Virat Kohli : ಜೂನ್ ತಿಂಗಳಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಪ್ರವಾಸಕ್ಕೆ ಭಾರತ ತಂಡದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಣೆ ಮಾಡಿರುವುದು ನಾನಾ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಇದೀಗ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಕೊಹ್ಲಿ ನಿವೃತ್ತಿ ತಮ್ಮನ್ನು ಆಶ್ಚರ್ಯಗೊಳಿಸಿದೆ ಎಂದು ಹೇಳಿದ್ದಾರೆ. ದೀರ್ಘ ಸ್ವರೂಪದಲ್ಲಿ ಇನ್ನೂ ಎರಡು ಮೂರು ವರ್ಷಗಳ ಕಾಲ ಆಡುವ ಸಾಮರ್ಥ್ಯ ಕೊಹ್ಲಿಗಿತ್ತು ಎಂದಿದ್ದಾರೆ.

ವಿರಾಟ್ ಕೊಹ್ಲಿ ಅವರು ನಿವೃತ್ತಿ ಘೋಷಿಸುವ ಒಂದು ವಾರದ ಮೊದಲೇ ನಾನು ಅವರೊಂದಿಗೆ ಮಾತನಾಡಿದ್ದೆ. ನಿವೃತ್ತಿ ನಿರ್ಧಾರದ ಸುಳಿವು ಆಗಲೇ ಸಿಕ್ಕಿತ್ತು. ಆ ಸಮಯದಲ್ಲಿ, ಅವರು ಆಟಕ್ಕೆ ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ನಿವೃತ್ತಿಯ ಬಗ್ಗೆ ಅವರಿಗೆ ಯಾವುದೇ ವಿಷಾದವಿಲ್ಲ ಎಂದು ರವಿಶಾಸ್ತ್ರಿ ಹೇಳಿದರು.
ಕೊಹ್ಲಿ ತೆಗೆದುಕೊಂಡ ನಿರ್ಧಾರವು ನನ್ನನ್ನು ಆಶ್ಚರ್ಯಗೊಳಿಸಿತು. ಏಕೆಂದರೆ ಅವರು ಇನ್ನೂ ಎರಡ್ಮೂರು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾರೆಂದು ನಾನು ಭಾವಿಸಿದ್ದೆ. ಅವರು ದೈಹಿಕವಾಗಿ ತುಂಬಾ ಫಿಟ್ ಆಗಿದ್ದರು. ಆದರೆ, ಮಾನಸಿಕವಾಗಿ ತುಂಬಾ ದಣಿದಿದ್ದರು. ಒಬ್ಬ ಆಟಗಾರ ತನ್ನ ಕೆಲಸ ಮುಗಿಸಿದ ನಂತರ ಶಾಂತನಾಗಿರುತ್ತಾನೆ. ಆದರೆ, ವಿರಾಟ್ ಹಾಗಲ್ಲ. ತಂಡ ಮೈದಾನಕ್ಕೆ ಬಂದಾಗ, ಅವನು ಎಲ್ಲ ವಿಕೆಟ್‌ಗಳನ್ನು ತೆಗೆದುಕೊಳ್ಳಲು, ಎಲ್ಲ ಕ್ಯಾಚ್‌ಗಳನ್ನು ತೆಗೆದುಕೊಳ್ಳಲು ಮತ್ತು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತಾನೆ. ಆಟದ ತೀವ್ರತೆ ಆ ಮಟ್ಟದಲ್ಲಿದ್ದಾಗ ನೀವು ವಿಶ್ರಾಂತಿ ಪಡೆಯದಿದ್ದರೆ, ನೀವು ಖಂಡಿತವಾಗಿಯೂ ಮಾನಸಿಕವಾಗಿ ದಣಿಯುತ್ತೀರಿ ಎಂದು ರವಿಶಾಸ್ತ್ರಿ ಹೇಳಿದರು.
ಕೊಹ್ಲಿ ಅವರಿಗೆ ಜಗತ್ತಿನಾದ್ಯಂತ ಸಾಕಷ್ಟು ಪ್ರಶಂಸೆಗಳು ಸಂದಿವೆ. ಕಳೆದ ದಶಕದಲ್ಲಿ ಯಾವುದೇ ಇತರ ಕ್ರಿಕೆಟಿಗರಿಗಿಂತ ಹೆಚ್ಚಿನ ಫಾಲೋವರ್ಸ್ ಅನ್ನು ಅವರು ಹೊಂದಿದ್ದಾರೆ. ಅದು ಆಸ್ಟ್ರೇಲಿಯಾ ಆಗಿರಲಿ, ದಕ್ಷಿಣ ಆಫ್ರಿಕಾ ಆಗಿರಲಿ, ತಮ್ಮ ಆಟವನ್ನು ವೀಕ್ಷಿಸಲು ಜನರನ್ನು ಸೆಳೆದಿದ್ದಾರೆ. ಕೊಹ್ಲಿ ಅವರು ಎಲ್ಲವನ್ನೂ ಮಾಡಿದ್ದಾರೆ. ಅವರು ತಂಡಗಳ ನಾಯಕತ್ವ ವಹಿಸಿದ್ದಾರೆ, ವಿಶ್ವಕಪ್ ಗೆದ್ದಿದ್ದಾರೆ, ಅವರು ಸ್ವತಃ 19 ವರ್ಷದೊಳಗಿನವರ ವಿಶ್ವಕಪ್ [2008] ಗೆದ್ದಿದ್ದಾರೆ. ನಾನು ಹೇಳುತ್ತಿರುವುದೇನೆಂದರೆ, ಅವರು ಸಾಧಿಸಲು ಏನೂ ಇಲ್ಲ ಎಂದು ರವಿಶಾಸ್ತ್ರಿ ಹೇಳಿದರು.
ಅಂದಹಾಗೆ, 14 ವರ್ಷಗಳ ವೃತ್ತಿ ಜೀವನದಲ್ಲಿ ಕೊಹ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 254 ರನ್. ಕೊಹ್ಲಿ, ಕೊನೆಯ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಭಾರತ ಪರ ಟೆಸ್ಟ್ ಪಂದ್ಯ ಆಡಿದರು. ವಿರಾಟ್ ಕೊಹ್ಲಿ ಓರ್ವ ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ಟೀಮ್ ಇಂಡಿಯಾಕ್ಕೆ ಅನೇಕ ಉತ್ತಮ ಗೆಲುವುಗಳನ್ನು ನೀಡಿದ್ದಾರೆ. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಟೆಸ್ಟ್ ಆಡುವ ರೀತಿ ಬದಲಾಯಿತು. ಕೊಹ್ಲಿ ಅವರು ದೀರ್ಘ ಸ್ವರೂಪದ ಕ್ರಿಕೆಟ್ಗೆ ತೀವ್ರತೆಯನ್ನು ತಂದರು. ಫಿಟ್‌ನೆಸ್ ಮುಖ್ಯ ಎಂದು ಹೇಳಿಕೊಟ್ಟರು. ಹಿಂದೆಂದೂ ಕಾಣದ ರೀತಿಯಲ್ಲಿ ವೇಗದ ಬೌಲಿಂಗ್ ಅನ್ನು ಉತ್ತೇಜಿಸಿದರು. ಟೀಮ್ ಇಂಡಿಯಾ ಜಗತ್ತಿನ ಎಲ್ಲಿಯಾದರೂ ಸ್ಪರ್ಧಿಸಬಹುದು ಮತ್ತು ಗೆಲ್ಲಬಹುದು ಎಂಬ ನಂಬಿಕೆಯನ್ನು ಕೊಹ್ಲಿ ಹುಟ್ಟುಹಾಕಿದರು.
ಭಾರತಕ್ಕೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಗೆಲುವುಗಳನ್ನು ನೀಡಿದ ನಾಯಕರಲ್ಲಿ ವಿರಾಟ್ ಕೊಹ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ನೇತೃತ್ವದಲ್ಲಿ ಭಾರತ 68 ಪಂದ್ಯಗಳಲ್ಲಿ 40 ಗೆಲುವುಗಳು ಕಂಡಿದ್ದರೆ, ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ 60 ಪಂದ್ಯಗಳಲ್ಲಿ 27 ಗೆಲುವುಗಳನ್ನು ಕಂಡಿದೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ 49 ಪಂದ್ಯಗಳಲ್ಲಿ ಭಾರತ 21 ಗೆಲುವುಗಳನ್ನು ಸಾಧಿಸಿದೆ.
ಕೊಹ್ಲಿ ಭಾವುಕ ವಿದಾಯ
ಇಂದು ನಿವೃತ್ತಿ ಘೋಷಣೆ ಮಾಡಿದ ಕೊಹ್ಲಿ, ಇನ್ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಕರೆದೊಯ್ಯುವ ಪ್ರಯಾಣವನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನಾನು ಜೀವನಪರ್ಯಂತ ನನ್ನೊಂದಿಗೆ ತೆಗೆದುಕೊಂಡು ಹೋಗಬಹುದಾದ ಪಾಠಗಳನ್ನು ಕಲಿಸಿತು.
ಬಿಳಿ ಉಡುಪಿನಲ್ಲಿ ಆಡುವುದೆಂದರೆ ಅದೊಂದು ರೀತಿಯಲ್ಲಿ ಆಳವಾದ ವೈಯಕ್ತಿಕ ಬಂಧವಿದೆ. ಶಾಂತವಾದ ಜಂಜಾಟ, ದೀರ್ಘಾವಧಿ ಹಾಗೂ ಯಾರೂ ನೋಡದ ಆದರೆ ಶಾಶ್ವತವಾಗಿ ನಿಮ್ಮೊಂದಿಗೆ ಉಳಿಯುವ ಸಣ್ಣ ಕ್ಷಣಗಳು ಈ ಸ್ವರೂಪದಲ್ಲಿವೆ. ನಾನು ಈ ಸ್ವರೂಪದಿಂದ ದೂರ ಸರಿಯುವುದು ಸುಲಭವಲ್ಲ ಅನಿಸುತ್ತಿತ್ತು. ಆದರೆ, ಇದು ಸರಿಯಾದ ನಿರ್ಧಾರ ಅನಿಸುತ್ತದೆ. ನಾನು ನನ್ನಲ್ಲಿದ್ದ ಎಲ್ಲವನ್ನೂ ಈ ಸ್ವರೂಪಕ್ಕೆ ನೀಡಿದ್ದೇನೆ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಟೆಸ್ಟ್ ಕ್ರಿಕೆಟ್ ನನಗೆ ಹಿಂತಿರುಗಿಸಿದೆ. ಈ ಟೆಸ್ಟ್ ಸ್ವರೂಪಕ್ಕಾಗಿ ಹಾಗೂ ನನ್ನೊಂದಿಗೆ ಮೈದಾನ ಹಂಚಿಕೊಂಡ ಜನರಿಗೂ ಮತ್ತು ಈ ಪ್ರಯಾಣದಲ್ಲಿ ನನ್ನೊಂದಿಗೆ ಸಾಗಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಕೃತಜ್ಞತೆ ಸಲ್ಲಿಸುತ್ತಾ ತುಂಬಿದ ಹೃದಯದಿಂದ ಹೊರಡುತ್ತಿದ್ದೇನೆ. ನನ್ನ ಟೆಸ್ಟ್ ವೃತ್ತಿಜೀವನವನ್ನು ನಾನು ಯಾವಾಗಲೂ ನಗುವಿನೊಂದಿಗೆ ನೆನಪಿಸಿಕೊಳ್ಳುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ಭಾವುಕ ವಿದಾಯ ಹೇಳಿದ್ದಾರೆ. (ಏಜೆನ್ಸೀಸ್)
ಈ 3 ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ಮೊಂಡುತನ ತುಂಬಾ ಜಾಸ್ತಿಯಂತೆ! ನಿಮ್ಮದೂ ಇದೇ ರಾಶಿನಾ? Zodiac Signs