್ಯರ್ (1) ವಿಕೆಟ್ ಪಡೆದ ಬಳಿಕ ಪಂದ್ಯ ತಿರುವು ಪಡೆಯಿತು. ಅನುಭವಿ ಭುವನೇಶ್ವರ್ (38ಕ್ಕೆ 2) 17ನೇ ಓವರ್​ನಲ್ಲಿ ವಧೇರ (15), ಸ್ಟೋಯಿನಿಸ್ (6) ವಿಕೆಟ್ ಪಡೆದು ಆರ್​ಸಿಬಿ ಹಾದಿ ಸುಗಮಗೊಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net