18ರ ನಂಟು ಖುಷಿಯ ಗಂಟು...ಈ ಸಲ ಕಪ್ ನಮ್ದು! ಇವರೇ ನೋಡಿ ಆರ್​ಸಿಬಿ ಗೆಲುವಿನ ರೂವಾರಿಗಳು... RCB

RCB
Published on

RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ ಪಟ್ಟದೊಂದಿಗೆ ಶೋಭಿತವಾಗಿದೆ. ಈ ಮೂಲಕ ಅಭಿಮಾನಿಗಳ 18 ವರ್ಷಗಳ ಪ್ರಶಸ್ತಿ ಗೆಲುವಿನ ಕನಸು ನನಸಾಗಿದ್ದು, ‘ಈ ಸಲ ಕಪ್ ನಮ್ದೇ’ ಎಂಬ ಘೋಷವಾಕ್ಯ ಕೊನೆಗೂ ನಿಜವಾಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸುದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಐಪಿಎಲ್ ಟ್ರೋಫಿಗೆ ಮುತ್ತಿಟ್ಟರು.

ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಆರ್​ಸಿಬಿ ತಂಡ ಅಮೋಘ ಬೌಲಿಂಗ್ ನಿರ್ವಹಣೆ ತೋರುವ ಮೂಲಕ 6 ರನ್​ಗಳಿಂದ ಗೆದ್ದು ಹೊಸ ಇತಿಹಾಸ ಬರೆಯಿತು. ರಜತ್ ಪಾಟೀದಾರ್ ಆರ್​ಸಿಬಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಮೊದಲ ನಾಯಕ ಎನಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ಕೈಲ್ ಜೇಮಿಸನ್ (48ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (40ಕ್ಕೆ 3) ಬಿಗಿ ದಾಳಿಯ ನಡುವೆಯೂ ಅನುಭವಿ ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಸಹಿತ ಇತರ ಬ್ಯಾಟರ್​ಗಳ ಕೊಡುಗೆಯಿಂದ 9 ವಿಕೆಟ್​ಗೆ 190 ರನ್​ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶಶಾಂಕ್ ಸಿಂಗ್ (61*ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ 7 ವಿಕೆಟ್​ಗೆ 184 ರನ್​ಗಳಿಸಲಷ್ಟೇ ಶಕ್ತಗೊಂಡಿತು.

ಕೃನಾಲ್ ಸ್ಪಿನ್ ಕಡಿವಾಣ

ಸವಾಲಿನ ಮೊತ್ತದ ಚೇಸಿಂಗ್​ಗೆ ಇಳಿದ ಪಂಜಾಬ್​ಗೆ ಪ್ರಿಯಾಂಶ್ (24)-ಪ್ರಭ್​ಸಿಮ್ರನ್ ಸಿಂಗ್ (26) ಮೊದಲ ವಿಕೆಟ್​ಗೆ 30 ಎಸೆತಗಳಲ್ಲಿ 43 ರನ್​ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಜೋಶ್ ಇಂಗ್ಲಿಸ್ (39) ಚೇಸಿಂಗ್​ಗೆ ಬಲ ತುಂಬಿದರು. ಇಂಗ್ಲಿಸ್ ವಿಕೆಟ್ ಪಡೆದ ಕೃನಾಲ್ (17ಕ್ಕೆ 2) ಪಂದ್ಯದ ಗತಿ ಬದಲಾಯಿಸಿದರು. 10ನೇ ಓವರ್​ನಲ್ಲಿ ರೊಮಾರಿಯೊ ಶೆಫರ್ಡ್, ನಾಯಕ ಶ್ರೇಯಸ್ ಅಯ್ಯರ್ (1) ವಿಕೆಟ್ ಪಡೆದ ಬಳಿಕ ಪಂದ್ಯ ತಿರುವು ಪಡೆಯಿತು. ಅನುಭವಿ ಭುವನೇಶ್ವರ್ (38ಕ್ಕೆ 2) 17ನೇ ಓವರ್​ನಲ್ಲಿ ವಧೇರ (15), ಸ್ಟೋಯಿನಿಸ್ (6) ವಿಕೆಟ್ ಪಡೆದು ಆರ್​ಸಿಬಿ ಹಾದಿ ಸುಗಮಗೊಳಿಸಿದರು.

ಕೊಹ್ಲಿ-ಮಯಾಂಕ್ ಆಸರೆ

ಟೂರ್ನಿಯುದ್ದಕ್ಕೂ ಉತ್ತಮ ಆರಂಭ ಒದಗಿಸಿದ ಫಿಲ್ ಸಾಲ್ಟ್ (16) ನಿರಾಸೆಗೊಳಿಸಿದರು. ಮೊದಲ ಓವರ್​ನಲ್ಲಿ 13 ರನ್​ಗಳಿಸಿ ಬಿರುಸಿನಾಟಕ್ಕಿಳಿದ ಸಾಲ್ಟ್, ಮರು ಓವರ್​ನಲ್ಲಿ ಜೇಮಿಸನ್ ಎಸೆತದಲ್ಲಿ ಶ್ರೇಯಸ್​ಗೆ ಕ್ಯಾಚಿತ್ತರು. ಆಗ ಕೊಹ್ಲಿ ಜತೆಗೂಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ (24) ತುಸು ಚೇತರಿಕೆ ನೀಡಿದರು. ಇವರಿಬ್ಬರು 2ನೇ ವಿಕೆಟ್​ಗೆ 28 ಎಸೆತಗಳಲ್ಲಿ 38 ರನ್ ಸೇರಿಸಿದರು. ಈ ಜತೆಯಾಟ ಮುರಿದ ಚಾಹಲ್ ಆರ್​ಸಿಬಿಗೆ ಮತ್ತೆ ಆಘಾತ ನೀಡಿದರು. ನಂತರ ಕೊಹ್ಲಿ ಜತೆಯಾದ ರಜತ್ ಪಾಟೀದಾರ್ (26) ರನ್​ಗಳಿಕೆಗೆ ಚುರುಕು ನೀಡಿದರು. ಕೊಹ್ಲಿ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ (25) ಮೊತ್ತ ಏರಿಸಿದರು. ಇವರಿಬ್ಬರು 4ನೇ ವಿಕೆಟ್​ಗೆ 24 ಎಸೆತಗಳಲ್ಲಿ 35 ರನ್ ಸೇರಿಸಿದರು. ಸ್ಲಾಗ್ ಓವರ್​ಗಳಲ್ಲಿ ಜಿತೇಶ್ ಶರ್ಮ (24), ರೊಮಾರಿಯೊ ಶೆಫರ್ಡ್ (17) ಕೊಡುಗೆ 180 ರನ್ ಗಡಿ ದಾಟಿಸಿತು.

ಆರ್​ಸಿಬಿ ಗೆಲುವಿನ ರೂವಾರಿಗಳು

ಐಪಿಎಲ್ ಟೂರ್ನಿ 2008ರಲ್ಲಿ ಜನ್ಮತಾಳಿದಾಗ ಬಿಸಿಸಿಐನಿಂದ ಉದ್ಯಮಿ ವಿಜಯ್ ಮಲ್ಯ ಬೆಂಗಳೂರಿನ ತಂಡವನ್ನು ಖರೀದಿಸಿದ್ದರು. ಅಂದಿನಿಂದ ಹಲವಾರು ಏಳುಬೀಳು, ಸೋಲು-ಗೆಲುವು, ಸಂಭ್ರಮ-ಹತಾಶೆಗಳನ್ನು ಕಂಡ ನಡುವೆ ಸದಾ ಅಭಿಮಾನಿಗಳ ಹೃದಯವನ್ನು ಗೆದ್ದುಕೊಂಡು ಬಂದಿರುವ ತಂಡ ಆರ್​ಸಿಬಿ. ಈ ಬಾರಿ ಕಪ್ ಕೂಡ ಗೆದ್ದು 18 ವರ್ಷಗಳ ಕನಸು ನನಸಾಗಿಸಿದೆ. ನಿರ್ವಹಣೆ, ಸಾಧನೆ, ಅರ್ಹತೆ ಆಧಾರದಲ್ಲಿ ನೋಡುವುದಾದರೆ ಆರ್​ಸಿಬಿ ಯಾವಾಗಲೋ ಕಪ್ ಗೆಲ್ಲಬೇಕಾಗಿತ್ತು. ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಯುವರಾಜ್ ಸಿಂಗ್, ಶೇನ್ ವ್ಯಾಟ್ಸನ್, ಜಹೀರ್ ಖಾನ್ ಮುಂತಾದ ದಿಗ್ಗಜ ಆಟಗಾರರು ಆರ್​ಸಿಬಿ ತಂಡಕ್ಕೆ ಈ ನಿಟ್ಟಿನಲ್ಲಿ ಬಲ ತುಂಬಿದ್ದರು. ಆದರೆ ಅದೃಷ್ಟದ ಸಾಥ್ ಸಿಕ್ಕಿರಲಿಲ್ಲ. ಈ ಬಾರಿ ಎಲ್ಲವೂ ಜತೆಯಾಗಿ ಕೂಡಿಬಂದಿತು ಮತ್ತು ಪ್ರಶಸ್ತಿ ಗೆಲುವಿನ ಸುಯೋಗ ಒಲಿದಿದೆ. ವಿರಾಟ್ ಕೊಹ್ಲಿ ಕೈ ಬಲಪಡಿಸಿ ಆರ್​ಸಿಬಿ ತಂಡವನ್ನು ಗೆಲುವಿನ ಮೆಟ್ಟಿಲು ಏರಿಸಿದ ಆ ಆಟಗಾರರ ಸಂಕ್ಷಿಪ್ತ ವಿವರ ಇಲ್ಲಿದೆ...

ವಿರಾಟ್ ಕೊಹ್ಲಿ

ಕಳೆದ 17 ವರ್ಷಗಳಂತೆ 18ನೇ ವರ್ಷವೂ ಕೊಹ್ಲಿ ಆರ್​ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಆಧಾರವಾದರು. ಅವರು ಈ ಬಾರಿ ಸಿಡಿಸಿದ ಎಲ್ಲ 8 ಅರ್ಧಶತಕಗಳೂ ಗೆಲುವು ತಂದುಕೊಟ್ಟಿವೆ. ಅವರ ಸ್ಟ್ರೈಕ್​ರೇಟ್ ಕೂಡ ಗಮನಾರ್ಹ ಪ್ರಗತಿ ಸಾಧಿಸಿದೆ. ಅಗ್ರ ಕ್ರಮಾಂಕದಲ್ಲಿ ಫಿಲ್ ಸಾಲ್ಟ್, ಪಡಿಕ್ಕಲ್ ಜತೆಗೆ ಅಮೋಘ ಜತೆಯಾಟವಾಡಿದರು.

ಪಂದ್ಯ: 15, ರನ್: 657

ರಜತ್ ಪಾಟೀದಾರ್

ನಾಯಕನಾಗಿ ಮಿಂಚುವ ಜತೆಗೆ ಬ್ಯಾಟಿಂಗ್​ನಲ್ಲೂ ರಜತ್ ಪಾಟೀದಾರ್ ಆರ್​ಸಿಬಿಗೆ ಬಲ ತುಂಬಿದರು. ಚೆಪಾಕ್​ನಲ್ಲಿ 17 ವರ್ಷ ಬಳಿಕ ಮತ್ತು ವಾಂಖೆಡೆಯಲ್ಲಿ 10 ವರ್ಷ ಬಳಿಕ ಕಂಡ ಪಂದ್ಯಗಳಲ್ಲಿ ಗೆಲುವಿನ ರೂವಾರಿ ಎನಿಸಿದರು. ನಾಯಕತ್ವದಲ್ಲೂ ಅನುಭವಿಯಂತೆಯೇ ಕಾರ್ಯನಿರ್ವಹಿಸಿದರು.

ಪಂದ್ಯ: 15, ರನ್: 312

ಯಶ್ ದಯಾಳ್

ಕಳೆದ ವರ್ಷ ಆರ್​ಸಿಬಿ ತಂಡದ ಪರ ಐಪಿಎಲ್​ನಲ್ಲಿ ಮರುಹುಟ್ಟು ಪಡೆದುಕೊಂಡಿದ್ದ ವೇಗಿ ಯಶ್ ದಯಾಳ್ ಈ ಸಲವೂ ಅದೇ ರೀತಿಯ ಉಪಯುಕ್ತ ಕೊಡುಗೆಗಳನ್ನು ನೀಡಿದರು. ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಧೋನಿ ವಿಕೆಟ್ ಕಬಳಿಸಿ ಆರ್​ಸಿಬಿಗೆ ಅಮೂಲ್ಯ ಗೆಲುವು ತಂದರು.

ಪಂದ್ಯ: 15, ವಿಕೆಟ್: 13

ಜೋಶ್ ಹ್ಯಾಸಲ್​ವುಡ್

ಭುಜ ನೋವಿನ ಸಮಸ್ಯೆಯ ನಡುವೆಯೂ ಆರ್​ಸಿಬಿ ಬೌಲಿಂಗ್ ವಿಭಾಗಕ್ಕೆ ಹೆಗಲು ಕೊಟ್ಟವರು ಜೋಶ್ ಹ್ಯಾಸಲ್​ವುಡ್. ಡೆತ್ ಓವರ್​ಗಳಲ್ಲಿ ಆರ್​ಸಿಬಿಗೆ ಹೆಚ್ಚಿನ ಬಲ ತುಂಬಿದರು. ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಏಕಾಂಗಿಯಾಗಿ ಗೆಲುವು ತಂದುಕೊಟ್ಟರು. ಮೊದಲ ಕ್ವಾಲಿಫೈಯರ್​ನಲ್ಲೂ ಅವರ ಮಾರಕ ದಾಳಿ ಪಂಜಾಬ್ ತಂಡವನ್ನು ಪಂಚರ್ ಮಾಡಿತ್ತು.

ಪಂದ್ಯ: 12, ವಿಕೆಟ್: 22

ಜಿತೇಶ್ ಶರ್ಮ

ವಿಕೆಟ್ ಹಿಂದೆ ಅಮೋಘ ನಿರ್ವಹಣೆ ತೋರಿದ್ದಲ್ಲದೆ, ಡಿಆರ್​ಎಸ್​ಅನ್ನು ಆರ್​ಸಿಬಿ ಸಮರ್ಥವಾಗಿ ಬಳಸಿಕೊಳ್ಳು ವಲ್ಲೂ ನೆರವಾದರು. ಹಂಗಾಮಿ ನಾಯಕತ್ವವನ್ನೂ ನಿರ್ವಹಿಸಿದರು. ಲಖನೌ ವಿರುದ್ಧದ ಕೊನೇ ಲೀಗ್ ಪಂದ್ಯದಲ್ಲಿ 33 ಎಸೆತಗಳಲ್ಲಿ 85 ರನ್ ಸಿಡಿಸಿ ಆರ್​ಸಿಬಿ ಮೊದಲ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯುವಂತೆ ಮಾಡಿದರು.

ಕೃನಾಲ್ ಪಾಂಡ್ಯ

ಆರ್​ಸಿಬಿ ತಂಡದ ಮೊದಲ ಪಂದ್ಯದಲ್ಲೇ ಗೆಲುವಿನ ರೂವಾರಿಯಾಗಿ ಉತ್ಸಾಹ ತುಂಬಿದವರು ಕೃನಾಲ್ ಪಾಂಡ್ಯ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಆರ್​ಸಿಬಿಗೆ ಅನುಭವದ ಬಲ ತುಂಬಿದರು. ಜತೆಗೆ ಬ್ಯಾಟಿಂಗ್​ನಲ್ಲೂ ಕೊಡುಗೆ ನೀಡಿದರು. ಅದರಲ್ಲೂ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿರುವ ಮೂಲಕ, ಆರಂಭಿಕ ಆಘಾತ ಕಂಡಿದ್ದ ಆರ್​ಸಿಬಿಗೆ ಆಧಾರವಾಗಿದ್ದರು.

ಪಂದ್ಯ: 15, ವಿಕೆಟ್: 17, ರನ್: 109

ರೊಮಾರಿಯೊ ಶೆಫರ್ಡ್

ಆರಂಭಿಕ ಪಂದ್ಯಗಳಿಗೆ ಕಡೆಗಣಿಸಲ್ಪಟ್ಟಿದ್ದ ವೆಸ್ಟ್ ಇಂಡೀಸ್ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ನಂತರ ಸಿಕ್ಕ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡು, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಉಪಯುಕ್ತ ಕೊಡುಗೆ ನೀಡಿದರು. ಸಿಎಸ್​ಕೆ ಎದುರು ಸ್ಪೋಟಕ ಅರ್ಧಶತಕ ಸಿಡಿಸಿ ಆರ್​ಸಿಬಿ ನಿರೀಕ್ಷೆಗೂ ಮೀರಿದ ಮೊತ್ತ ಪೇರಿಸಲು ನೆರವಾಗಿದ್ದರು.

ಪಂದ್ಯ: 8, ರನ್: 70, ವಿಕೆಟ್: 6

ಫಿಲ್ ಸಾಲ್ಟ್

ಫಾಫ್ ಡು ಪ್ಲೆಸಿಸ್ ಅವರಿಂದ ತೆರವಾಗಿದ್ದ ಆರಂಭಿಕನ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಫಿಲ್ ಸಾಲ್ಟ್. ಜತೆಗೆ ಅಗ್ರ ಕ್ರಮಾಂಕದಲ್ಲಿ ಕೊಹ್ಲಿ ಮೇಲಿನ ಭಾರ ವನ್ನೂ ಸಾಕಷ್ಟು ಇಳಿಸಿದರು. ಪವರ್​ಪ್ಲೇನಲ್ಲಿ ಹೆಚ್ಚು ಪವರ್​ಫುಲ್ ಆಟವಾಡಲು ನೆರವಾದರು. ಉದ್ಘಾಟನಾ ಮತ್ತು ಮೊದಲ ಕ್ವಾಲಿಫೈಯರ್​ನಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದರು.

ಪಂದ್ಯ: 13, ರನ್: 403

ಭುವನೇಶ್ವರ್ ಕುಮಾರ್

ಬರೋಬ್ಬರಿ 15 ವರ್ಷಗಳ ಬಳಿಕ ಆರ್​ಸಿಬಿ ತಂಡಕ್ಕೆ ಮರಳಿದ ವೇಗಿ ಭುವನೇಶ್ವರ್ ಕುಮಾರ್ ತನ್ನ ಮೂಲ ತಂಡಕ್ಕೆ ಅನುಭವದ ಧಾರೆ ಎರೆದರು. ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್ ಕಬಳಿಸುವ ಮೂಲಕ ಹ್ಯಾಸಲ್​ವುಡ್​ಗೆ ಸಮರ್ಥ ಬೆಂಬಲ ಒದಗಿಸಿದರು.

ಪಂದ್ಯ: 14, ವಿಕೆಟ್: 17

ಟಿಮ್ ಡೇವಿಡ್

ಸ್ಲಾಗ್ ಓವರ್​ಗಳಲ್ಲಿ ಆರ್​ಸಿಬಿ ಮೊತ್ತ ಏರಿಸುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದವರು ಟಿಮ್ ಡೇವಿಡ್. ಚೇಸಿಂಗ್​ನಲ್ಲೂ ಎದುರಿಸಿದ ಅಲ್ಪ ಎಸೆತಗಳಲ್ಲಿ ದಡ ಸೇರಿಸಲು ಶ್ರಮಿಸಿದರು. ಪಂಜಾಬ್ ವಿರುದ್ಧ ತವರಿನ ಪಂದ್ಯದಲ್ಲಿ ಆರ್​ಸಿಬಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದಾಗ ಮಾನ ಕಾಪಾಡಿದ್ದರು.

ಪಂದ್ಯ: 12, ರನ್: 187

ಸುಯಶ್ ಶರ್ಮ

ಅಲ್ಪ ಮಟ್ಟದ ಕೊಡುಗೆಗಳನ್ನು ನೀಡಿದ ನಡುವೆಯೂ ದೊಡ್ಡ ಮಟ್ಟದ ಪರಿಣಾಮಗಳನ್ನು ಬೀರಿದವರು ಸುಯಶ್ ಶರ್ಮ. ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್​ನ 18ನೇ ಓವರ್​ನಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟು ಗೆಲುವಿಗೆ ನೆರವಾದರು. ಮೊದಲ ಕ್ವಾಲಿಫೈಯರ್​ನಲ್ಲಿ 17 ರನ್​ಗಳಿಗೆ 3 ವಿಕೆಟ್ ಕಬಳಿಸಿ ಪಂಜಾಬ್​ಗೆ ಕಡಿವಾಣ ಹಾಕಿದರು.

ಪಂದ್ಯ: 14, ವಿಕೆಟ್: 8

ದೇವದತ್ ಪಡಿಕ್ಕಲ್

ಐಪಿಎಲ್​ಗೆ ಪದಾರ್ಪಣೆ ಮಾಡಿದ ತಂಡಕ್ಕೆ ಮತ್ತೆ ಮರಳಿದ ಕನ್ನಡಿಗ ದೇವದತ್ ಪಡಿಕ್ಕಲ್ ಹಿಂದಿನ ಲಯವನ್ನೂ ಕಂಡುಕೊಂಡರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿ 2 ಅರ್ಧಶತಕಗಳನ್ನು ಬಾರಿಸಿದರು. ಆದರೆ ಗಾಯದಿಂದಾಗಿ ಟೂರ್ನಿಯ ನಡುವೆ ಹೊರಬಿದ್ದರು.

ಪಂದ್ಯ: 10, ರನ್: 247

ಆರ್​ಸಿಬಿಗೆ 18ರ ವರ!

ಆರ್​ಸಿಬಿಗೆ 18ರ ಅದೃಷ್ಟ ಪ್ರಶಸ್ತಿ ಗೆದ್ದುಕೊಡುವಲ್ಲಿ ವರವಾಗಿದೆ. 18 ನಂಬರ್ ಜೆರ್ಸಿ ಧರಿಸುವ ವಿರಾಟ್ ಕೊಹ್ಲಿ ತಂಡದ ಸ್ಟಾರ್ ಆಟಗಾರನಾಗಿದ್ದರೆ, 18ನೇ ಆವೃತ್ತಿಯೂ ಪ್ರಶಸ್ತಿ ಬರ ನೀಗಿಸಿದೆ. 2025ರ ಜೂನ್ 3ರಂದು ಅಂದರೆ ಇಲ್ಲೂ 18 (3+6+2+0+2+5=18) ಆರ್​ಸಿಬಿಗೆ ವರದಾನವಾಗಿದೆ.

ಕೊಹ್ಲಿ ಆನಂದಬಾಷ್ಪ

ವಿರಾಟ್ ಕೊಹ್ಲಿ ಫೈನಲ್ ಪಂದ್ಯದ ಕೊನೇ 2 ಎಸೆತಗಳ ಬಳಿಕ ಆರ್​ಸಿಬಿ ತಂಡಕ್ಕೆ ಪ್ರಶಸ್ತಿ ಗೆಲುವು ಖಚಿತವಾಗುತ್ತಿದ್ದಂತೆ ಮೈದಾನದಲ್ಲೇ ಆನಂದಬಾಷ್ಪ ಸುರಿಸಿ, 18 ವರ್ಷಗಳ ಕಪ್ ಕನಸು ನನಸಾದ ಸಂಭ್ರಮ ಆಚರಿಸಿದರು. ಗೆಲುವಿನ ಬಳಿಕ ಆರ್​ಸಿಬಿ ತಂಡದ ಎಲ್ಲ ಆಟಗಾರರು ವಿರಾಟ್ ಕೊಹ್ಲಿ ಅವರನ್ನು ಬಿಗಿದಪ್ಪಿಕೊಂಡು ವಿಜಯೋತ್ಸವ ಆಚರಿಸಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕೂಡ ಅಪಾರ ಸಂಭ್ರಮ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net