ಬೆಂಗಳೂರು ನನ್ನ.... IPL​ ಟ್ರೋಫಿ ಗೆದ್ದ ಬೆನ್ನಲ್ಲೇ ಕೊಹ್ಲಿ ಹೇಳಿದ ಮಾತು ಕೇಳಿದ್ರೆ ಭಾವುಕರಾಗ್ತೀರಾ! Virat Kohli

Virat Kohli
Published on

Virat Kohli: ರಾಯಲ್​​ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಕನಸು ಕೊನೆಗೂ ನನಸಾಗಿದೆ. ದೀರ್ಘ ಕಾಯುವಿಕೆ ಮುಗಿದಿದೆ. 18ನೇ ಆವೃತ್ತಿಯ IPL ವಿಜೇತ ತಂಡವಾಗಿ ಆರ್​ಸಿಬಿ ಹೊರಹೊಮ್ಮಿದ್ದು, ತಮ್ಮ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಫೈನಲ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಆರ್​ಸಿಬಿ ರೋಚಕ ಗೆಲುವು ದಾಖಲಿಸಿ, ಈ ಇತಿಹಾಸ ಬರೆದಿದೆ.

ಪಂದ್ಯದ ನಂತರ ಆಸ್ಟ್ರೇಲಿಯಾ ದಿಗ್ಗಜ ಮ್ಯಾಥ್ಯೂ ಹೇಡನ್ ಜೊತೆ ಮಾತನಾಡಿದ ಕೊಹ್ಲಿ, ನನ್ನ ಯೌವನ, ನನ್ನ ಶ್ರೇಷ್ಠತೆ ಮತ್ತು ನನ್ನ ಅನುಭವ ಎಲ್ಲವನ್ನು ಈ ತಂಡಕ್ಕೆ ನೀಡಿದ್ದೇನೆ. ಇದು ನನಗೆ ತುಂಬಾ ಅರ್ಥಪೂರ್ಣವಾಗಿದೆ. ನಾನು ಹೇಳಿದಂತೆ, ನನ್ನ ಪ್ರತಿಯೊಂದು ಶಕ್ತಿಯನ್ನು ಈ ತಂಡಕ್ಕೆ ನೀಡಿದ್ದೇನೆ ಮತ್ತು ಅಂತಿಮವಾಗಿ ನಾವು ಐಪಿಎಲ್ ಗೆದ್ದಿದ್ದೇವೆ. ಇದು ಅದ್ಭುತ ಭಾವನೆ ಎಂದು ಕೊಹ್ಲಿ ಹೇಳಿದರು.

ಭಾರತೀಯ ತಂಡದೊಂದಿಗೆ ಗೆದ್ದ ಟ್ರೋಫಿಗಳೊಂದಿಗೆ ಐಪಿಎಲ್​ ಟ್ರೋಫಿ ಗೆಲುವಿನ ಅನುಭವವನ್ನು ಹೋಲಿಸಲು ಕೇಳಿದಾಗ, 18 ವರ್ಷಗಳಿಂದ ನಾನು ಈ ತಂಡಕ್ಕೆ ಎಲ್ಲವನ್ನೂ ನೀಡಿದ್ದೇನೆ. ಏನೇ ಇರಲಿ, ನಾನು ಈ ತಂಡಕ್ಕೆ ನಿಷ್ಠನಾಗಿದ್ದೇನೆ. ನಾನು ಅವರೊಂದಿಗೆ (ಅಭಿಮಾನಿಗಳು ಮತ್ತು ತಂಡ) ನಿಂತಿದ್ದೆ. ಅವರು ನನ್ನ ಬೆನ್ನಿಗೆ ನಿಂತರು. ನಾನು ಯಾವಾಗಲೂ ಅವರೊಂದಿಗೆ ಈ ಕಪ್​ ಗೆಲ್ಲುವ ಕನಸು ಕಂಡಿದ್ದೆ. ಬೇರೆಯವರೊಂದಿಗೆ ಗೆಲ್ಲುವುದಕ್ಕಿಂತ ಇದು ತುಂಬಾ ವಿಶೇಷವಾಗಿದೆ. ಏಕೆಂದರೆ ನನ್ನ ಹೃದಯ ಬೆಂಗಳೂರಿನೊಂದಿಗಿದೆ. ನನ್ನ ಆತ್ಮ ಬೆಂಗಳೂರಿನೊಂದಿಗಿದೆ ಮತ್ತು ನಾನು ಹೇಳಿದಂತೆ, ನಾನು ಐಪಿಎಲ್ ಆಡುವ ಕೊನೆಯ ದಿನದವರೆಗೂ ಆಡಲಿರುವ ತಂಡ ಇದು ಎಂದು ಕೊಹ್ಲಿ ಉತ್ತರಿಸಿದರು.

ಇಂತಹ ದಿನ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ನಾನು ಭಾವನೆಗಳಿಂದ ತುಂಬಿಹೋದೆ. ಇದು ನನಗೆ ತುಂಬಾ ಅರ್ಥಪೂರ್ಣವಾಗಿದೆ. ನಾನು ಹೇಳಿದಂತೆ, ನನ್ನ ಪ್ರತಿಯೊಂದು ಶಕ್ತಿಯನ್ನು ಈ ತಂಡಕ್ಕೆ ನೀಡಿದ್ದೇನೆ ಮತ್ತು ಅಂತಿಮವಾಗಿ ಐಪಿಎಲ್ ಗೆದ್ದಿದ್ದೇನೆ, ಇದು ಅದ್ಭುತ ಭಾವನೆ ಎಂದು ಕೊಹ್ಲಿ ಹೇಳಿದರು. ಅಲ್ಲದೆ, ಇಂಪ್ಯಾಕ್ಟ್​ ಆಟಗಾರನಾಗಿ ಆಡಲು ಬಯಸುವುದಿಲ್ಲ, ಮೈದಾನಕ್ಕೆ ಹೋಗಿ ಪ್ರಭಾವ ಬೀರುವುದು ತಮ್ಮ ಗುರಿ ಎಂದು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹೇಳಿದರು.

ಪಂದ್ಯದ ವಿಚಾರಕ್ಕೆ ಬಂದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ಕೈಲ್ ಜೇಮಿಸನ್ (48ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (40ಕ್ಕೆ 3) ಬಿಗಿ ದಾಳಿಯ ನಡುವೆಯೂ ಅನುಭವಿ ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಸಹಿತ ಇತರ ಬ್ಯಾಟರ್​ಗಳ ಕೊಡುಗೆಯಿಂದ 9 ವಿಕೆಟ್​ಗೆ 190 ರನ್​ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶಶಾಂಕ್ ಸಿಂಗ್ (61*ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ 7 ವಿಕೆಟ್​ಗೆ 184 ರನ್​ಗಳಿಸಲಷ್ಟೇ ಶಕ್ತಗೊಂಡಿತು.

ಕೃನಾಲ್ ಸ್ಪಿನ್ ಕಡಿವಾಣ

ಸವಾಲಿನ ಮೊತ್ತದ ಚೇಸಿಂಗ್​ಗೆ ಇಳಿದ ಪಂಜಾಬ್​ಗೆ ಪ್ರಿಯಾಂಶ್ (24)-ಪ್ರಭ್​ಸಿಮ್ರನ್ ಸಿಂಗ್ (26) ಮೊದಲ ವಿಕೆಟ್​ಗೆ 30 ಎಸೆತಗಳಲ್ಲಿ 43 ರನ್​ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಜೋಶ್ ಇಂಗ್ಲಿಸ್ (39) ಚೇಸಿಂಗ್​ಗೆ ಬಲ ತುಂಬಿದರು. ಇಂಗ್ಲಿಸ್ ವಿಕೆಟ್ ಪಡೆದ ಕೃನಾಲ್ (17ಕ್ಕೆ 2) ಪಂದ್ಯದ ಗತಿ ಬದಲಾಯಿಸಿದರು. 10ನೇ ಓವರ್​ನಲ್ಲಿ ರೊಮಾರಿಯೊ ಶೆಫರ್ಡ್, ನಾಯಕ ಶ್ರೇಯಸ್ ಅಯ್ಯರ್ (1) ವಿಕೆಟ್ ಪಡೆದ ಬಳಿಕ ಪಂದ್ಯ ತಿರುವು ಪಡೆಯಿತು. ಅನುಭವಿ ಭುವನೇಶ್ವರ್ (38ಕ್ಕೆ 2) 17ನೇ ಓವರ್​ನಲ್ಲಿ ವಧೇರ (15), ಸ್ಟೋಯಿನಿಸ್ (6) ವಿಕೆಟ್ ಪಡೆದು ಆರ್​ಸಿಬಿ ಹಾದಿ ಸುಗಮಗೊಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net